ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಉತ್ತಮ ಅಂಶಗಳನ್ನು ಅನುಕರಣೆಯ ಮೂಲಕವಾದರೂ ಅಭ್ಯಾಸ ಮಾಡಲೇ ಬೇಕಾಗಿದೆ ಎಂದು ವಿದ್ಯಾ ಭಾರತಿ ಜಿಲ್ಲಾ ಅಧ್ಯಕ್ಷ ಪ್ರಭುಲಿಂಗ ಕಡಿ ಹೇಳಿದರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಪುರಸಭೆ ಸದಸ್ಯೆ ಸಂಗಮ್ಮ ಹಣಮಂತ ದೇವರಳ್ಳಿಯವರ ಮನೆಯ ಸಭಾಂಗಣದಲ್ಲಿ ಶಿರಸಿ ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಯತಿವರೇಣ್ಯರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಆಯೋಜಿಸಿರುವ ಭಗವದ್ಗೀತಾ ಅಭಿಯಾನದ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಭಿಯಾನದ ಅರಿವು ವ್ಯಕ್ತಿವ್ಯಕ್ತಿಯನ್ನು ತಲುಪಿಸಬೇಕಾದಲ್ಲಿ ಗೃಹ ಕೇಂದ್ರೀಕೃತವಾಗುವುದು ಸೂಕ್ತ. ಗೃಹ ಕೇಂದ್ರೀಕೃತದ ನಂತರದಲ್ಲಿ ಮನಕೇಂದ್ರೀಕೃತವಾಗಲು ಈ ರೀತಿ ಸತ್ಸಂಗಗಳು ತೀರಾ ಅವಶ್ಯಕ. ಗೀತಾ ಅಭಿಯಾನ ಬಹಳ ಮಹತ್ವವಿದೆ. ಈ ರೀತಿ ಅಭಿಯಾನದಿಂದ ನಾವು ನಮ್ಮ ಬದುಕನ್ನು ಅರ್ಥಮಾಡಿಕೊಳ್ಳ ಬೇಕಾಗಿದೆ. ಭಗವದ್ಗೀತೆ ಓದುವುದು ಎಂದರೆ ಕೃಷ್ಣ ಪರಮಾತ್ಮನೊಂದಿಗೆ ನೇರವಾಗಿ ಮಾತನಾಡಿದಂತೆ. ನಮ್ಮ ಪರಂಪರೆಯನ್ನು ನಾವು ಮೊದಲು ನಮ್ಮ ನಮ್ಮ ಮನೆಯಿಂದ ಹಿಡಿದು ಸಮಾಜಕ್ಕೆ ತಲುಪಿಸುವ ವ್ಯವಸ್ಥೆ ಮಾಡಬೇಕಾಗಿದೆ ಎಂದರು.
ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಮಾತನಾಡಿ ಭಗವದ್ಗೀತೆ ಕೇವಲ ಪೂಜಾ ಮಂದಿರದಲ್ಲಿ ಪೂಜಿಸಿ ಆರಾಧಿಸುವ ಗ್ರಂಥವಲ್ಲ. ಅದನ್ನು ಓದಿ ಅರ್ಥೈಸಿಕೊಂಡರೆ ಸಾಲದು ಅದರಂತೆ ನಡೆದರೆ ಮಾತ್ರ ಬದುಕು ಹಸನಾಗುತ್ತದೆ ಎಂದರು.
ನಿವೃತ್ತ ಉಪನ್ಯಾಸಕ ಬಿ.ನಾಗರಾಜ, ಪ್ರಶಿಕ್ಷಕಿ ಪ್ರಭಾ ಹೆಬ್ಬಾರ ಭಗವದ್ಗೀತೆಯ ಕುರಿತು ಮಾತಾನಡಿದರು. ಈ ಸಂದರ್ಭದಲ್ಲಿ ಅಭಿಯಾನ ಸಮಿತಿಯ ಅಧ್ಯಕ್ಷ ಶ್ರೀಶೈಲ ದೊಡಮನಿ, ಪುರಸಭೆ ಸದಸ್ಯೆ ಸಹನಾ ಬಡಿಗೇರ, ಸಂಘದ ಹಿರಿಯರಾದ ಜಗನ್ನಾಥ ಗೌಳಿ, ಪ್ರಶಿಕ್ಷಕ ಸಂತೋಷ ನಾಲತವಾಡ, ನ್ಯಾಯವಾದಿ ಜಯಾ ಸಾಲಿಮಠ, ಪ್ರಶಿಕ್ಷಕ ಬಿ.ಆರ್.ಬೆಳ್ಳಿಕಟ್ಟಿ, ಶಶಿಕಲಾ ಕಡಿ, ರಂಜಿತಾ ಭಟ್ಟ, ನಿವೃತ್ತ ಶಿಕ್ಷಕಿ ಲಕ್ಮೀಬಾಯಿ ತಾಡಪತ್ರೆ, ಸಂಚಾಲಕ ರಾಮಚಂದ್ರ ಹೆಗಡೆ ಸೇರಿದಂತೆ ಮತ್ತೀತರರು ಇದ್ದರು.

