ನೀಡದಿದ್ದರೆ ಬೃಹತ್ ಹೋರಾಟದ ಎಚ್ಚರಿಕೆ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪಂಚಮಸಾಲಿ ಲಿಂಗಾಯತ ಸಮುದಾಯದ ಶಾಂತಿಯುತ ಹೋರಾಟದ ಮೇಲೆ 2024ರ ಡಿಸೆಂಬರ್ 10ರಂದು ಬೆಳಗಾವಿಯಲ್ಲಿ ನಡೆದ ಪೊಲೀಸ್ ಲಾಠಿಚಾರ್ಜ್ ಘಟನೆಗೆ ರಾಜ್ಯ ಸರ್ಕಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಹಾಗೂ ವಿಳಂಬ ಮಾಡದೆ ಸಮುದಾಯಕ್ಕೆ 2A ಮೀಸಲಾತಿ ಕಲ್ಪಿಸಬೇಕು ಎಂದು ಭಾರತೀಯ ಜನತಾ ಪಾರ್ಟಿ ಜಿಲ್ಲಾ ಅಧ್ಯಕ್ಷರಾದ ಗುರುಲಿಂಗಪ್ಪ ಅಂಗಡಿ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ವಿಜಯಪುರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.
ಬೆಳಗಾವಿ ಅಧಿವೇಶನದ ವೇಳೆ ನಮ್ಮ ಸಮುದಾಯದವರು ಶಾಂತಿಯುತವಾಗಿ ಹಕ್ಕು ಮಂಡಿಸಲು ತೆರಳಿದ್ದಾಗ, ಪೊಲೀಸ್ ದೌರ್ಜನ್ಯ ನಡೆಸಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಈ ಘಟನೆಯು ಮಹಿಳೆಯರು, ವೃದ್ಧರು ಮತ್ತು ಯುವಕರ ಮನಸ್ಸಿನಲ್ಲಿ ಆಳವಾದ ಗಾಯ ಉಂಟುಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಹಿಂದಿನ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರಗಳು ಹೋರಾಟಗಳನ್ನು ಸಂಯಮದಿಂದ ಮತ್ತು ಸಂವಾದದ ಮೂಲಕ ನಿರ್ವಹಿಸಿದ್ದವು. ಆದರೆ, ಪ್ರಸ್ತುತ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದೆ. ಆಡಳಿತಾತ್ಮಕ ವೈಫಲ್ಯವನ್ನು ಮುಚ್ಚಿಕೊಳ್ಳಲು ಬಲಪ್ರಯೋಗದ ದಾರಿ ಹಿಡಿದಿದೆ ಎಂದು ಅವರು ಆರೋಪಿಸಿದರು.
2024ರ ಡಿಸೆಂಬರ್ 10ರ ಲಾಠಿಚಾರ್ಜ್ ಘಟನೆಗೆ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಪಂಚಮಸಾಲಿ ಲಿಂಗಾಯತ ಸಮುದಾಯದ 2A ಮೀಸಲಾತಿ ಬೇಡಿಕೆಯನ್ನು ಸಾಮಾಜಿಕ ನ್ಯಾಯದ ಅಡಿಯಲ್ಲಿ ತಕ್ಷಣ ಈಡೇರಿಸಬೇಕು. ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಸಮುದಾಯದ ವತಿಯಿಂದ ರಾಜ್ಯಾದ್ಯಂತ ಬೃಹತ್ ಮತ್ತು ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಮುಖಂಡರು ಹಾಗೂ ಸಮಾಜದ ನಾಯಕ ಸುರೇಶ ಬಿರಾದಾರ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಉಮೇಶ್ ಕಾರಜೋಳ, ರವಿ ಬಗಲಿ, ಮಳುಗೌಡ ಪಾಟೀಲ, ಈರಣ್ಣ ರಾವೂರ, ಭರತ ಕೋಳಿ, ಶ್ರೀಮತಿ ಭಾರತಿ ಬಯ್ಯಾರ, ಶ್ರೀಮತಿ ಸ್ವಪ್ನಾ ಕಣಮುಚನಾಳ, ರಾಜಕುಮಾರ ಸಗಾಯಿ, ಚಿದಾನಂದ ಚಲವಾದಿ, ಸಚಿನ ಬೊಂಬಳೆ, ಸಿದ್ದನಗೌಡ ಬಿರಾದಾರ, ಸಂದೀಪ ಪಾಟೀಲ, ಮಂಥನ ಗಾಯಕವಾಡ, ಅಶೋಕ ರಾಥೋಡ, ಗಣೇಶ ರಣ್ಣಿದೇವಿ, ವಿಜಯ ಹಿರೇಮಠ, ಚಿನ್ನು ಚಿನಗುಂಡಿ, ಸಂತೋಷ ನಿಂಬರಗಿ, ಶ್ರೀಕಾಂತ ಶಿಂಧೆ ಹಾಗೂ ವಿನಾಯಕ ದಹಿಂಡೆ ಉಪಸ್ಥಿತರಿದ್ದರು

