ಕಲಕೇರಿಯಲ್ಲಿ ಜಗದ್ಗುರುಗಳ ಸಾರೋಟ ಮೆರವಣಿಗೆ | ರಕ್ತದಾನ ಶಿಬಿರ | ಉಚಿತ ಆರೋಗ್ಯ ತಪಾಸಣಾ ಶಿಬಿರ
ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಗ್ರಾಮದ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಮಹಾ ಸಂಸ್ಥಾನಮಠ ಜಾಲಹಳ್ಳಿ-ಕಲಕೇರಿಯ ಪೀಠಾಧಿಪತಿಗಳಾದ ಶಿವಾಚಾರ್ಯ ರತ್ನ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರ ೭೦ನೇ ವರ್ಷದ ಹುಟ್ಟುಹಬ್ಬದ ವರ್ಧಂತಿ ಮಹೋತ್ಸವ ಹಾಗೂ ಅಭಿನಂದನಾ ಸಮಾರಂಭ ಸೇರಿದಂತೆ ವಿವಿದ ಧಾರ್ಮಿಕ ಕಾರ್ಯಕ್ರಮಗಳಿಗೆ ಜೆ ಜೆ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕಲಕೇರಿಯ ಗುರುಮರುಳಾರಾಧ್ಯರ ಹಿರೇಮಠದ ಸಿದ್ದರಾಮ ಶಿವಾಚಾರ್ಯರು ಓಂಕಾರ ದ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು.
ಪಂಚರಂಗ ಸಂಸ್ಥಾನ ಗದ್ದುಗೆ ಮಠದ ಶ್ರೀಗುರುಮಡಿವಾಳೇಶ್ವರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು.
ನಂತರ ಜಿಲ್ಲಾ ಏಡ್ಸ್ ಹಾಗೂ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಮಲ್ಲನಗೌಡ ಬಿರಾದಾರ ಅಧ್ಯಕ್ಷತೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು ೭೧ ಜನ ಸ್ವಯಂಪ್ರೇರಿತರಾಗಿ ಪೂಜ್ಯರ ೭೦ನೇ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಮಾಡಿದರು.
ವಿಜಯಪುರದ ಶ್ರೀಗೌರಿ ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ ಮತ್ತು ಸುಚಿರಾಯು ಆಸ್ಪತ್ರೆಯ ಡಾ. ಶಂಕರರಾವ್ ದೇಶಮುಖ, ಡಾ.ರಾಜೇಶ್ವರಿ ದೇಸಾಯಿ ಮತ್ತು ಡಾ.ಸಂತೋಷಕುಮಾರ ಗಲಗಲಿ ಇವರಿಂದ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಬಿಹೆಚ್‌ಇಓ ಶ್ರೀಹರಿ ಕುಲಕರ್ಣಿ, ಡಾ.ನವೀನ ಶಂಕರ, ಡಾ.ಗೀತಾ ಹೂಗಾರ, ಜಿಲ್ಲಾ ರಕ್ತ ನಿಧಿ ಕೇಂದ್ರದ ವೈಧ್ಯಾಧಿಕಾರಿ ಡಾ.ಸುಮಾ ಮಮದಾಪೂರ, ಕಲಕೇರಿ ಸಮುದಾಯ ಆರೋಗ್ಯ ಕೇಂದ್ರದ ಡಾ. ಬಸವರಾಜ ಅರಕೇರಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಾಯಂಕಾಲ ೪ ಗಂಟೆಗೆ ಎಲ್ಲ ಧಾರ್ಮಿಕ ಕಾರ್ಯಕ್ರಮಗಳ ಪಾವನ ಸನ್ನಿಧಾನವನ್ನು ವಹಿಸುವ ಕೇದಾರ ಪೀಠದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದಂಗಳವರನ್ನು ಗ್ರಾಮದ ಯಲ್ಲಾಲಿಂಗೇಶ್ವರ ದೇವಸ್ಥಾನದಿಂದ ಸಕಲ ಭಾಜಾ ಬಜಂತ್ರಿ ವಾದ್ಯಮೇಳ ಹಾಗೂ ಮಹಿಳೆಯರಿಂದ ಪೂರ್ಣಕುಂಭದ ಸ್ವಾಗತದೊಂದಿಗೆ ಸಾರೋಟದಲ್ಲಿ ಆಸೀನರಾದ ಜಗದ್ಗುರುಗಳನ್ನು, ಜಾಲಹಳ್ಳಿ ಪೂಜ್ಯರು ಸೇರಿದಂತೆ ಇತರ ಶ್ರೀಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಜೆ.ಜೆ. ಶಿಕ್ಷಣ ಸಂಸ್ಥೆಯಲ್ಲಿರುವ ಕಾರ್ಯಕ್ರಮದ ವೇದಿಕೆಗೆ ಬರಮಾಡಿಕೊಳ್ಳಲಾಯಿತು.

