ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾಧಿಕಾರಿಗಳಾದ ಡಾ.ಆನಂದ.ಕೆ ಅವರು ಮಂಗಳವಾರ ಬಬಲೇಶ್ವರ ತಾಲೂಕಿನ ವಿವಿಧ ತಾಲೂಕು ಕಚೇರಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ತಾಲೂಕಾಡಳಿತ ಸೌಧಕ್ಕೆ ತೆರಳಿ, ತಾಲೂಕ ಖಜಾನೆ ಹಾಗೂ ತಹಶೀಲದಾರ ಕಾರ್ಯಾಲಯದ ಇ-ಪೌತಿ, ಭೂಮಿ, ಆಧಾರ ಸಿಡಿಂಗ್ ಹಾಗೂ ಮತದಾರ ಪಟ್ಟಿ ಮ್ಯಾಪಿಂಗ್ ಪ್ರಗತಿ ಪರಿಶೀಲಿಸಿದರು. ಬಬಲೇಶ್ವರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಬಿಸಿ ಊಟದ ಅಡುಗೆ ಕೊಠಡಿ ಹಾಗೂ ಮಕ್ಕಳಿಗೆ ವಿತರಿಸುವ ಆಹಾರದ ಕುರಿತ ಪರಿಸೀಲಿಸಿ ಅಡುಗೆ ಸಹಾಯಕರೊಂದಿಗೆ ಚರ್ಚಿಸಿ, ಅವರ ಕುಂದು-ಕೊರತೆ ಸಮಾಲೋಚನೆ ನಡೆಸಿದರು.
೭ನೇ ತರಗತಿ ಮಕ್ಕಳೊಂದಿಗೆ ಕನ್ನಡ ಇಂಗ್ಲೀಷ್ ವಿಷಯದ ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು, ಸತತ ಅಧ್ಯಯನ ಶೀಲತೆ ರೂಢಿಸಿಕೊಳ್ಳಬೇಕು. ಪ್ರತಿದಿನ ಪಾಠ ಮನನ ಮಾಡಿಕೊಂಡು ಅರ್ಥೈಸಿಕೊಳ್ಳಬೇಕು. ಸಮಸ್ಯೆಗಳು ಉದ್ಭವಿಸಿದರೆ ಯಾವುದೇ ಸಂಕೋಚ ಪಡದೇ ತರಗತಿ ಶಿಕ್ಷಕರಿಂದ ಪರಿಹಾರ ಕಂಡುಕೊಳ್ಳಬೇಕು. ಶಿಕ್ಷಕರು ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಕಲಿಕಾ ಬೋಧನಾ ಕ್ರಮಗಳನ್ನು ಅಳವಡಿಸಿಕೊಂಡು ಪಾಠ ಬೋಧನೆ ಮಾಡಿ, ಮಕ್ಕಳ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸಬೇಕು. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಕ್ಕಳ ಉನ್ನತಿಗೆ ಶ್ರಮಿಸಿ ಎಂದು ಹೇಳಿದರು. ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಹಾಜರಾತಿ ಪರಿಶೀಲಿಸಿ, ಪ್ರಾಥಮಿಕ ಹಂತದ ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸುವತ್ತ ಪಾಠ ಯೋಜನೆ ಹಾಕಿಕೊಂಡು ಮಕ್ಕಳ ಉತ್ತಮ ಭವಿಷ್ಯ ರೂಪಿಸಬೇಕು ಎಂದು ಹೇಳಿದರು.
ಬಬಲೇಶ್ವರದ ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಅವರು, ವಿವಿಧ ಯೋಜನೆಗಳು ಅನುಷ್ಠಾನ, ವಿವಿಧ ದಾಖಲೆಗಳ ಅವಲೋಕಿಸಿ, ಅಗತ್ಯ ಸಲಹೆ ಸೂಚನೆ ನೀಡಿದರು. ಇಂದಿರಾ ಕ್ಯಾಂಟೀನಿಗೆ ತೆರಳಿ, ಅಡುಗೆ ಕೊಠಡಿಯಲ್ಲಿ ಶುಚಿತ್ವ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಆಹಾರ ಗುಣಮಟ್ಟ ಹಾಗೂ ದೈನಂದಿನ ವಿತರಿಸುವ ಆಹಾರದ ಸೂಚಿಯಂತೆ ಆಹಾರ ವಿತರಣೆಗೆ ಆದ್ಯತೆ ನೀಡಬೇಕು. ಆಹಾರದ ಗುಣಮಟ್ಟ ಹಾಗೂ ವಿಧಿಸುವ ಆಹಾರದ ದರ ಕುರಿತು ಕ್ಯಾಂಟೀನ್‌ನಲ್ಲಿದ್ದ ಜನರೊಂದಿಗೆ ಚರ್ಚಿಸಿದರು. ಅಡುಗೆ ಸಹಾಯಕರಿಗೆ ಶುದ್ಧ ಆಹಾರ ನೀಡುವ ಬಗ್ಗೆ ಸಲಹೆ ನೀಡಿದರು.
ಬಬಲೇಶ್ವರ ಹೊರ ವಲದಲ್ಲಿರುವ ಕಾಮಗಾರಿ ಹಂತದಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಕಾಮಗಾರಿಯ ಬಗ್ಗೆ ಪರಿಶೀಲಿಸಿ ಸಂಬಂದಪಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿದರು. ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ಬೀಜಗೊಬ್ಬರ ವಿತರಣೆ ಬಗ್ಗೆ ಪರಿಸೀಲಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಶಾಂತಲಾ ಚಂದನ ಸೇರಿದಂತೆ ವಿವಿಧ ಇಲಾಖೆಯ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

