ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದಲ್ಲಿ ಹೆಚ್ಚಾಗುತ್ತಿರುವ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸಂತಾನಹರಣ ಚಿಕಿತ್ಸೆ ಹಾಗೂ ಲಸಿಕೆ ನೀಡಲು ಪಟ್ಟಣ ಪಂಚಾಯಿತಿಯಿಂದ ವಿಶೇಷ ತಂಡ ರಚಿಸಿ ಸಾಗಿಸಲಾಯಿತು.
ರಾಜ್ಯದಲ್ಲಿ ಸಾರ್ವಜನಿಕರು ಹಾಗೂ ಮಕ್ಕಳ ಮೇಲಿನ ನಾಯಿಗಳ ದಾಳಿ ಪ್ರಕರಣ ಹೆಚ್ಚಾದ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಮೂರು ದಿನಗಳಿಂದ ಪಟ್ಟಣ ಪಂಚಾಯಿತಿ ವಿಶೇಷ ಕಾರ್ಯಾಚರಣೆ ಕೈಗೊಂಡು ೫೦ ಕ್ಕೂ ಹೆಚ್ಚು ನಾಯಿಗಳನ್ನು ಹಿಡಿಯಲಾಗಿದೆ.
ಸರ್ವೊಚ್ಚ ನ್ಯಾಯಾಲಯದ ಮಾರ್ಗದರ್ಶನ ಹಾಗೂ ಪ್ರಾಣಿ ನಿಯಂತ್ರಣ ಮಂಡಳಿ ನಿಯಮಗಳು ೨೦೨೩ರ ಅನ್ವಯ ಬೀದಿ ನಾಯಿಗಳ ನಿರ್ವಹಣೆಗಾಗಿ ಈ ಕಾರ್ಯಚರಣೆ ಕೈಗೊಳ್ಳಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆಫ್ರೋಜ ಅಹ್ಮದ ಪಟೇಲ ಮಾಹಿತಿ ನೀಡಿ, ಉತ್ತರಪ್ರದೇಶದ ತರಬೇತಿ ಪಡೆದ ತಂಡಗಳು ಜನನಿಬಿಡ ಪ್ರದೇಶದ ಶ್ವಾನಗಳನ್ನು ಹಿಡಿದು ಎ.ಬಿ.ಸಿ ಕೇಂದ್ರಕ್ಕೆ ಸಾಗಿಸಿ ಪಶುವೈದ್ಯರ ಮೇಲ್ವಿಚಾರಣೆಯಲ್ಲಿ ಸಂತಾನಹರಣ ಚಿಕಿತ್ಸೆ ಹಾಗೂ ರೇಬಿಸ ನಿರೋಧಕ ಲಸಿಕೆ ನೀಡಿ ಮೂರು ದಿನಗಳವರೆಗೆ ಆರೈಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆ ಮುಗಿದು ಚೇತರಿಸಿಕೊಂಡ ನಾಯಿಗಳಿಗೆ ಗುರುತನ್ನು ಮಾಡಿ ಮರಳಿ ಬಿಡಲಾಗುತ್ತದೆ ಈ ಕಾರ್ಯಾಚರಣೆ ಏಳು ದಿನಗಳವರೆಗೆ ನಡೆಯಲಿದೆ. ನಾಯಿಗಳನ್ನು ಹಿಡಿಯುವ ಸಂದರ್ಭದಲ್ಲಿ ಯಾವುದೇ ರೀತಿ ಹಿಂಸೆ ಆಗದಂತೆ ಎಚ್ಚರ ವಹಿಸಲಾಗುತ್ತಿದೆ ಎಂದರು.
ಪಟ್ಟಣದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಸಂಜೆಯಾದರೆ ಹೊರಗಡೆ ಹೋಗಲು ಭಯವಾಗುತ್ತದೆ. ಚಿಕ್ಕಮಕ್ಕಳ ಮೇಲೆ ಬೀದಿ ನಾಯಿಗಳು ನಡೆಸಿದ ಮಾರಣಾಂತಿಕ ದಾಳಿಯ ಬಗ್ಗೆ ಕೇಳಿದಾಗ ಮಕ್ಕಳನ್ನು ಹೊರಗಡೆ ಆಟಕ್ಕೆ ಬಿಡಲೂ ಸಹ ಹೆದರಿಕೆ ಆಗುತ್ತದೆ ಇದಕ್ಕಾಗಿ ಸ್ಥಳೀಯ ಆಡಳಿತ ನಡೆಸುತ್ತಿರುವ ಈ ಕಾರ್ಯಾಚರಣೆ ನಾಯಿಗಳ ಸಂಖ್ಯೆ ಹಾಗೂ ಅಪಾಯವನ್ನು ತಡೆಯಬಹುದಾಗಿದೆ ಇದು ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದಲೂ ಉತ್ತಮ ನಿರ್ಧಾರ ಎಂದು ಪಟ್ಟಣದ ನಿವಾಸಿಗಳಾದ ಕಾಶೀನಾಥ ಕೋರಿ, ಕಾಶೀನಾಥ ಸಾಲಕ್ಕಿ, ರಾವುತ ಅಗಸರ, ಆನಂದ ಪರದೇಶಿಮಠ ಹೇಳುತ್ತಾರೆ.

