ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕಿನ ವಂದಾಲ ಗ್ರಾಮದ ಮಡಿವಾಳಪ್ಪ ಹಂದಿಗನೂರ ಕುಟುಂಬಕ್ಕೆ ಸೇರಿದ ಕಬ್ಬು ವಿದ್ಯುತ್ ಅವಘಡದಿಂದ ಬೆಂಕಿಗೆ ಆಹುತಿಯಾಗಿದ್ದು ಸುಮಾರು ೨ ಎಕರೆ ಕಬ್ಬು ಸುಟ್ಟು ಭಸ್ಮವಾದ ಘಟನೆ ಬುಧವಾರ ಜರುಗಿದೆ.
ಗ್ರಾಮದ ಸರ್ವೇ ನಂ.೬೭/೨ಬಿ ರಲ್ಲಿ ೩ ಎಕರೆಯಲ್ಲಿ ಬೆಳೆಯಲಾದ ಕಬ್ಬು ಬೆಳೆಯಲ್ಲಿ ೨ ಎಕರೆ ವಿದ್ಯುತ್ ಅವಘಡದಿಂದ ಬೆಂಕಿ ತಗುಲಿ ಹಾನಿಗೀಡಾಗಿದೆ. ಕಬ್ಬು ಬೆಳೆಗೆ ಬೆಂಕಿ ತಗುಲಿದ ಸುದ್ದಿ ತಿಳಿದು ಸುತ್ತಮುತ್ತಲಿನ ಜಮೀನುಗಳ ರೈತರು ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಪ್ರಯತ್ನ ಫಲಿಸದೇ ಇದ್ದು ಕೊನೆಗೆ ತಾಳಿಕೋಟೆ ಪಟ್ಟಣದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿ ಉಳಿದ ಕಬ್ಬನ್ನು ಉಳಿಸಿದರು. ಈ ಕುರಿತು ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಬ್ಬು ಕಟಾವಿಗೆ ಬಂದು ಕಾರ್ಖಾನೆಗೆ ಸಾಗಿಸಬೇಕು ಎನ್ನುವಷ್ಟರಲ್ಲಿ ಈ ಘಟನೆ ಸಂಭವಿಸಿದೆ. ಹೀಗಾಗಿ ವರ್ಷದ ರೈತರ ಆದಾಯಕ್ಕೆ ಕೊಳ್ಳಿ ಇಟ್ಟಂತಾಗಿದೆ. ತಾಲ್ಲೂಕಿನಾದ್ಯಂತ ಕಳೆದ ಮೂರು ವರ್ಷದಿಂದ ವಿದ್ಯುತ್ ಅವಘಡದಿಂದ ಕಬ್ಬು ಬೆಳೆ ಸುಟ್ಟು ಹೋಗುತ್ತಿದೆ. ಇದರಿಂದ ರೈತರು ಕಂಗಲಾಗಿದ್ದಾರೆ. ಅದಕ್ಕಾಗಿ ತಕ್ಷಣವೇ ಪಟ್ಟಣದಲ್ಲಿ ಅಗ್ನಿಶಾಮಕ ದಳದ ಕಚೇರಿ ಆರಂಭಿಸಬೇಕು. ಜೊತೆಗೆ ರೈತರಿಗೆ ಆದ ನಷ್ಟವನ್ನು ತಕ್ಷಣವೇ ತುಂಬಿಕೊಡಬೇಕೆಂದು ತಾಲ್ಲೂಕಿನ ಕಬ್ಬು ಬೆಳೆಗಾರರಾದ ವಿಠ್ಠಲ ಯಂಕಂಚಿ, ಮಹಾದೇವಪ್ಪಗೌಡ ಬಿರಾದಾರ(ಬಮ್ಮನಜೋಗಿ), ಮಹಾಂತೇಶ ಹಿರ್ಲಾಕೊಂಡ(ಮಣೂರ), ಬಸವರಾಜ ಕಲ್ಲೂರ(ಮುಳಸಾವಳಗಿ), ಆನಂದ ಪರದೇಶಿಮಠ, ನಾಗೇಂದ್ರ ಇಂಡಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

