ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಾದರ ಚೆನ್ನಯ್ಯನವರ ವಚನಗಳ ಚಿಂತನೆಗಳು ಸಾಮಾಜಿಕ ಸಮಾನತೆ, ಕಾಯಕದ ಮಹತ್ವ, ಪರಿಸರ ಪ್ರಜ್ಞೆ ಮತ್ತು ಆಧ್ಯಾತ್ಮಿಕ ಪ್ರಜಾಪ್ರಭುತ್ವದ ಮೇಲೆ ಬೆಳಕು ಚೆಲ್ಲಿವೆ. ಅವರು ನಡೆ-ನುಡಿ ಸಾಮರಸ್ಯಕ್ಕೆ ಆದ್ಯತೆ ನೀಡಿದ್ದರು ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಮಂಗಳವಾರದಂದು ನಗರದ ಬಸವೇಶ್ವರ ಪಿಯು ಕಾಲೇಜಿನಲ್ಲಿ ತಾಲೂಕ ಶರಣ ಸಾಹಿತ್ಯ ಪರಿಷತ್ತು ಹಾಗೂ
ಬಸವೇಶ್ವರ ಪಿಯು ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾದರ ಚೆನ್ನಯ್ಯನವರ ಕುರಿತು ಉಪನ್ಯಾಸ ನೀಡುತ್ತಾ ಅವರು ಮಾತನಾಡಿದರು.
‘ಜಾತಿ, ಲಿಂಗ, ವರ್ಗ ಬೇಧಗಳಿಲ್ಲದೆ ಎಲ್ಲರೂ ಸಮಾನರು ಎಂದು ತಿಳಿಸಿದ ಚೆನ್ನಯ್ಯನವರು ಕಾಯಕದ ಜತೆಗೆ ಪಾರಮಾರ್ಥಿಕ ಚಿಂತನೆ ಮಾಡಿದ ಅಪರೂಪದ ವಚನಕಾರರಾಗಿದ್ದಾರೆ. ಸತ್ಯ ಶುದ್ಧ ಕಾಯಕಕ್ಕೆ ಹೆಸರಾದ ಅವರ ವಚನಗಳು ಇಂದಿನ ಬದುಕಿನ ತಲ್ಲಣಗಳಿಗೆ ದಿವ್ಯ ಔಷಧಿಯಾಗಿವೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಎಸ್ ಆರ್ ಕುಲಕರ್ಣಿ, ‘ದಯೆ ಮತ್ತು ಧರ್ಮದ ಪರಿಕಲ್ಪನೆ, ಅಸ್ಪೃಶ್ಯತೆ, ಅನುಭಾವ, ಕಲ್ಯಾಣ ಸಮಾಜದ ನಿರ್ಮಾಣದಂತಹ ವೈಶಿಷ್ಟ್ಯಪೂರ್ಣ ಜೀವನ ಮೌಲ್ಯ ಪರಿಕಲ್ಪನೆಗಳನ್ನು ಇಡೀ ಮನುಕುಲಕ್ಕೆ ನೀಡಿದ ಗರಿಮೆ ಮಾದರ ಚೆನ್ನಯ್ಯನವರಿಗೆ ಸಲ್ಲುತ್ತದೆ’ ಎಂದು ತಿಳಿಸಿದರು.
ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಾಹೇಬಗೌಡ ಬಸರಕೋಡ ಆಶಯ ನುಡಿಗಳನ್ನಾಡುತ್ತ,
ಅರಿವು ಮತ್ತು ಆಚಾರಗಳು ಒಂದೇ ಆಗಿರಬೇಕು ಎಂಬ ನಿಲುವು ಹೊಂದಿದ್ದ ಮಾದರ ಚೆನ್ನಯ್ಯನವರ ಸಮಾಜಮುಖಿ ಚಿಂತನೆಗಳು ಇಂದಿನ ಆಧುನಿಕ ಜೀವನಕ್ಕೆ ಮಾರ್ಗದರ್ಶಿಯಾಗಿವೆ ಎಂದು ಹೇಳಿದರು.
ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಎಸ್ ಪಿ ಬಿರಾದಾರ ಮಾತನಾಡಿದರು. ಬಸಲಿಂಗಪ್ಪ ಸಾರವಾಡ, ಜಗದೀಶ ಮೋಟಗಿ, ಎಸ್ ಎಸ್ ಪಾಟೀಲ, ಬಿ ಬಿ ಪಾಟೀಲ, ಬಿ ಎಸ್ ತೇರದಾಳ, ಎಲ್ ಬಿ ಇಂಗಳೆ, ಬಿ ಎಸ್ ಆಲಮೇಲ, ಪಿ ಎಸ್ ಲಾಳಸಂಗಿ ಸೇರಿದಂತೆ ಕಾಲೇಜಿನ ಉಪನ್ಯಾಸಕ ವರ್ಗ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜಿಲ್ಲಾ ಕಾರ್ಯದರ್ಶಿ ಈರಣ್ಣ ತೊಂಡಿಕಟ್ಟಿ ಸ್ವಾಗತಿಸಿ, ದತ್ತಿ ಕಾರ್ಯಕ್ರಮದ ಆಶೋತ್ತರಗಳನ್ನು ತಿಳಿಸಿದರು. ಉಪನ್ಯಾಸಕಿ ಜಿ ಎಸ್ ಹಳ್ಳೂರ ನಿರೂಪಿಸಿದರು. ಎಸ್ ಜಿ ಪಾಟೀಲ ವಂದಿಸಿದರು. ಕಾವ್ಯ ಅಂಕಲಕೋಟಿ ಪ್ರಾರ್ಥಿಸಿದರು.

