ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ೨೦೦೦-೨೦೦೭ ರವರೆಗೆ ಇಲ್ಲಿಯ ಜವಾಹರ ನವೋದಯ ವಿದ್ಯಾಲಯದಲ್ಲಿ ಆರನೇ ವರ್ಗದಿಂದ ಪಿಯುಸಿ ವರೆಗೆ ಕಲಿತಿದ ವಿದ್ಯಾರ್ಥಿಗಳು ಪ್ರವೇಶ ಪಡೆದು ೨೫ ವರ್ಷದ ಸ್ಮರಣೆಗಾಗಿ ಎಲ್ಲಾ ಹಳೆ ವಿದ್ಯಾರ್ಥಿಗಳು “ಸ್ನೇಹಯಾನ ೨ಕೆ೨೫’ ಎಂಬ ಬೆಳ್ಳಿ ಹಬ್ಬ ಆಚರಿಸಿ ಸಂಭ್ರಮಿಸಿದರು.
ಭಾನುವಾರ ನಡೆದ ಈ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ದೇಶದ ನಾನಾ ಕಡೆ ಕಾರ್ಯನಿರ್ವಹಿಸುತ್ತಿರುವ ಆ ಬ್ಯಾಚ್ ನ ೭೦ ಕ್ಕೂ ಅಧಿಕ ವಿದ್ಯಾರ್ಥಿಗಳು ಅಲ್ಲಿ ಸೇರಿದ್ದರು.
ಈ ವಿದ್ಯಾಲಯದ ನಿವೃತ್ತ ಪ್ರಾಚಾರ್ಯ ರಾಘವನ್ ಕಾವಲನ್, ನಿವೃತ್ತ ಉಪಪ್ರಾಚಾರ್ಯ ಎಸ್.ಆರ್. ಅಂಗಡಿ ಮತ್ತೀತರರು ಮಾತನಾಡಿ ಈಚೆಗೆ ಮನುಷ್ಯನಲ್ಲಿ ಸ್ವಾರ್ಥ ಭಾವನೆ ಹೆಚ್ಚಾಗುತ್ತಿದ್ದು, ಸಂಬಂಧಗಳು ಮಹತ್ವ ಕಳೆದುಕೊಳ್ಳುತ್ತಿವೆ. ಜಂಜಾಟಮಯದ ಬದುಕಿನಲ್ಲಿ ಯಾರಿಗೂ ಪುರಸೊತ್ತಿಲ್ಲ ಎಲ್ಲರೂ ಒಂದೊಂದು ಕಾಯಕದಲ್ಲಿ ತಲ್ಲೀನರಾಗಿದ್ದಾರೆ. ಆಧುನಿಕತೆಯ ಸ್ಪರ್ಶದ ಸೋಗಿನಲ್ಲಿ ಯುವಜನತೆ ಮಮತೆ, ಸಹಾನುಭೂತಿ, ದಯೆ, ಕರುಣೆ, ಕನಿಕರ, ಸುವಿಚಾರ, ಸೌಜನ್ಯ ಮಾನವೀಯತೆ ಮರೆಯುತ್ತಲಿದ್ದಾರೆ. ಇಂಥ ವಾತಾರಣದಲ್ಲಿ ೨೫ ವರ್ಷಗಳ ಹಿಂದೆ ಕಲಿತ ವಿದ್ಯಾರ್ಥಿಗಳೆಲ್ಲಾ ಸೇರಿ ಕಲಿಸಿದ ಶಿಕ್ಷಕರನ್ನು ಕರೆಯಿಸಿ ಸನ್ಮಾನಿಸಿದ್ದು ಮರೆಯಲಾಗದ್ದು’ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾಲಯದ ಪ್ರಭಾರ ಪ್ರಾಚಾರ್ಯೆ ಎ.ಎಸ್. ಅಂಜಲಿ ಮಾತನಾಡಿದರು.
ಶಾಲೆಯ ಆಗಿನ ಸಿಬ್ಬಂದಿಗಳಾದ ಆರ್.ಬಿ. ಅಫ್ರಾಜ್, ಅರವಿಂದ ಪಾಸೋಡಿ, ಎಂ,ಬಿ,. ಸಣ್ಣಕ್ಕಿ, ಶಂಕ್ರಪ್ಪ, ಶಶಿಕಲಾ ಅಚ್ಚಲಕರ, ಶಿವರಾಜ ಪ್ಯಾಟಿ, ಶಿವಗೊಂಡ ಕುಕನೂರ, ಸರೋಜಿನಿ ನಾಡಗೌಡ, ರೇಖಾ ಥಿಟೆ, ಎಸ್.ಆರ್. ಹೊನ್ನೂರ ಮತ್ತೀತರರನ್ನು ಹಳೆ ವಿದ್ಯಾರ್ಥಿಗಳು ಆತ್ಮೀಯವಾಗಿ ಸನ್ಮಾನಿಸಿದರು.
ಹಳೆ ವಿದ್ಯಾರ್ಥಿಗಳ ಪ್ರತಿನಿಧಿ ಸಂಗಮೇಶ ಗೌರಿ, ಶಿವಲೀಲಾ ಮುಳಿಮಣಿ, ಅಮರ ಭಿಸೆ, ಪ್ರೀತಿ ನಂದಿ, ಅರ್ಚನಾ ದೇಸಾಯಿ, ರುದ್ರಗೌಡ ಪಾಟೀಲ, ಶ್ರೀಕಾಂತ ಪಾಟೀಲ, ನಾಗೇಶ ಸಜ್ಜನ, ಚಿದಾನಂದ ಗಾಣೆ ಮಾತನಾಡಿದರು.
ಸೆಲ್ಫಿ, ಆರ್.ಓ ವಾಟರ್ ಕೊಡುಗೆ
ಈ ಬ್ಯಾಚ್ ನ ಎಲ್ಲರೂ ಸೇರಿ ಹಣ ಸೇರಿಸಿ ತಾವು ಕಲಿತ ಶಾಲೆಯಲ್ಲಿ “ಐ ಲವ್ ಜೆಎನ್ ವಿ ಆಲಮಟ್ಟಿ’ ಎಂಬ ಸೆಲ್ಫಿ ಪಾಯಿಂಟ್ ಒಂದು ಲಕ್ಷ ರೂ ವೆಚ್ಚದಲ್ಲಿ, ಹಾಗೂ ಪ್ರಸ್ತುತ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಕುಡಿಯುವ ನೀರಿನ ಅನುಕೂಲಕ್ಕಾಗಿ ೩ ಲಕ್ಷ ರೂ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸೇರಿ ೪ ಲಕ್ಷ ರೂವನ್ನು ಹಳೆ ವಿದ್ಯಾರ್ಥಿಗಳು ಶಾಲೆಗೆ ದೇಣಿಗೆ ನೀಡಿದರು.

