ಬಿಜೆಪಿ ಯುವ ಮೋರ್ಚಾ ನಿಕಟ ಪೂರ್ವ ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜ ಹೂಗಾರ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಜನತೆಗೆ ವೈದ್ಯಕೀಯ ಕಾಲೇಜು ಅತ್ಯಂತ ಅಗತ್ಯ. ಈ ಬಗ್ಗೆ ಹಲವು ವರ್ಷಗಳಿಂದ ಚರ್ಚೆಗಳು ನಡೆಯುತ್ತಿವೆ
ಸರ್ಕಾರಿ ಮಾದರಿಯಲ್ಲಿ ಬರಬೇಕೋ,ಅಥವಾ ಪಿಪಿಪಿ ಮಾದರಿಯಲ್ಲಿ ಬರಬೇಕೋ ಎಂಬ ಅಭಿಪ್ರಾಯ ಬೇರೆಬೇರೆ. ಆದರೆ ನಮ್ಮ ನಿಲುವು ಒಂದೇ ಯಾವುದೇ ಮಾದರಿಯಾದರೂ ಪರವಾಗಿಲ್ಲ, ಜಿಲ್ಲೆಗೆ ಬೇಕಾದ ವೈದ್ಯಕೀಯ ಕಾಲೇಜು ಬೇಗ ಪ್ರಾರಂಭವಾಗಬೇಕು ಎಂದು ಬಿಜೆಪಿ ಯುವ ಮೋರ್ಚಾ ನಿಕಟ ಪೂರ್ವ ಜಿಲ್ಲಾ ಅಧ್ಯಕ್ಷ ಬಸವರಾಜ ಹೂಗಾರ ಆಗ್ರಹಿಸಿದ್ದಾರೆ.
ಗುರುವಾರ ಈ ಕುರಿತು ಪ್ರಕಟಣೆ ನೀಡಿದ ಅವರು, ಸರ್ಕಾರಿ ಕಾಲೇಜಿಗೆ ಒಂದು ರೀತಿಯ ಲಾಭಗಳಿವೆ, ಜನಸಾಮಾನ್ಯರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ, ಸೇವಾ ಧೋರಣೆ. ಪಿಪಿಪಿ ಮಾದರಿಗೆ ಬೇರೆ ಲಾಭಗಳಿವೆ, ವೇಗವಾಗಿ ಕಟ್ಟುವ ಸಾಮರ್ಥ್ಯ, ಉತ್ತಮ ಸೌಲಭ್ಯಗಳು, ಉತ್ತಮ ತಂತ್ರಜ್ಞಾನ. ಆದರೆ ಇಂದು ಜನರಿಗೆ ಮುಖ್ಯವಾಗಿರುವುದು ಮಾದರಿ ಅಲ್ಲ ಕಾಲೇಜು ಆರಂಭವಾಗೋದು ಯಾವಾಗ ಎಂಬುದು. ವೈದ್ಯಕೀಯ ಕಾಲೇಜು ವಿಷಯದಲ್ಲಿ ಈಗಾಗಲೇ ಬಹಳಷ್ಟು ವರ್ಷಗಳ ಕಾಲ ನಡೆದಿರುವ ಚರ್ಚೆಗಳನ್ನು ಹಾಗೂ ಪ್ರಕ್ರಿಯೆಯ ವಿಳಂಬವನ್ನು ಜಿಲ್ಲೆಯ ಜನರು ನೋಡಿದ್ದಾರೆ. ಈಗ ಇದು ಇನ್ನೂ ಮುಂದೂಡಲಾದಂತಹ ವಿಷಯವಲ್ಲ. ಇನ್ನೂ ಕಾಲಹರಣ ಮಾಡದೇ ತಕ್ಷಣ ನಿರ್ಧಾರ ಕೈಗೊಂಡು ಕಾಲೇಜು ಪ್ರಾರಂಭಿಸುವುದು ಅತ್ಯಂತ ಅಗತ್ಯ ಎಂದಿದ್ದಾರೆ.
ಈ ಜಿಲ್ಲೆಯ ಯುವಕರು ವೈದ್ಯಕೀಯ ಶಿಕ್ಷಣಕ್ಕಾಗಿ ಇನ್ನೂ ಹೊರ ಜಿಲ್ಲೆಗೆ ಹೋಗಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಆದ್ದರಿಂದ, ಸರ್ಕಾರ, ವಿಪಕ್ಷ, ತಜ್ಞರು ಮತ್ತು ಜಿಲ್ಲಾಡಳಿತ ಎಲ್ಲರು ಒಟ್ಟಾಗಿ ಜಿಲ್ಲೆಗೆ ಯಾವ ಮಾದರಿ ಸೂಕ್ತ ಎಂಬುದನ್ನು ಬೇಗ ಅಂತಿಮಗೊಳಿಸಬೇಕು. ರಾಜಕೀಯ ಚರ್ಚೆಗಳು ನಂತರಕ್ಕೂ ನಡೆಯಲಿ, ಆದರೆ ವೈದ್ಯಕೀಯ ಕಾಲೇಜು ಮೊದಲ ಆದ್ಯತೆ ಆಗಲಿ ಎಂದು ಬಸವರಾಜ ಹೂಗಾರ ಒತ್ತಾಯಿಸಿದ್ದಾರೆ.

