ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಹೃದಯ ಭಾಗ ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ಆವರಣದಲ್ಲಿನ ವೀರರಾಣಿ ಕಿತ್ತೂರ ಚೆನ್ನಮ್ಮಳ ಮೂರ್ತಿ ಅನಾವರಣ ಮಹೂರ್ತ ಫಿಕ್ಸ ಆಗಿದೆ. ಬರುವ 2026ರ ಜನೇವರಿ 4 ರಂದು ಅನಾವರಣಗೊಳಸಲಾಗುವದು ಎಂದು ವೀರರಾಣಿ ಕಿತ್ತೂರ ಚೆನ್ನಮ್ಮ ಮೂರ್ತಿ ನಿರ್ಮಾಣ ಸಮಿತಿಯ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ ಕೊಳಕೂರ ತಿಳಿಸಿದರು.
ನಗರದ ಬೆಂಗಳೂರು ರೆಸ್ಟಾರೆಂಟ್‌ನಲ್ಲಿ ಗುರುವಾರದಂದು ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ವಿದಾನ ಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರನ್ನು ಭೇಟಿಯಾಗಿ ಆಹ್ವಾನಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಆಗಮಿಸುವ ಭರವಸೆ ನೀಡಿದ್ದಾರೆ. ಇದಲ್ಲದೆ ಜಿಲ್ಲೆಯ ಸಚಿವರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಜಿಲ್ಲೆಯ ಎಲ್ಲ ಶಾಸಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
100 ಅಡಿ ಸುತ್ತಳತೆಯ ಸರ್ಕಾರಿ ಜಾಗೆಯಲ್ಲಿ ಸುಮಾರು 22 ಅಡಿ ಎತ್ತರದ 12 ಅಡಿ ಅಗಲದ ಭವ್ಯವಾದ ಈ ಮೂರ್ತಿ ನಿರ್ಮಾಣ ಕಾರ್ಯ ಕಳೆದ 2019ರಲ್ಲಿ ಆರಂಭಿಸಲಾಗಿದೆ. ಸುಂದರ ಮೂರ್ತಿ ನಿರ್ಮಾಣಕ್ಕಾಗಿ ಸಮಿತಿ ವತಿಯಿಂದ 2 ಕೋಟಿ ರೂ. ಹಣ ಖರ್ಚು ಮಾಡಿ ಪಂಚ ಲೋಹದಿಂದ ನಿರ್ಮಿಸಲಾಗಿದೆ. ಬೆಳಗಾವಿಯ ಕಿಣೇಕರ್ ಹಾಗೂ ಸಂಗಡಿಗ ಶಿಲ್ಪಿಗಳ ಕೈ ಚಳಕದಲ್ಲಿ ಈ ಮೂರ್ತಿ ನಿರ್ಮಾಣಗೊಂಡಿದೆ ಎಂದು ಹೇಳಿದರು.
ಅದ್ದೂರಿಯಾಗಿ ಈ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಕುಂಭಮೇಳ ಮೆರವಣಿಗೆ ಜರುಗಲಿದೆ. ಮೂರ್ತಿ ಅನಾವರಣ ಕಾರ್ಯಕ್ರಮದ ಬಳಿಕ ನಗರದ ರಾಣಿ ಚೆನ್ನಮ್ಮ ಸಮುದಾಯ ಭವದಲ್ಲಿ ವೇದಿಕೆಯ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ಮೂರ್ತಿ ನಿರ್ಮಾಣ ಸಮಿತಿಯ ಸದಸ್ಯರಾದ ಈರಣ್ಣ ಜುಗತಿ, ಚನ್ನಪ್ಪ ಕೂಡಗಿ, ಮುತ್ತು ಸಾವಳಗಿ, ಅಶೋಕ ಸಾಲಗಲ್ ಹಾಗೂ ವಿಜಯ ಜೋಶಿ ಉಪಸ್ಥಿತರಿದ್ದರು.

