ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಮೋಹನ ನಾಯಿಕ್ ಹೇಳಿದರು.
ಪಟ್ಟಣದ ಕಲ್ಮೇಶ್ವರ ಹಿರೇಮಠ ಆವರಣದಲ್ಲಿ ಸೂಗಮ್ಮ ಹಿರೇಮಠ ಎಂಬುವವರಿಗೆ ೧.೩೫ ಲಕ್ಷ ರೂ.ಗಳ ವೆಚ್ಚದ ವಾತ್ಸಲ್ಯ ಮನೆ ಹಸ್ತಾಂತರಿಸಿ ಮಾತನಾಡಿದರು. ಯೋಜನೆಯಡಿ ಈಗಾಗಲೇ ಸಿಂದಗಿ ಕಾರ್ಯಕ್ಷೇತ್ರದಲ್ಲಿ ೫ ಮನೆಗಳನ್ನು ನಿರ್ಮಿಸಿ ನೀಡಲಾಗಿದೆ. ಕೆರೆಗಳ ಹೂಳೆತ್ತುವ ಕಾರ್ಯ, ಶೈಕ್ಷಣಿಕ ಸಂಸ್ಥೆಗಳಿಗೆ ಶಿಕ್ಷಕರ ನೇಮಕಾತಿ ಹಾಗೂ ನಿರ್ಗತಿಕ ಮಹಿಳೆಯರಿಗೆ ಮಾಸಾಶನ ವಿತರಣೆಯಂತಹ ಹಲವಾರು ಜನೋಪಯೋಗಿ ಕಾರ್ಯ ಮಾಡಲು ಮುಂದಾಗಿದೆ ಇದರ ಸದುಪಯೋಗವನ್ನು ಪಡೆದವರು ಜೀವನ ರೂಪಿಸಿಕೊಂಡು ಸರಳವಾಗಿ ಬದುಕು ಸಾಗಿಸುತ್ತಿದ್ದಾರೆ ಎಂದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ ಹಾಗೂ ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎನ್.ಬಸವರೆಡ್ಡಿ ಮಾತನಾಡಿ, ಯೋಜನೆಯ ಕಾರ್ಯವನ್ನು ಶ್ಲಾಘಿಸಿದರು.
ತಾಲ್ಲೂಕು ಯೋಜನಾಧಿಕಾರಿ ಬಿನೋಯ್, ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಕೆ.ಕುದರಿ, ಕಾಸುಗೌಡ ಬಿರಾದಾರ, ಪಂಚಾಕ್ಷರಿ ಮಿಂಚನಾಳ, ಸೋಮಶೇಖರ ಹಿರೇಮಠ, ವಿಶ್ವನಾಥ ಸದಲಗೆ, ಸೋಮು ದೇವೂರ, ಕೆ.ಎಂ.ನಂದಿ, ಬಸವರಾಜ ದೇವಣಗಾಂವ, ಕಾಶೀನಾಥ ಹಿರೇಮಠ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳಾದ ನೀಲಮ್ಮಾ ಬಿರಾದಾರ, ರೇಣುಕಾ ಬಿರಾದಾರ, ಕಮಲಾ ಬಾಗೇವಾಡಿ, ಭಾಗೀರಥಿ ದೇಗಿನಾಳ, ಒಕ್ಕೂಟದ ಅಧ್ಯಕ್ಷರಾದ ಪದ್ಮಾ ಬಾಸುತ್ಕರ್, ಶಕುಂತಲಾ ಬಿರಾದಾರ, ಮಮತಾಜ್ ನರಸಣಗಿ ಇದ್ದರು.

