ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇತ್ತೀಚಿನ ದಿನಗಳಲ್ಲಿ ಹುರುಕು ಅಂದರೆ ಕಜ್ಜಿ(ಸ್ಕೇಬೀಸ್) ರೋಗದ ಅವಾಂತರ ಹೆಚ್ಚಾಗಿದ್ದು, ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿ.ಎಲ್.ಡಿ.ಇ ಡಿಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ ಎಂ ಪಾಟೀಲ ವೈದ್ಯಕೀಯ ಕಾಲೇಜಿನ ಚರ್ಮ ರೋಗ ವಿಭಾಗದಲ್ಲಿ ಡಿಸೆಂಬರ್ 20 ರಿಂದ ಡಿಸೆಂಬರ್ 24ರ ವರೆಗೆ ಉಚಿತ ತಪಾಸಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಡಾ. ಅರುಣ ಚಂ. ಇನಾಮದಾರ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ವಸತಿ ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಈ ಚರ್ಮರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಸಾರ್ಕೊಪ್ಟಸ್ ಸ್ಕೇಬೈ ಎಂಬ ಪರಾವಲಂಬಿ ಜೀವಜಂತುವಿನಿಂದ ಬರುವ ಸಾಂಕ್ರಾಮಿಕ ಕಾಯಿಲೆ ಇದಾಗಿದೆ. ರಾತ್ರಿ ವೇಳೆಯಲ್ಲಿ ವಿಪರೀತ ತುರಿಕೆ ಉಂಟಾಗುತ್ತದೆ. ದೇಹದ ಎಲ್ಲ ಸಂದುಗಳಲ್ಲಿ ಈ ಕಾಯಿಲೆ ಕಂಡು ಬರುತ್ತದೆ. ಒಬ್ಬರಿಂದ ಒಬ್ಬರಿಗೆ ಬಹುಬೇಗ ಈ ರೋಗ ಹರಡುತ್ತಿದೆ. ಆಸ್ಪತ್ರೆಯ ಚರ್ಮರೋಗ ವಿಭಾಗದಲ್ಲಿ ಪ್ರತಿದಿನ ಈ ರೋಗದಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಚಿಕಿತ್ಸೆಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 20 ರಿಂದ ಡಿಸೆಂಬರ್ 24ರ ವರೆಗೆ ಈ ರೋಗಿಗಳಿಗೆ ಆಸ್ಪತ್ರೆಯ ಚರ್ಮರೋಗ ವಿಭಾಗದಲ್ಲಿ ತಪಾಸಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸರಕಾರಿ ಮತ್ತು ಖಾಸಗಿ ವಸತಿ ನಿಲಯಗಳ ವಿದ್ಯಾರ್ಥಿಗಳಲ್ಲಿ ಈ ಕಾಯಿಲೆ ಹೆಚ್ಚಾಗಿದ್ದು, ಇದಕ್ಕೆ ಚಿಕಿತ್ಸೆಯೂ ಲಭ್ಯವಿದೆ. ಹಾಸ್ಟೇಲುಗಳಲ್ಲಿ ವಾಸಿಸುವ ಎಲ್ಲ ವಿದ್ಯಾರ್ಥಿಗಳಿಗೆ ಸಾಮೂಹಿಕ ತಪಾಸಣೆ ಮತ್ತು ಚಿಕಿತ್ಸೆ ಅಗತ್ಯವಾಗಿದ್ದು, ಆಯಾ ವಸತಿ ನಿಲಯಗಳ ವಾರ್ಡನ್ ಗಳು ತಮ್ಮ ಎಲ್ಲ ವಿದ್ಯಾರ್ಥಿಗಳನ್ನು ಬಿ.ಎಲ್.ಡಿ.ಇ ಆಸ್ಪತ್ರೆಯ ಚರ್ಮರೋಗ ಹೊರ ಹೋಗ ವಿಭಾಗದಲ್ಲಿ ಚಿಕಿತ್ಸೆ ಕೊಡಿಸಬಹುದಾಗಿದೆ. ಒಂದು ವೇಳೆ ಈ ಸೋಂಕು ಪೀಡಿತ ವ್ಯಕ್ತಿ ಮನೆಗೆ ಹೋದಾಗ ಅವನ ಕುಟುಂಬದ ಎಲ್ಲರಿಗೂ ಇದು ಹರಡುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಡಾ. ಅರುಣ ಚಂ. ಇನಾಮದಾರ ಅವರು ಮಾಹಿತಿ ನೀಡಿದ್ದಾರೆ.
