ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರಕ್ಕೆ ಆಲಮಟ್ಟಿ ಹಿನ್ನೀರಿನಿಂದ ಸಗಟು ನೀರು ಸರಬರಾಜು ಮಾಡುವ ಪಿ.ಎಸ್.ಸಿ ಕೊಳವೆ ಮಾರ್ಗವನ್ನು ಬದಲಾಯಿಸಿ ಎಂ.ಎಸ್ ಪೈಪ್ ಅಳವಡಿಸುವ ಕಾಮಗಾರಿಗೆ ರೂ.50.13 ಕೋಟಿ ಗಳಿಗೆ ಆಡಳಿತಾತ್ಮಕ ಅನುಮೋದನೆ ದೊರಕಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು. ಹಾಗೂ ನಗರಕ್ಕೆ ಅಗತ್ಯವಿರುವ 3ನೇ ಹಂತದ ಯೋಜನೆ ಅನುಷ್ಠಾನಕ್ಕಾಗಿ ಸರ್ವೇ ಕಾರ್ಯಕ್ಕೆ ಹಣ ಭರಣಾ ಮಾಡಲು ಮಹಾನಗರ ಪಾಲಿಕೆಗೆ ಕೋರಲಾಗಿದೆ ಎಂದು ಸರ್ಕಾರ ತಿಳಿಸಿದೆ.
ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು, ಬೃಹತ್ತಾಗಿ ಬೆಳೆಯುತ್ತಿರುವ ವಿಜಯಪುರ ಮಹಾನಗರವು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಹಾಗೂ ಭವಿಷ್ಯತ್ತಿನ ದಿನಗಳಲ್ಲಿ ಇಡೀ ಮಹಾನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ತಲೆದೊರುವ ಕುರಿತಂತೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 962ರ ಮೂಲಕ ಸರ್ಕಾರದ ಗಮನಸೆಳೆದಿದ್ದರು.
ಕೊಲ್ಹಾರದಿಂದ ವಿಜಯಪುರ ನಗರಕ್ಕೆ ಸಗಟು ನೀರು ಸರಬರಾಜು ಮಾಡುವ ಪಿ.ಎಸ್.ಸಿ ಕೊಳವೆ ಮಾರ್ಗದಲ್ಲಿ ಪದೇ ಪದೇ ಪೈಪ್ ಗಳು ಒಡೆದು ಅನಾವಶ್ಯಕವಾಗಿ ಸಾಕಷ್ಟು ನೀರು ಸೋರಿಕೆ ಆಗುವುದಲ್ಲದೆ, ದುರಸ್ತಿಗಾಗಿ ಸಮಯ ತೆಗೆದುಕೊಳ್ಳುವುದರಿಂದ ನಗರಕ್ಕೆ ಅಸಮರ್ಪಕವಾಗಿ ನೀರು ಸರಬರಾಜು ಆಗಿ, ಸಾರ್ವಜನಿಕರಿಗೆ ನೀರಿನ ಸಮಸ್ಯೆ ಉಲ್ಬಣ ಆಗುತ್ತಿರುವುದನ್ನು ತಪ್ಪಿಸಲು ಬಾಕಿ ಉಳಿದ ಎಂ.ಎಸ್.ಪೈಪ್ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸುವುದು ಅವಶ್ಯವಿದೆ. ಅದೇ ರೀತಿ ಬೃಹತ್ತಾಗಿ ಬೆಳೆಯುತ್ತಿರುವ ವಿಜಯಪುರ ನಗರಕ್ಕೆ 3ನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸುವುದು ಕೂಡ ಅತೀ ಅವಶ್ಯವಿದೆ.
ಸಗಟು ನೀರು ಸರಬರಾಜು ಮಾರ್ಗದಲ್ಲಿ ಪಿ.ಎಸ್.ಸಿ ಕೊಳವೆ ಬದಲಾಯಿಸಿ ಎಂ.ಎಸ್ ಪೈಪ್ ಅಳವಡಿಕೆ ಕಾಮಗಾರಿಗೆ ಅನುಮೋದನೆ ದೊರಕಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸುವುದಾಗಿ ಹಾಗೂ ವಿಜಯಪುರ ನಗರಕ್ಕೆ 3ನೇ ಹಂತದ ಕುಡಿಯುವ ನೀರಿನ ಯೋಜನೆಯ ವಿಸ್ತೃತ ಸರ್ವೇ ಕಾರ್ಯಕ್ಕೆ ರೂ.1.35 ಕೋಟಿ ಠೇವಣಿಕರಿಸಲು ಮಂಡಳಿಯಿಂದ ವಿಜಯಪುರ ಮಹಾನಗರ ಪಾಲಿಕೆಗೆ ಕೋರಲಾಗಿದೆ ಎಂದು ನಗರಾಭಿವೃದ್ಧಿ ಸಚಿವರು ಲಿಖಿತವಾಗಿ ಉತ್ತರ ನೀಡಿದ್ದಾರೆ.

