ನಂದರಗಿ ಗ್ರಾಮದ ಸಭೆಯಲ್ಲಿ ಕೃಷಿ ಉಪನಿರ್ದೇಶಕ ಚಂದ್ರಕಾಂತ ಪವಾರ ಮಾಹಿತಿ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಕೃಷಿ ಪರಿಸರದ ಮೂಲ ಸೆಲೆ ಭೌತಿಕ ರಾಸಾಯನಿಕ ಜೈವಿಕ ಗುಣಧರ್ಮಗಳಿಂದ ರಚಿತವಾದ ಮಣ್ಣು ವಿಜ್ಞಾನದ ವಿಸ್ಮಯವನ್ನು ಸಾರುವ ಜ್ಞಾನ ನಿರಂತರವಾಗಿರಲಿ ಎಂದು ಕೃಷಿ ಉಪನಿರ್ದೇಶಕ ಚಂದ್ರಕಾಂತ ಪವಾರ ಹೇಳಿದರು.
ತಾಲೂಕಿನ ನಂದರಗಿ ಗ್ರಾಮದಲ್ಲಿ ಸಿದ್ದಪ್ಪ ಸಾತಪ್ಪ ಪೂಜಾರಿ ಇವರ ಹೊಲದಲ್ಲಿ ರೈತರಿಗೆ ಅಮೃತ ರೈತ ಸಂಸ್ಥೆಗಳ ಯೋಜನೆಯಡಿ ರೈತ ಉತ್ಪಾದಕ ಸಂಸ್ಥೆ ಮತ್ತು ಕೃಷಿ ಇಲಾಖೆ ಸಹಯೋಗದೊಂದಿಗೆ ಮಣ್ಣು ನೀರು ಮತ್ತು ಸಸ್ಯ ಅಂಗಾಂಶ ಪರೀಕ್ಷೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.
ಅಸ್ವಾಭಾವಿಕ ದಬ್ಬಾಳಿಕೆ, ಅವೈಜ್ಞಾನಿಕ ನಿರ್ವಹಣೆ ಮತ್ತು ಹವಾಮಾನ ಬದಲಾವಣೆಯಿಂದಾಗಿ ಮಣ್ಣು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ವಿನಾಶದಕೊನೆಯ ಹಂತ ತಲುಪಿರುವದನ್ನು ಗಂಭೀರವಾಗಿ ಪರಿಗಣಿಸಿ ಮಣ್ಣು ಉಳಿಸುವ ಕಾರ್ಯಕ್ರಮದಿಂದ ಕೃಷಿ ಬಲಪಡಿಸಬೇಕಾಗಿದೆ ಎಂದರು.
ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ಮಾತನಾಡಿ, ಮಣ್ಣಿನ ರಚನೆ, ವರ್ಗೀಕರಣ, ಮತ್ತು ಫಲವತ್ತತೆ ಆಧಾರದ ಮೇಲೆ ನಿರ್ವಹಣಾ ಕ್ರಮ ಅಳವಡಿಸಿಕೊಳ್ಳುವ ಮೂಲಕ ಕೃಷಿಯನ್ನು ಸುಸ್ಥಿರ ಕಕ್ಷೆಯಲ್ಲಿರಿಸಿ ಭವಿಷ್ಯದ ಅಹಾರ ಭದ್ರತೆಭದ್ರ ಅಡಿಪಾಯ ಹಾಕಲು ಸಾದ್ಯ ಎಂದರು.
ಭೀರಪ್ಪ ಲೋಣಿ, ಖಾಶಿನಾಥ ಕುಂಬಾರ, ರುದ್ರಗೌಡ ಬಿರಾದಾರ, ಪ್ರಕಾಶ ಜೀರಂಕಲಗಿ, ಕಾಮಣ್ಣ ನಂದೂರ ಮತ್ತಿತ ರೈತರು ಇದ್ದರು.

