ಮುದ್ದೇಬಿಹಾಳ ತಹಶೀಲ್ದಾರ್ ಕೀರ್ತಿ ಚಾಲಕ ಪಾಲಕರಲ್ಲಿ ಮನವಿ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲ್ಲೂಕಿನಾದ್ಯಂತ ಡಿ.೨೧ರಿಂದ ೨೪ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ೫ವರ್ಷದೊಳಗಿನ ಮಕ್ಕಳಿಗೆ ತಪದೇ ಪೋಲಿಯೋ ಲಸಿಕೆ ಹಾಕಿಸುವಂತೆ ತಹಶೀಲ್ದಾರ್ ಕೀರ್ತಿ ಚಾಲಕ ಪಾಲಕರಲ್ಲಿ ಮನವಿ ಮಾಡಿದರು.
ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ನಡೆದ ಪಲ್ಸ್ ಪೋಲಿಯೋ ಲಸಿಕೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಿ.೨೧ರಂದು ಬೂತ್ ಮಟ್ಟದಲ್ಲಿ ಪೋಲಿಯೋ ಲಸಿಕೆ ಹಾಕಲಾಗುತ್ತದೆ. ಬಳಿಕ ಸತತ ೩ದಿನ ಮನೆ ಮನೆಗೆ ತೆರಳಿ ಲಸಿಕೆ ಹಾಕುವ ಕಾರ್ಯ ನಡೆಯಲಿದೆ. ಪೋಲಿಯೋ ಮಾರಕ ರೋಗವಾಗಿದ್ದು, ೫ ವರ್ಷದೊಳಗಿನ ಯಾವುದೇ ಮಗು ಎರಡು ಹನಿ ಪೋಲಿಯೋ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಲಸಿಕಾ ಅಭಿಯಾನದ ಎರಡು ದಿನ ಮುನ್ನ ಎಲ್ಲ ಲಸಿಕಾ ಕೇಂದ್ರಗಳಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಕ್ರಮವಹಿಸಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಪ್ರತಿ ಗ್ರಾಮಗಳಲ್ಲಿ ಕರಪತ್ರ, ಡಂಗೂರ ಸಾರುವ ಮೂಲಕ ಸಾರ್ವಜನಿಕರಿಗೆ ಮೂಡಿಸಬೇಕು ಎಂದರು.
ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳುವಂತೆಯೂ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು ಮೇಲ್ವಿಚಾರಕರು ಅಭಿಯಾನದಲ್ಲಿ ಎಲ್ಲರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ಸೂಚಿಸಿದರು.
ಆಂದೋಲನದ ಕುರಿತು ತಾಲೂಕ ಆರೋಗ್ಯ ಅಧಿಕಾರಿ ಡಾ. ಸತೀಶ್ ತಿವಾರಿ ಮಾತನಾಡಿ ತಾಲ್ಲೂಕಿನಾದ್ಯಂತ ೫ವರ್ಷದೊಳಗಿನ ಒಟ್ಟು ೩೯,೩೭೦ ಮಕ್ಕಳು ಲಸಿಕೆ ಪಡೆಯಲಿದ್ದು, ಒಟ್ಟು ೨೦೭ ಬೂತ್‌ಗಳನ್ನು ಸ್ಥಾಪಿಸಲಾಗಿದೆ. ಅಲ್ಲದೇ ೬ ಮೊಬೈಲ್ ಟೀಮ್ ಗಳನ್ನೂ ಕೂಡ ಸ್ಥಾಪಿಸಲಾಗಿದೆ. ಪ್ರತಿ ಬೂತ್‌ಗೆ ಇಬ್ಬರು ಸದಸ್ಯರು, ಐದು ತಂಡಕ್ಕೆ ಒಬ್ಬ ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದು, ಪ್ರತಿ ಬೂತ್ ಮಟ್ಟದ ವ್ಯಾಪ್ತಿಯ ಮನೆಗಳಿಗೆ ತೆರಳಿ ಪೋಲಿಯೋ ಹನಿ ಹಾಕಲಿದ್ದಾರೆ. ಲಸಿಕಾ ಕಾರ್ಯಕ್ರಮಕ್ಕೆ ೪೧೪ ಸಿಬ್ಬಂದಿ,೪೦ ಜನ ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ತಾಲೂಕು ಆಸ್ಪತ್ರೆಯ ಚಿಕ್ಕ ಮಕ್ಕಳ ತಜ್ಞ ಡಾ. ಪರಶುರಾಮ್ ವಡ್ಡರ, ವೈದ್ಯರಾದ ಡಾ. ಪ್ರವೀಣ್ ಸುಣಕಲ್, ಡಾ. ಭಾಗ್ಯಶ್ರೀ ಬಿರಾದಾರ, ಡಾ.ರೇಖಾ ಹಯ್ಯಳ, ಕೃಷಿ ಅಧಿಕಾರಿಗಳಾದ ಸುರೇಶ್ ಬಾವಿಕಟ್ಟಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್, ಶಿಕ್ಷಣ ಸಂಯೋಜಕಿ ಪಿ.ಎ.ಬಾಳಿಕಾಯಿ, ತಾಲೂಕ ಪಂಚಾಯತ್ ನ ಖೂಬಾಸಿಂಗ್ ಜಾದವ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಲಕ್ಷ್ಮಿ ಬಡಿಗೇರ, ಎಎಸ್‌ಐ ಕೆ.ಎಸ್.ಅಸ್ಕಿ, ಸಮಾಜ ಕಲ್ಯಾಣ ಇಲಾಖೆಯ ಬಸಂತಿ ಮಠ, ಪುರಸಭೆಯ ವಿನೋದ್ ಜಿಂಗಾಡೆ, ಬಾಲಾಜಿ ಶುಗರ್ಸ್ & ಕೆಮಿಕಲ್ಸ್ ಪ್ರಾ.ಲಿ ಯರಗಲ್ಲ ಸಿಬ್ಬಂದಿ ವೀರಣ್ಣ ಹೆಬ್ಬಾಳ, ಬಿಸಿಎಂ ನ ಸಿಬ್ಬಂದಿ ಭೀಮಶಿ ಗುಂಡಿಮನಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಸಿ.ಎಸ್.ಜಾರೆಡ್ಡಿ, ಎಂ.ಎಸ್.ಗೌಡರ, ಎಸ್.ಸಿ.ರುದ್ರವಾಡಿ, ಪ್ರಶಾಂತ್ ಕಡಿ, ತಹಸಿಲ್ದಾರ್ ಕಾರ್ಯಾಲಯದ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

