ಉದಯರಶ್ಮಿ ದಿನಪತ್ರಿಕೆ
ಚಡಚಣ: ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲಾ ಪರಿಷತ್‌ನ ಆಕಳವಾಡಿ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆಗೆ ಗುಜರಾತ ರಾಜ್ಯದ ತಾಪಿದಾಸ ವಜ್ರದಾಸ ತುಲಸಿದಾಸ ಚಾರಿಟೇಬಲ್ ಟ್ರಸ್ಟ್ ನ ಮುಂಬೈ ಶಾಖೆ ವತಿಯಿಂದ ಅತ್ಯಾಧುನಿಕ ಡಿಜಿಟಲ್ ಇಂಟರ್‌ಯಾಕ್ಟಿವ್ ಸ್ಮಾರ್ಟ್ ಬೋರ್ಡ್, ಪ್ರೊಜೆಕ್ಟರ್ ಹಾಗೂ ₹1,25,000 ಮೌಲ್ಯದ ಶೈಕ್ಷಣಿಕ ಪರಿಕರಗಳನ್ನು ಉಚಿತವಾಗಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಟ್ರಸ್ಟ್ ನ ಪ್ರತಿನಿಧಿ ವಿ.ಎಂ. ಸಿಂದಗಿ ಮಾತನಾಡಿ, ಗುಜರಾತ ರಾಜ್ಯದ ತಾಪಿದಾಸ ವಜ್ರದಾಸ ತುಲಸಿದಾಸ ಚಾರಿಟೇಬಲ್ ಟ್ರಸ್ಟ್ ಕೈಗೊಂಡಿರುವ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ವಿವರಿಸಿದರು. “ಉಚಿತ ಪುಸ್ತಕ ವಿತರಣೆ, ಪ್ರೋಜೆಕ್ಟರ್ ಮತ್ತು ಸೌಂಡ್ ಸಿಸ್ಟಮ್, ಶಾಲಾ ಫರ್ನಿಚರ್ ಮತ್ತು ಡಿಜಿಟಲ್ ಸ್ಮಾರ್ಟ್ ಬೋರ್ಡ್ ವಿತರಣೆಗಳ ಮೂಲಕ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಟ್ರಸ್ಟ್ ನಿರಂತರವಾಗಿ ಕೊಡುಗೆ ನೀಡುತ್ತಿದೆ. ಸಮಾಜದ ಬೆಳವಣಿಗೆಗೆ ಬೇಕಾದ ಸ್ಥಳಗಳಲ್ಲಿ ಸಾಧ್ಯವಾದ ಮಟ್ಟಿಗೆ ದಾನ ಮಾಡುವುದೇ ನಿಜವಾದ ಸೇವೆ,” ಎಂದರು.
ಕಾರ್ಯಕ್ರಮವನ್ನು ಶಿಕ್ಷಕ ನದಾಫ ನಿರೂಪಿಸಿದರು. ಶಿಕ್ಷಕರಾದ ಡಿ.ಎಲ್. ಕಾಂಬಳೆ, ಎಸ್.ಎಂ. ಹಿರೇಮಠ ಹಾಗೂ ಶಿಕ್ಷಕಿ ಎಮ್.ಎಸ್. ಮಠಪತಿ ಸ್ವಾಗತಿಸಿದರು.
ಶಾಲೆಯ ಮುಖ್ಯಗುರು ಶಾಂತೇಶ ಇಂಗಳೆ ಮಾತನಾಡಿ, “ಟ್ರಸ್ಟ್ ನೀಡಿರುವ ಸ್ಮಾರ್ಟ್ ಬೋರ್ಡ್ ನಮ್ಮ ಮಕ್ಕಳ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಇದು ಶಾಲೆಗೆ ದೊರಕಿದ ಅತ್ಯಮೂಲ್ಯ ದಾನವಾಗಿದೆ. ಇಂತಹ ಶಿಕ್ಷಣೋತ್ಸಾಹಿ ಸಮಾಜಮುಖಿ ಕಾರ್ಯಗಳನ್ನು ಟ್ರಸ್ಟ್ ಮುಂದುವರಿಸುತ್ತಿರುವುದು ಶ್ಲಾಘನೀಯ,” ಎಂದು ಕೃತಜ್ಞತೆ ಸಲ್ಲಿಸಿದರು.
ಗುಜರಾತ ರಾಜ್ಯದ ತಾಪಿದಾಸ ವಜ್ರದಾಸ ತುಲಸಿದಾಸ ಚಾರಿಟೇಬಲ್ ಟ್ರಸ್ಟ್ ನ ಮುಂಬೈ ಶಾಖೆಯಿಂದ ಆಗಮಿಸಿದ ಪ್ರತಿನಿಧಿಗಳಿಗೆ ಮಹಾರಾಷ್ಟ್ರ ರಾಜ್ಯದ ಆಕಳವಾಡಿ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ಗ್ರಾಮಸ್ಥರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್‌ಎಂಸಿ ಅಧ್ಯಕ್ಷ ಪ್ರಕಾಶ ವಾಲೆಕರ, ಶಿಕ್ಷಕರಾದ ಸತೀಶ ಜತ್ತಿ, ಸಿದ್ದಪ್ಪ ಮಡಸನಾಳ, ಸಿದ್ದಣ್ಣ ಹತ್ತಳ್ಳಿ, ಗುರುಪಾದ ಕಲ್ಯಾಣಿ ಸೇರಿದಂತೆ ಗ್ರಾಮದ ಅನೇಕ ಗಣ್ಯರು, ಮುಖಂಡರು, ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

