ಎಸ್‌ಸಿಪಿ/ ಟಿಎಸ್‌ಪಿ ಪ್ರಗತಿ ಪರಿಶಿಲನಾ ಸಭೆ | ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಎಸ್‌ಸಿಪಿ/ಟಿಎಸ್‌ಪಿ ಕಾಯ್ದೆಯಡಿ ನಿಗದಿತ ಅವಧಿಯಲ್ಲಿ ಯೋಜನೆಯ ಅನುದಾನ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರಕಿಸಲು ಸಂಬಂಧಿಸಿದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಹಾಗೂ ಎಸ್‌ಸಿಪಿ/ಟಿಎಸ್‌ಪಿ ಸಭೆಗೆ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಖುದ್ದು ಹಾಜರಿರಬೇಕು. ಯೋಜನೆಗೆ ನಿಗದಿ ಪಡಿಸಿದ ಅನುದಾನ ಲ್ಯಾಪ್ಸ್ ಆಗದಂತೆ ಕ್ರಿಯಾ ಯೋಜನೆ ರೂಪಿಸಿಕೊಂಡು ನಿಗದಿತ ಕಾಲಾವಧಿಯೊಳ್ಳಗೆ ಆರ್ಥಿಕ ಮತ್ತು ಭೌತಿಕ ಗುರಿ ಸಾಧಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶೇಷ ಘಟಕ ಯೋಜನೆಯ ಹಾಗೂ ಗಿರಿಜನ ಉಪಯೋಜನೆಯಡಿಯ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ವಲಯದ ಯೋಜನೆಗಳಡಿ ನಿಗದಿತ ಯೋಜನೆಗಳ ಪ್ರಗತಿ ಸಾಧಿಸಲು ಫಲಾನುಭವಿಗಳನ್ನು ಆಯ್ಕೆ ಮಾಡಿಕೊಂಡು, ಅತ್ಯಂತ ಜವಾಬ್ದಾರಿಯಿಂದ ಯೋಜನೆ ಅನುಷ್ಠಾನಗೊಳಿಸಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ವಿಳಂಬವಾಗದೇ ತಲುಪಿಸಬೇಕು. ಯಾವುದೇ ಕಾರಣಕ್ಕೂ ಬಿಡುಗಡೆಯಾದ ಅನುದಾನ ಬಾಕಿ ಉಳಿಸಿಕೊಳ್ಳದೇ ಕಾರ್ಯನಿರ್ವಹಿಸಲು ಅವರು ಸೂಚನೆ ನೀಡಿದರು.
ಎಸ್‌ಸಿಪಿ/ಟಿಎಸ್‌ಪಿಯು ಜನರ ಜೀವನ ಮಟ್ಟ ಉತ್ತಮಪಡಿಸಲು ವಿವಿಧ ಇಲಾಖೆಯಡಿ ನಿಗದಿಪಡಿಸಿದ ಯೋಜನೆಗಳನ್ನು ಅತ್ಯಂತ ಕಾಳಜಿ ಹೊಂದಿ, ಅರ್ಹರಿಗೆ ಯೋಜನೆಯ ಲಾಭ ದೊರಕಿಸಿಕೊಡಬೇಕು. ಪ್ರತಿ ಗ್ರಾಮದ ಎಸ್‌ಸಿ-ಎಸ್ಟಿ ಕಾಲೊನಿಗಳ ಮನೆಗಳಿಗೆ ಮೀಟರ್ ಅಳವಡಿಸುವ ಕುರಿತಾಗಿ ಕ್ಷೇತ್ರ ಭೇಟಿ ನೀಡಿ, ಪ್ರಗತಿ ವರದಿ ಛಾಯಾಚಿತ್ರ ಸಹಿತ ವಿವರ ಸಭೆಗೆ ಸಲ್ಲಿಸಿದ ಹೆಸ್ಕಾಂನ ಅಧಿಕ್ಷಕ ಅಭಿಯಂತರರಾದ ಸಿದ್ದಪ್ಪ ಬಿಂಜಗೇರಿ ಅವರನ್ನು ಅಭಿನಂದಿಸಲಾಯಿತು.
ಕಾರ್ಮಿಕ ಇಲಾಖೆಯಿಂದ ಬಾಲ ಕಾರ್ಮಿಕ ನಿಷೇಧ ಪದ್ಧತಿ ವಿವಿಧ ಇಲಾಖೆಯ ಸಮನ್ವಯದೊಂದಿಗೆ ನಿರ್ವಹಿಸಿ, ಈ ಕಾಯ್ದೆ ಬಗ್ಗೆ ವ್ಯಾಪಕ ಅರಿವು-ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿರುವುದರ ಕುರಿತು ಸಭೆಗೆ ಮಾಹಿತಿ ನೀಡಲಾಯಿತು.
ಪಶು ಸಂಗೋಪನಾ ಇಲಾಖೆಯ ಮೂಲಕ ಅನುಗ್ರಹ ಯೋಜನೆಯಡಿ ಪಜಾ/ಪಪಂ ೧೨೩ ಜನರಿಗೆ ಕುರಿ-ಮೇಕೆ ಆಕಸ್ಮಿಕ ಮರಣ ಹೊಂದಿರುವುದಕ್ಕೆ ೮.೫ಲಕ್ಷ ರೂ. ಖಾತೆಗೆ ಹಣ ಜಮಾ ಮಾಡಲಾಗಿದೆ. ಕಾಮಧೇನು ಆಪತ್ತು ನಿಧಿಯಿಂದ ಪ.ಜಾ ೫೭ ಜನರಿಗೆ ೫.೭೦ಲಕ್ಷ ರೂ. ಹಾಗೂ ಪಪಂ ೬ ಜನರಿಗೆ ೬೦ ಸಾವಿರ ರೂ. ಜಾನುವಾರು ಮರಣ ಸಂದರ್ಭದಲ್ಲಿ ಪಾವತಿಸಲಾಗಿದೆ. ಏಪ್ರಿಲ್‌ನಿಂದ ಅಕ್ಟೋಬರ್ ವರೆಗೆ ೯೧೧ ಪ.ಜಾ ಹಾಗೂ ೩೯೪ ಪಪಂ ಜನರಿಗೆ ಹಾಲು ಒಕ್ಕೂಟದಿಂದ ಹಾಲು ಪ್ರೋತ್ಸಾಹ ಧನ ಪಾವತಿಸಲಾಗಿದೆ ಎಂದು ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕರಾದ ಅಶೋಕ ಘೋಣಸಗಿ ಅವರು ಸಭೆಗೆ ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ ಅವರು ಸಭೆಗೆ ಮಾಹಿತಿ ನೀಡಿದರು.
ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳಿಗೆ ಹೊಲಿಗೆ ಸೇರಿದಂತೆ ಸಲಕರಣೆ ವಿತರಣೆಗೆ ಯಂತ್ರ ಗುರಿ ಅನುಸಾರ ಫಲಾನುವಿಗಳ ಆಯ್ಕೆ ಮಾಡಿಕೊಂಡು ನಿರ್ಲಕ್ಷ್ಯವಹಿಸದೇ ಅನುಷ್ಠಾನಗೊಳಿಸಿ, ನಿಯಮಾನುಸಾರ ಪ್ರಕ್ರಿಯೆಗಳನ್ನು ನಿಮ್ಮ ಹಂತದಲ್ಲಿ ನಿರ್ವಹಿಸಿಕೊಂಡು, ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತೋಟಗಾರಿಕೆ, ಮೀನುಗಾರಿಕಾ, ಪಶುಸಂಗೋಪನಾ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹೆಸ್ಕಾಂ ಹಾಗೂ ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ನವೆಂಬರ್-೨೦೨೫ರ ಅಂತ್ಯದವರೆಗೆ ಸಾಧಿಸಿದ ಆರ್ಥಿಕ ಮತ್ತು ಭೌತಿಕ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ಸಿ.ಬಿ.ಕುಂಬಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ ಚಹ್ವಾಣ, ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಮತಿ ಉಮಾಶ್ರೀ ಕೊಳ್ಳಿ, ಅಗ್ರಣೀಯ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕರಾದ ಸಿದ್ದಯ್ಯ. ಬಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕ್ಷಕ ಅರವಿಂದ ಲಂಬು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

