ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾರ್ಪೋರೇಟ್ ಕಂಪನಿಗಳು ನೀಡುತ್ತಿರುವ ಸಿ.ಎಸ್.ಆರ್. ಅನುದಾನವನ್ನು ಗ್ರಾಮೀಣ ಭಾಗದ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸದ್ಭಳಕೆ ಮಾಡಲಾಗುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ರವಿವಾರ ಬಬಲೇಶ್ವರ ತಾಲೂಕಿನ ದೂಡಿಹಾಳ ಗ್ರಾಮದಲ್ಲಿ ಶಾಹಿ ಕಂಪನಿಯ ಸಿ.ಎಸ್.ಆರ್ ಅನುದಾನದಡಿ ರೂ. 1.30 ಕೋ. ವೆಚ್ಚದಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ, ಅವರು ಮಾತನಾಡಿದರು.
ಗ್ರಾಮೀಣ ಸರಕಾರಿ ಶಾಲೆಗಳಲ್ಲಿ ಮಕ್ಕಳು ಗುಣಮಟ್ಟ ಶಿಕ್ಷಣ ಪಡೆಯಲು ಬೋಧನೆಯ ಜೊತೆಗೆ, ಕಟ್ಟಡ, ಕಲಿಕಾ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ. ಶಿಕ್ಷಕರ ಅತ್ಯುತ್ತಮ ಮಾರ್ಗದರ್ಶನದಲ್ಲಿ ರೈತರ ಮತ್ತು ಬಡ ಮಕ್ಕಳ ಕಲಿಯಲು ಉತ್ತಮ ಶೈಕ್ಷಣಿಕ ವಾತಾವರಣದ ವ್ಯವಸ್ಥೆ ಮಾಡಲಾಗುತ್ತಿದೆ. ಪಾಲಕರು ತಮ್ಮ ಮಕ್ಕಳಿಗೆ, ಅದರಲ್ಲೂ ಹೆಣ್ಣುಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಮಲಕಯ್ಯ ಹಿರೇಮಠ, ಶಾಹಿ ಕಂಪನಿಯ ಉಸ್ತುವಾರಿ ಎಂಜನಿಯರ ಧನಂಜಯಕುಮಾರ ನಾಗಸಿಂಹ, ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಕಾರಜೋಳ ಗ್ರಾ.ಪಂ ಅಧ್ಯಕ್ಷ ಸುರೇಶ ಜಾಧವ, ಮುಖಂಡರಾದ ಸೋಮನಾಥ ಕಳ್ಳಿಮನಿ, ರಾಮನಗೌಡ ಬಿರಾದಾರ, ಅಪ್ಪುಗೌಡ ಪಾಟೀಲ ಶೇಗುಣಶಿ, ಬಿ.ಡಿ.ಆಸಂಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

