ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಹುಣಶ್ಯಾಳ ಗ್ರಾಮದಿಂದ ಕಲಕೇರಿ ಕ್ರಾಸ್‌ವರೆಗೆ ಸಂಪೂರ್ಣ ಹಾಳಾದ ರಸ್ತೆಯನ್ನು ಗ್ರಾಮಸ್ಥರೇ ಹಣ ಸಂಗ್ರಹಿಸುವುದರ ಮೂಲಕ ತಾವೇ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ.
ತಾಲ್ಲೂಕಿನ ಹುಣಶ್ಯಾಳ ಗ್ರಾಮದ ಗ್ರಾಮಸ್ಥರು ಹಲವು ಬಾರಿ ಪತ್ರಿಕೆಯ ಮೂಲಕ ಗ್ರಾಮದ ರಸ್ತೆ ನಿರ್ಮಾಣದ ಕುರಿತು ಶಾಸಕರಿಗೆ ಮನವಿ ಮಾಡಿದ್ದರೂ ಶಾಸಕರು ಸ್ಪಂದಿಸದ ಕಾರಣ ಸ್ವತಃ ತಾವೇ ಪ್ರತಿ ಮನೆಗೆ ೫೦೦ ರೂಗಳ ಹಣ ಸಂಗ್ರಹಿಸುವುದರ ಮೂಲಕ ಗ್ರಾಮದಿಂದ ಕಲಕೇರಿ ಕ್ರಾಸ್‌ವರೆಗಿನ ಅರ್ಧ ಕಿ.ಮೀ ರಸ್ತೆ ನಿರ್ಮಾಣದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಶಾಂತಗೌಡ ಕೋಟಿಖಾನಿ ಮಾತನಾಡಿ, ರಸ್ತೆ ಅಭಿವೃದ್ಧಿ ಕುರಿತು ಶಾಸಕರಲ್ಲಿ ಮೊಬೈಲ್ ಮೂಲಕ ವಿನಂತಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಶಾಸಕರ ನಡೆ ನಮಗೆ ಬೇಸರ ತಂದಿದೆ. ಅವರ ಬೇಜವಾಬ್ದಾರಿ ಹೇಳಿಕೆಯಿಂದ ಬೇಸತ್ತು ಕೊನೆಗೆ ಗ್ರಾಮಸ್ಥರ ನೆರವು ಹಾಗೂ ಸಹಕಾರದೊಂದಿಗೆ ರಸ್ತೆ ನಿರ್ಮಿಸಲಾಗುತ್ತಿದೆ. ಈ ಕಾರ್ಯದಲ್ಲಿ ಕಲಕೇರಿ ಗ್ರಾಮದ ಶಿವರಾಯ ಮೋಪಗಾರ ಡಂಪರ್ ನೀಡಿ ಸಹಕಾರ ನೀಡಿದ್ದಾರೆ. ಎಂದರು.
ಈ ರಸ್ತೆಯ ಹೊರತಾಗಿ ಗ್ರಾಮದಿಂದ ಕಾಲುವೆಯವರೆಗಿನ ರಸ್ತೆಯು ಸಹ ಸಂಪೂರ್ಣ ಹಾಳಾಗಿದೆ. ಇಲ್ಲಿ ಖಾಸಗಿವಾಹನ ಅಥವಾ ದ್ವಿಚಕ್ರವಾಹನಗಳ ಮೂಲಕ ಸಂಚರಿಸುವವರ ಪರಿಸ್ಥಿತಿ ಹೇಳತೀರದು. ತಗ್ಗು ದಿನ್ನೆಗಳಿಂದ ಕೂಡಿದ ರಸ್ತೆಯಲ್ಲಿ ವಾಹನಗಳು ಧೂಳ ಎಬ್ಬಿಸುತ್ತಾ, ತೆವಳುತ್ತಾ ನಿಧಾನವಾಗಿ ಚಲಿಸಿದರೆ, ಅದರಲ್ಲಿ ಕುಳಿತವರು ಬೆಳಿಗ್ಗೆ ಶುಭ್ರಬಟ್ಟೆಗಳೊಂದಿಗೆ ಹೊರಟವರು ಧೂಳುಮಯವಾಗಿ ಮರಳುವಂತಾಗಿದೆ. ಇನ್ನೂ ಆನೆಮಡು, ಸಲಾದಹಳ್ಳಿ, ಚಟ್ನಳ್ಳಿ, ಅಸಂತಾಪೂರ ಗ್ರಾಮಗಳಿಂದ ನಿತ್ಯ ಅಗತ್ಯ ಕೆಲಸಗಳಿಗೆ ಪಂಚಾಯಿತಿಗೆ ಬರುವವರು ಸಹ ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ.
ಗ್ರಾಮದಿಂದ ಕಲಬುರಗಿ, ಯಾದಗಿರಿ, ಆಲಗೂರ, ಗೋಲಗೇರಿ, ಮಳ್ಳಿ, ಕೆಂಭಾವಿ, ಯಡ್ರಾಮಿ, ಶಹಾಪೂರಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯೇ ಇದಾಗಿದ್ದು ಇಲ್ಲಿ ನಿತ್ಯ ನೂರಾರು ವಾಹನಗಳು, ದ್ವಿಚಕ್ರ ಸವಾರರು ಪ್ರಯಾಣಿಸುತ್ತಾರೆ. ಇವರ ನಿತ್ಯ ಕೆಲಸಗಳಿಗೆ ಹಾಗೂ ಮುಖ್ಯವಾಗಿ ಸುಗಮ ರಸ್ತೆ ಪ್ರಯಾಣಕ್ಕೆ ಸುಸಜ್ಜಿತ ರಸ್ತೆ ಅಗತ್ಯವಾಗಿದೆ.
ಗ್ರಾಮದ ರಸ್ತೆಗೆ ಕ್ಷೇತ್ರದ ಶಾಸಕರು ಒಂದು ಬಾರಿ ಖುದ್ದಾಗಿ ಬಂದು ರಸ್ತೆಯ ಅನುಭವ ಪಡೆದು ನಂತರವಾದರೂ ರಸ್ತೆ ನಿರ್ಮಿಸಲು ಮುಂದಾಗಬೇಕು ಎಂದು ತಾಲ್ಲೂಕು ಭೂನ್ಯಾಯ ಮಂಡಳಿ ಸದಸ್ಯ ಮೈನೂದ್ಧಿನ್ ಬಾಗವಾನ, ಶಫೀಕ್ ಸಿಪಾಯಿ, ಶಂಕ್ರಪ್ಪ ಬಂಗಾರಗುಂಡ, ಶಕೀಲ್ ಪೊಲಾಚಿ, ಮಹಮ್ಮದ್ ಬಾಗವಾನ, ಮಾಂತೇಶ ಮುರುಕನಾಳ, ಸುಭಾಸರೆಡ್ಡಿ ದೇಸಾಯಿ, ಶರಣಗೌಡ ಪಾಟೀಲ, ಇಬ್ರಾಹಿಂ ಹವಾಲ್ದಾರ್, ನಿಂಗಣ್ಣ ಪಾಕಿ ಆಗ್ರಹಿಸಿದ್ದಾರೆ.

