ಲೇಖನ
– ಜಯಶ್ರೀ ಜೆ.ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ನನಗೇನೂ ದೊರೆಯುತ್ತಿಲ್ಲ ಇತರರಿಗೆ ಸಲೀಸಾಗಿ ಅವರು ಬಯಸಿದ್ದು ಸಿಗುತ್ತಿದೆ. ಎಂದು ಹೆಚ್ಚಿನ ಸಂದರ್ಭಗಳಲ್ಲಿ ನಮಗೆ ಅನ್ನಿಸುವುದು. ಬಯಸಿದ್ದನ್ನು ಪಡೆಯಬೇಕಾದರೆ ಮಾಡಬೇಕಾಗಿರುವುದು ಏನು? ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಅಳವಡಿಸಿಕೊಳ್ಳಲೇಬೇಕಾದ ಕೆಲ ಗುಣಗಳ ಪಾತ್ರ ಎದ್ದು ಕಾಣುತ್ತದೆ. ಅದರಲ್ಲಿ ಅತಿ ಮುಖ್ಯವಾದುದು ಸ್ವಯಂ ಶಿಸ್ತು. ಅಯ್ಯೋ! ಪ್ರತಿಯೊಂದರಲ್ಲೂ ಶಿಸ್ತು ಪಾಲಿಸಬೇಕು ಎನ್ನುವ ಹಿರಿಯರ ಮಾತು ಕೇಳಿ ಕೇಳಿ ಸುಸ್ತಾಗಿದ್ದೇವೆ ಎನ್ನುತ್ತಿರೇನು? ಶಿಸ್ತು ಪಾಲಿಸದಿದ್ದರೆ ಸಣ್ಣ ಪುಟ್ಟದನ್ನು ಪಡೆಯಲು ಸಾಧ್ಯವಿಲ್ಲ. ಮೌರಿನ್ ಡೌಡ್ ಹೇಳಿದ ಪ್ರಕಾರ” ನಿಮಗೆ ಅರ್ಹತೆ ಇರುವುದಕ್ಕಿಂತ ಕಡಿಮೆ ಲೆಕ್ಕಾಚಾರಕ್ಕೆ ನೀವು ಒಪ್ಪಿಕೊಂಡ ತಕ್ಷಣ ನೀವು ಕೇಳಿದ್ದಕ್ಕಿಂತಲೂ ಕಡಿಮೆ ದೊರೆಯುತ್ತದೆ.” ನಾವು ಎಷ್ಟರ ಮಟ್ಟಿಗೆ ಅರ್ಹರು ಎನ್ನುವುದನ್ನು ತಿಳಿದುಕೊಳ್ಳುವುದು ಪ್ರಮುಖವಾಗಿದೆ.

ಸ್ವಯಂ ಶಿಸ್ತು ಎಂದರೆ..?
ಶಿಸ್ತು ಎಂದರೆ ನಮಗೆ ನಾವು ಕಠಿಣತಮವಾಗಿ ನಡೆದುಕೊಳ್ಳುವುದಲ್ಲ. ಅದೊಂದು ಕ್ರಮಬದ್ಧ ನಡುವಳಿಕೆ. ‘ಸ್ವಯಂ ನಿಯಂತ್ರಣವೇ ಸ್ವಯಂ ಶಿಸ್ತು.’ನಮ್ಮ ದೌರ್ಬಲ್ಯಗಳನ್ನು ಜಯಿಸುವುದೇ ಸ್ವಯಂ ಶಿಸ್ತು.’ ಸ್ವಯಂ ಶಿಸ್ತಿಲ್ಲದ ಜೀವನ ಗಾಳಿಗೊಡ್ಡಿದ ಪುಟ್ಟ ಹಣತೆಯಂತೆ. ‘ನಿಮಗೆ ಮಾಡಲು ಮನಸ್ಸಿಲ್ಲದಿದ್ದಾಗಲೂ ಮಾಡಲೇಬೇಕಾದುದ್ದನ್ನು ಮನಸಾರೆ ಮಾಡುವುದೇ ಸ್ವಯಂ ಶಿಸ್ತು.’ಜಿಮ್ ರೋನ್ ಹೇಳಿದಂತೆ,” ಶಿಸ್ತು ಎನ್ನುವುದು ಸ್ವ ನಿಯಂತ್ರಣ ಮತ್ತು ಸಾಧನೆಯ ನಡುವಿರುವ ಸೇತುವೆ.” ಸ್ವಯಂ ಶಿಸ್ತು ಇಲ್ಲದೇ ಗೆಲುವು ಸಾಧಿಸುವುದು ಅಸಾಧ್ಯದ ಮಾತೇ ಸರಿ. ಸ್ವಯಂ ಶಕ್ತಿ ಒಂದು ಮಂತ್ರದಂಡದಂತೆ ಅಸಾಧ್ಯವಾದುದನ್ನೂ ಸಾಧ್ಯಗೊಳಿಸಿ ಪವಾಡ ಸದೃಶವೆನಿಸುವುದು.
ಶಿಸ್ತು ಮತ್ತು ಸ್ವಾತಂತ್ರ್ಯ
ಶಿಸ್ತು ಇರುವಲ್ಲಿ ಸ್ವಾತಂತ್ರ್ಯವಿರುವುದಿಲ್ಲ ಎನ್ನುವುದು ನಮ್ಮ ಭ್ರಮೆಗಳಲ್ಲೊಂದು. ಸ್ವಯಂ ಶಿಸ್ತು ಅಳವಡಿಸಿಕೊಳ್ಳಲು ಮನಸ್ಸಿಗೆ ತುಂಬಾ ಕಿರಿಕಿರಿಯಾಗುವುದು. ಆದರೆ ಈ ನೋವು ಪಶ್ಚಾತ್ತಾಪಕ್ಕಿಂತ ಎಷ್ಟೋ ಪಟ್ಟು ಕಡಿಮೆ ಎಂಬುದು ಸತ್ಯ. ತತ್ವಜ್ಞಾನಿ ಪ್ಲೇಟೋ ಹೇಳಿದ ಹಾಗೆ ‘ನಮ್ಮ ಮೆಲೆ ನಾವು ಜಯಗಳಿಸುವುದು ಮುಖ್ಯ.’ ಸ್ವಯಂ ಶಿಸ್ತು ಎನ್ನುವುದು ಒಂದು ಮಾಂಸ ಖಂಡವಿದ್ದಂತೆ ವ್ಯಾಯಾಮ ಮಾಡಿದಷ್ಟು ಬಲಗೊಳ್ಳುತ್ತದೆ. ಸ್ವಯಂ ಶಿಸ್ತು ಒಂದು ಸ್ವಾತಂತ್ರ್ಯ. ಇದರಿಂದ ಅಶಕ್ತತೆ ಭಯ ಮಾಯವಾಗಿ ನಮ್ಮಲ್ಲಿರುವ ಅಗಾಧ ಆಂತರಿಕ ಶಕ್ತಿಯ ಅರಿವಿಗೆ ಬರುವುದು. ನಮ್ಮ ಆಲೋಚನೆಗಳಿಗೆ ಭಾವನೆಗಳಿಗೆ ಗುಲಾಮರಾಗುವುದನ್ನು ತಪ್ಪಿಸಿ ಯಜಮಾನರನ್ನಾಗಿಸುವ ಶಕ್ತಿ ಸ್ವಯಂ ಶಕ್ತಿಗೆ ಉಂಟು.
ಎಲ್ಲೆಲ್ಲೂ ಬೇಕು ಸ್ವಯಂ ಶಿಸ್ತು
ಕಣ್ಣಲ್ಲಿ ತುಂಬಿಕೊಂಡಿರುವ ಕನಸುಗಳ ಸಾಕಾರಕ್ಕೆ ಸ್ವಯಂ ಶಿಸ್ತು ಅತ್ವಗತ್ಯ. ಇದನ್ನೇ ಅನಾಮಿಕ ನಿಮ್ಮ ಕನಸುಗಳ ಸಾಕಾರದ ಮಟ್ಟ ನಿಮ್ಮ ಸ್ವಯಂ ಶಿಸ್ತಿನ ಮಟ್ಟದ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದಾನೆ. “ಸ್ವಯಂ ಶಿಸ್ತಿನ ಮೂಲಕ ಸ್ವಾತಂತ್ರ್ಯ ದೊರೆಯುತ್ತದೆ.” ಎಂಬುದು ಅರಿಸ್ಟಾಟಲ್ ಅಭಿಮತ. ನಾವು ಶಾಲೆಯಲ್ಲಿರಲಿ ಕಾಲೇಜಿನಲ್ಲಿರಲಿ ಕಛೇರಿಯಲ್ಲಿರಲಿ ಮನೆಯಲ್ಲಿರಲಿ ಎಲ್ಲೆಲ್ಲೂ ಸ್ವಯಂ ಶಿಸ್ತು ಬೇಕೇ ಬೇಕು. ಪ್ರಕೃತಿಯಲ್ಲೂ ಶಿಸ್ತು ಇದೆ. ಪ್ರಕೃತಿಯ ಒಂದು ಸಣ್ಣ ಅಶಿಸ್ತು ನಮ್ಮನ್ನು ಸಂಪೂರ್ಣ ಹಾಳುಗೆಡುವಬಲ್ಲುದು. ಸ್ವಯಂ ಶಿಸ್ತು ಇಲ್ಲದೇ ಇಡೀ ಜೀವನವೇ ಕುಸಿಯುತ್ತಿದೆ. ಹಾಗಾದರೆ ಇಷ್ಟೆಲ್ಲ ಮಹತ್ವವುಳ್ಳ ಸ್ವಯಂ ಶಿಸ್ತು ಹೇಗೆ ಪಡೆಯಬೇಕು?ಎನ್ನುವ ಪ್ರಶ್ನೆಯ ಉತ್ತರಕ್ಕೆ ಮುಂದಕ್ಕೆ ಓದಿ.
ಇರಲಿ ಆತ್ಮ ವಿಶ್ವಾಸ
ಆರಂಭ ಮಾಡಿದ ಕೆಲಸಗಳ ಸಾಫಲ್ಯದ ಕುರಿತು ಅಂಜಿಕೆ ಅಳಕು ಬೇಡ. ಪ್ರತಿಯೊಬ್ಬರೂ ಒಂದೊಂದು ಕೆಲಸದಲ್ಲಿ ಒಂದೊಂದು ರೀತಿಯಲ್ಲಿ ಉತ್ತಮರಾಗಿರುತ್ತಾರೆ. ನಿಮಗೆ ನೀವೇ ಅಪಜಯದ ಮಾತುಗಳನ್ನಾಡಿ ನಿಮಗೆ ನೀವೇ ನಿಮ್ಮ ಸಾಮರ್ಥ್ಯಕ್ಕೆ ಕಳಂಕ ತಂದುಕೊಳ್ಳಬೇಡಿ. ನಿಮ್ಮನ್ನು ನೀವೇ ಹೀಗಳೆದುಕೊಳ್ಳಬೇಡಿ.ನಿಮ್ಮನ್ನು ನೀವೇ ಹಳಿದುಕೊಳ್ಳುವುದರಿಂದ ನಿಮ್ಮ ಪ್ರಯತ್ನಗಳಿಗೆ ಎಂದಿಗೂ ಪ್ರಾಶಸ್ತ್ಯ ಸಿಗುವುದಿಲ್ಲ. “ನೀವು ಕನಸಿನಲ್ಲೂ ಊಹಿಸದ ದೊಡ್ಡ ಕೆಲಸಗಳನ್ನು ಮಾಡುವ ಅರ್ಹತೆ ನಿಮ್ಮೊಳಗೆ ಇರುತ್ತದೆ. ಅದು ನಿದ್ರಾಣ ಸ್ಥಿತಿಯಲ್ಲಿರುತ್ತದೆ. ಅದಕ್ಕೇ ನಿಮ್ಮ ಶಕ್ತಿಯನ್ನು ನೀವು ನಂಬಿರಿ.” ಎಂದು ಮನೋವಿಜ್ಞಾನಿಯೊಬ್ಬನು ಹೇಳಿದ್ದಾನೆ. ಸ್ವಯಂ ಶಿಸ್ತು ರೂಢಿಸಿಕೊಳ್ಳಲು ನಮ್ಮ ಸಾಮರ್ಥ್ಯದ ಅರಿವು ಆತ್ಮ ಗೌರವ ಬೇಕೇ ಬೇಕು. ಸ್ವಯಂ ಶಿಸ್ತು ನಿಮ್ಮನ್ನು ನೀವು ಪ್ರಮುಖ ವ್ಯಕ್ತಿಯಾಗಿ ನೋಡಿಕೊಳ್ಳಲು ಸಹಕರಿಸುತ್ತದೆ. ನೆನಪಿರಲಿ, ಆತ್ಮವಿಶ್ವಾಸ ನಿಮ್ಮ ನಿರೀಕ್ಷೆಗಳನ್ನು ತಗ್ಗಿಸಿ ನಿಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ಕುಸ್‌ಪರ‍್ಲಿ ಹೇಳಿದಂತೆ” ಪ್ರತಿ ಮನುಷ್ಯನ ಆತ್ಮದಲ್ಲಿ ನಂಬಿಕೆ ಇರುತ್ತದೆ.” ಆ ನಂಬಿಕೆಯ ಜೊತೆಗೆ ಭಾವೋದ್ವೇಗಗಳನ್ನು ಹಿಡಿತದಲ್ಲಿಟ್ಟುಕೊಂಡು ಪ್ರಯತ್ನಿಸುವುದೇ ಸ್ವಯಂ ಶಿಸ್ತು.
ಕಷ್ಟಗಳನ್ನು ಎದುರಿಸಿ
‘ಸ್ವಯಂ ಶಿಸ್ತಿನಿಂದ ಏನೆಲ್ಲವೂ ಸಾಧ್ಯ’ ಎಂಬ ಮಾತನ್ನು ಥಿಯೋಡರ್ ರೂಸವೆಲ್ಟ್ ಹೇಳಿದ್ದರು. ಕಷ್ಟಗಳು ಬರುವುದಕ್ಕೆ ಮುನ್ನವೇ ಅವುಗಳ ಕುರಿತು ಆತಂಕ ಪಡುವುದು ದೌರ್ಬಲ್ಯದ ಸಂಕೇತ. ಎಷ್ಟೋ ಬಾರಿ ನಾವು ಕಲ್ಪಿಸಿದಂತೆ ಕಷ್ಟಗಳು ಬಾರದೇ ಇರುತ್ತವೆ. ಕಷ್ಟಗಳು ಬಂದಾಗ ಎದುರಿಸುವ ಪ್ರಯತ್ನ ಒಳಿತು. ಸಣ್ಣ ಕಷ್ಟಗಳನ್ನು ಭೂತಗನ್ನಡಿಯಲ್ಲಿಟ್ಟು ದೊಡ್ಡದಾಗಿಸಿ ನೋಡುವುದರಿಂದ ಭಯ ಹೆಚ್ಚಾಗುತ್ತದೆ. ಅಲ್ಲದೇ ಕಷ್ಟ ನಿವಾರಿಸಿಕೊಳ್ಳಲು ಹೆಚ್ಚು ಶಕ್ತಿಯೂ ಬೇಕಾಗುತ್ತದೆ. ಪ್ರತಿಯೊಂದು ಕಷ್ಟಕ್ಕೂ ನಿವಾರಣೆ ಇದ್ದೇ ಇರುತ್ತದೆ. ಕೊಂಚ ಸಹನೆ ವಹಿಸಿ ಅದನ್ನು ಹುಡುಕಿಕೊಳ್ಳಬೇಕು. ಕಷ್ಟಗಳನ್ನು ಎದುರಿಸುವುದು ಸ್ವಯಂ ಶಿಸ್ತು ರೂಪಿಸಿಕೊಳ್ಳಲು ಸಹಾಯಕ.
ಶಕ್ತಿ ಸಾಮರ್ಥ್ಯ ಸಂಪೂರ್ಣವಾಗಿ ಬಳಸಿ
ವಿದ್ಯಾರ್ಥಿ ದೆಸೆಯಿಂದಲೇ ಶಿಸ್ತು ಅಳವಡಿಸಿಕೊಳ್ಳುವುದು ಉತ್ತಮ. ಮೂರು ವರ್ಷದ ಬುದ್ಧಿ ನೂರು ವರ್ಷದವರೆಗೆ ಎನ್ನುವಂತೆ ಪುಟ್ಟ ಮನಸ್ಸುಗಳು ಬೇಗನೇ ಕಲಿತುಕೊಳ್ಳುತ್ತವೆ. ಸ್ವಯಂ ಶಿಸ್ತಿಲ್ಲದ ಮಾನವ, ಪ್ರಾಣಿ ಇದ್ದಂತೆ. ಸ್ವಯಂ ಶಿಸ್ತಿಲ್ಲದ ಬಾಳು ಅಪರಾಧಗಳನ್ನು ಹೆಚ್ಚಿಸಿ ಜೀವನವನ್ನು ನರಕವಾಗಿಸುತ್ತಿದೆ. “ನಾವು ಇಂದು ಏನು ಮಾಡುತ್ತೇವೆಯೋ ಅದರ ಮೇಲೆ ನಮ್ಮ ಮುಂದಿನ ಭವಿಷ್ಯ ಅಡಗಿದೆ” ಎಂಬುದು ಮಹಾತ್ಮಾ ಗಾಂಧೀಜಿ ಹೇಳಿದ ಮಾತು. ಮಾಡುವ ಕೆಲಸದಲ್ಲಿ ನಮ್ಮ ಸಂಪೂರ್ಣ ಶಕ್ತಿ ಸಾಮರ್ಥ್ಯವನ್ನು ಉಪಯೋಗಿಸಬೇಕು. ಸಮೀಕ್ಷೆಯೊಂದರ ಪ್ರಕಾರ ಕೇವಲ ಸೇಕಡಾ ೫ ರಷ್ಟು ಜನ ಮಾತ್ರ ತಮ್ಮ ಸಂಪೂರ್ಣ ಶಕ್ತಿ ಸಾಮರ್ಥ್ಯಗಳನ್ನು ವಿನಿಯೋಗಿಸುತ್ತಿದ್ದಾರೆ. ಉಳಿದ ಶೇಕಡಾ ೯೫ ರಷ್ಟು ಜನ ಅರ್ಧಂಬರ್ಧ ಮಾತ್ರ ಉಪಯೋಗಿಸಿಕೊಳ್ಳುತ್ತಿದ್ದಾರೆ. ಸ್ವಯಂ ಶಿಸ್ತು ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆಲಸ್ಯತನವನ್ನು ಹೊಡೆದೊಡಿಸುತ್ತದೆ. ಸ್ವಯಂ ಶಿಸ್ತಿನ ಕೊರತೆಯು ಅನಾರೋಗ್ಯದ ಸ್ಥಿತಿಯನ್ನು ತರುತ್ತದೆ. ಸಂಬಂಧಗಳ ಕೊಂಡಿ ಕಳಚುವಲ್ಲಿ ಇದರ ಪಾತ್ರ ನಗಣ್ಯವೇನಲ್ಲ. ತಿನ್ನುವ ಕುಡಿಯುವ ಅಭ್ಯಾಸಗಳಲ್ಲೂ ಶಿಸ್ತು ತನ್ನ ಛಾಪು ಮೂಡಿಸಿ ಕಾಡಿಸದೇ ಇರದು.
ನಮ್ಮಲ್ಲಿ ಬಹಳಷ್ಟು ಜನರಿಗೆ ಗೆಲುವಿನ ಜೀವನಕ್ಕೆ ಸ್ವಯಂ ಶಿಸ್ತು ಅವಶ್ಯ ಎನ್ನುವುದು ಗೊತ್ತಿದ್ದರೂ ಕೇವಲ ಕೆಲವೇ ಕೆಲವು ಜನರು ಸ್ವಯಂ ಶಿಸ್ತು ರೂಢಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಸ್ವಯಂ ಶಿಸ್ತು ಜೀವನ ಕೌಶಲ್ಯಗಳ ತಾಯಿ. ಹತಾಶೆ ನಿರಾಶೆಗಳಿಗೆ ವಿದಾಯ ಹೇಳಲು ಬಯಸಿದ್ದನ್ನು ಪಡೆಯಲು ಉತ್ತಮ ಆಯ್ಕೆ ಸ್ವಯಂ ಶಿಸ್ತು. ಹಾಗಾದರೆ ತಡವೇಕೆ? ಸ್ವಯಂ ಶಿಸ್ತಿನಿಂದ ಜೀವನ ಪಥದಲ್ಲಿರುವ ಕಲ್ಲು ಮುಳ್ಳುಗಳ ರಾಶಿ ಇಲ್ಲವಾಗಿಸಿ. ನೋವಿನ ಬೆಟ್ಟಗುಡ್ಡಗಳ ಸರಿಸಿ ಸುಖ ಸಮೃದ್ಧಿಯ ಶಿಖರವನ್ನೇರಲು ಸನ್ನದ್ಧರಾಗಿ.


