ಉದಯರಶ್ಮಿ ದಿನಪತ್ರಿಕೆ
ಮುದೇಬಿಹಾಳ: ಕೃಷಿ ಪರಿಸರದ ಮೂಲ ಸೆಲೆ ಎಂತಿರುವ ಹಾಗೂ ಭೌತಿಕ, ರಾಸಾಯನಿಕ, ಜೈವಿಕ ಗುಣಧರ್ಮಗಳಿಂದ ರಚಿತವಾದ ಮಣ್ಣು ವಿಜ್ಞಾನದ ವಿಸ್ಮಯವನ್ನು ಸಾರುವ ಜ್ಞಾನ ದಾಸೋಹ ನಿರಂತರವಾಗಿರಲಿ ಎಂದು ಕೃಷಿ ಉಪನಿರ್ದೇಶಕ ಶರಣಗೌಡರು ಹೇಳಿದರು.
ಇಲ್ಲಿನ ಆದಿತ್ಯ ಫ್ಲಾಜಾ ಸಭಾಂಗಣದಲ್ಲಿ ಅಮೃತ ರೈತ ಉತ್ಪಾದಕ ಸಂಸ್ಥೆಗಳ ಯೋಜನೆಯಡಿ ಸ್ಥಾಪಿಸಲಾದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ, ಬೆಂಗಳೂರಿನ ಸಿ-ಕ್ಯಾಂಪ್ ಹಾಗೂ ಕೃಷಿತಂತ್ರ ಸಂಸ್ಥೆಗಳ ನೆರವಿನೊಂದಿಗೆ ಮಣ್ಣು ನೀರು ಮತ್ತು ಸಸ್ಯ ಅಂಗಾಂಶ ಪರೀಕ್ಷಿಸಲು ಸ್ಥಾಪಿಸಲಾದ ದಾಸೋಹಿ ಕೃಷಿ ವಿಶ್ಲೇಷಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಣ್ಣಿನ ಮೇಲೆ ನಡೆಯುತಿರುವ ಅಸ್ವಾಭಾವಿಕ ದಬ್ಬಾಳಿಕೆ, ಅವೈಜ್ಞಾನಿಕ ನಿರ್ವಹಣೆ ಮತ್ತು ಹವಾಮಾನ ಬದಲಾವಣೆ ದುಷ್ಪರಿಣಾಮಗಳಿಂದ ಮಣ್ಣು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಕೊನೆ ಹಂತ ತಲುಪಿರುವುದನ್ನು ಗಂಭಿರವಾಗಿ ಪರಿಗಣಿಸಿ ಮಣ್ಣು ಉಳಿಸುವ ಅಭಿಯಾನದೊಂದಿಗೆ ಸುಸ್ಥಿರ ಕೃಷಿಯ ತಳಮಟ್ಟವನ್ನು ಬಲಪಡಿಸುವ ಉದ್ದೇಶದಿಂದ ಅತ್ಯಾಧುನಿಕ ಮತ್ತು ನಿಖರ ತಾಂತ್ರಿಕತೆಗಳನ್ನು ಬಳಸಿಕೊಂಡು ದಾಸೋಹಿ ಕೃಷಿ ವಿಶ್ಲೇಷಣಾ ಕೇಂದ್ರ ಸ್ಥಾಪಿಸಿರುವುದು ರೈತರಿಗೆ ವರವಾಗಲಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಸನಗೌಡ ಪಾಟೀಲ ಮಾತನಾಡಿ ಮಣ್ಣಿನ ರಚನೆ, ವರ್ಗೀಕರಣ ಮತ್ತು ಫಲವತ್ತತೆ ಆಧಾರದ ಮೇಲೆ ನಿರ್ವಹಣಾ ಕ್ರಮಗಳನ್ನು ಅಳವಡಸಿಕೊಳ್ಳುವುದರಿಂದ ಕೃಷಿಯನ್ನು ಸುಸ್ಥಿರ ಕಕ್ಷೆಯಲ್ಲಿರಿಸಿ ಭವಿಷ್ಯದ ಆಹಾರ ಭದ್ರತೆಗೆ ಭದ್ರ ಅಡಿಪಾಯ ಹಾಕಲು ಸಾಧ್ಯ ಎಂಬುದನ್ನು ರೈತರೆಲ್ಲ ತಿಳಿದು ಮಣ್ಣು ಪರೀಕ್ಷೆಯನ್ನು ಕೃಷಿ ಹಂಗಾಮು ಆರಂಭದಲ್ಲಿ ಕೈಗೊಳ್ಳಬೇಕಾದ ಪ್ರಥಮ ಪ್ರಾಶಸ್ತ್ಯದ ನಡೆ ಎಂದು ರೈತರು ಪ್ರತಿಜ್ಞೆಗೈದು ಮುನ್ನೆಡೆದಾಗ ಮಾತ್ರ ಭವಿಸ್ಯವನ್ನು ಹಸಿವು ಮುಕ್ತವಾಗಿರಿಸಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ, ಚಿಂತಕ ಅರವಿಂದ ಕೊಪ್ಪ ಮಾತನಾಡಿ ಮಣ್ಣಿನ ಫಲವತ್ತತೆಯನ್ನು ಸುಧಾರಿಸಿ ಬೆಳೆಗಳಿಗೆ ಸಮತೋಲಿತ ಪೋಷಣೆ ನೀಡಿ, ಏಕರೂಪದ ಹೆಚ್ಚಿನ ಇಳುವರಿ ಮತ್ತು ಉತ್ತಮ ಗುಣಮಟ್ಟದ ಹೊಂದಲು ಪ್ರತಿಯೊಬ್ಬ ರೈತರು ಪ್ರತಿ ಹಂಗಾಮು ಪೂರ್ವದಲ್ಲಿ ಕೆ.ವೈ.ಎಸ್ (ನಿಮ್ಮ ಮಣ್ಣು ತಿಳಿಯಿರಿ) ಮಾಡಿಸಿಕೊಳ್ಳಲು ಮುಂದಾಗಬೇಕೆಂದ ಅವರು ಆ ಕಾರಣಕ್ಕಾಗಿ ನಿಖರ ತಂತ್ರಜ್ಞಾನ ಬಳಸಿ ಸ್ಥಾಪಿಸಲಾದ ಕೃಷಿ ವಿಶ್ಲೇಷಣಾ ಪ್ರಯೋಗಾಲಯದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಿ-ಕ್ಯಾಂಪ್ ಯೋಜನೆಯ ಕ್ಷೇತ್ರಾಧಿಕಾರಿ ಕಾರ್ತಿಕ, ಕೃಷಿತಂತ್ರ ಸಂಸ್ಥೆಯ ಮಾರುಕಟ್ಟೆ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ, ಮಹಾರಾಷ್ಟçದ ಕಬ್ಬು ವಿಜ್ಞಾನಿ ವಿಜಯ ಮಾಳೆ, ಜೈನ ಕಂಪನಿಯ ನೀರಾವರಿ ತಜ್ಞ ಮಹೇಂದ್ರ ಬಿರಾದಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ (ತಾಂತ್ರಿಕ) ರಾಘವೇಂದ್ರ ದೇಶಪಾಂಡೆ, ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯ ನಿರ್ದೇಶಕ ಆರ್.ಬಿ ಸಜ್ಜನ, ಸೋಮನಗೌಡ ಬಿರಾದಾರ(ಮಡಿಕೇಶ್ವರ), ಪರಸಪ್ಪ ಮೇಟಿ(ಜಟ್ಟಗಿ), ಬಸವರಾಜ ಕುಂಟೋಜಿ, ಭೀಮಣ್ಣ ಮಳಗೌಡರ, ಪ್ರಭುಸ್ವಾಮಿ ಹಿರೇಮಠ ಮತ್ತಿತರರು ಭಾಗವಹಿಸಿದ್ದರು.
ಗುಂಡಪ್ಪ ಬಿರಾದಾರ ಸ್ವಾಗತಿಸಿದರು. ನ್ಯಾಯವಾದಿ ರಶ್ಮಿ ಕೊಪ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಿದ್ದಣ್ಣ ಹೊಳಿ ಕಾರ್ಯಕ್ರಮ ನಿರೂಪಿಸಿದರು. ಆರತಿ ರಾಯಚೂರಕರ ವಂದಿಸಿದರು.

