ಪಾಸ್ ಪೋರ್ಟ್ ಚಿತ್ರಗಳದ್ದು ಒಂದು ಕತೇನೆ. ಎದಕೋ ಬೇಕಾಗಿರ್ತವೆ ‘ತಕ್ಕೋತೀವಿ’, ಪ್ರತಿ ಸಲ ಒಂದೊಂದು ನಮೂನಿ ಬರರ್ತವೆ. ಹಂಗೇ ಇಟ್ಕೋತೀವಿ. ಆರೇಳು ವರ್ಷಗಳ ಹಿಂದೆ ‘ತಕ್ಕೊಂಡ’ ಈ ಚಿತ್ರ ಈಗಲೂ ನಂಗೆ ಇಷ್ಟ.
**
ಮೊದ್ಲೆಲ್ಲ ಫೋಟೊ ತಕ್ಕೊಂಡ ಮ್ಯಾಲ ‘ತೊಳೀಬೇಕ್ರಿ’, ಇನ್ನು ಪ್ರಿಂಟ್ ಆಗಿಲ್ಲ ಅಂತ ಸ್ಟುಡಿಯೋಗೆ ಎಡತಾಕಿಸುತ್ತಿದ್ದರು. ಹೆಂಗ್ ಬಂದಾವೋ ಎಂದು ಚಡಪಡಿಸಿ ಕಾಯ್ತಿದ್ದೆವು. ಈಗೇನಿಲ್ಲ. ಇನ್ನೂ ನಾವು ಸರಿಯಾಗಿ ನಿಂತೇ ಇರಲ್ಲ, ಕ್ಲಿಕ್ ಅನಿಸಿ, ಸಣ್ಣ ಮಶೀನದಾಗ ಸರ್ರಂತ ಪ್ರಿಂಟ್ ತಗದೇ ಬಿಡ್ತಾರ. ಹೆಂಗ್ ಯಾಕ ಫೋಟೊ ಬರ್ಲಿ, ಅದನ್ನ ಬೇಕಾದಕಡೀಗಿ ‘ಅಲ್ಲೇ ಮೆತ್ತೋ’ ಗಡಿಬಿಡೀಲಿ ನಾವಿರ್ತೀವಿ. ಹೆಂಗ್ ಬಂದದ ನೋಡೋಕೆ ಹೋಗಲ್ಲ. ಅರ್ಜಿ ತುಂಬಬೇಕು!
**
ಮೊದಲು ಫೋಟೊಗ್ರಾಫರ್ ತನ್ನ ಕ್ಯಾಮರಾ ಸಜ್ಜು ಮಾಡ್ಕೊಳ್ಳೋಕೆ ಐದು ನಿಮಿಷ ಮಾಡ್ತಿದ್ದ. ಅಷ್ಟೊತ್ರಲ್ಲಿ ನಾವು ಒಳಗ ಕನ್ನಡಿ ಮುಂದ ನಿಂತು ಚಂದಗೆ ಹಿಕ್ಕೊಂಡು, ಪೌಡರ್ ಹಚಗೋಂಡು ಟ್ರಿಮ್ ಆಗ್ತಿದ್ದೆವು. ಆತ ಬೇಸರಿಸದೇ ಎರಡುಮೂರು ಸರ್ತಿ ಕ್ಲಿಕ್ ಮಾಡಿ, ಪ್ರೀತಿಯಿಂದ ಫೋಟೊ ತಗೀತಿದ್ದ.. ನಗ್ತಿದ್ದ.
**
ಆದ್ರ ಈಗ ಯಾರಿಗೂ ಪುರುಸೊತ್ತಿಲ್ಲ. ಯಾವುದೋ ಲಾಭಕ್ಕೆ ಎಲ್ಲೆಲ್ಲೋ ‘ಫೋಟೂ ಮೆತ್ತುವ’ ಫಲಾನುಭವಿಗಳಾಗುವ ಸ್ವಾರ್ಥ ಮತ್ತು ಧಾವಂತ ನಮಗೆ! ಈಗ ಫೋಟೊ ಸ್ಟುಡಿಯೋಗಳಲ್ಲಿ ಪೌಡರ್ ಕೂಡ ಇಲ್ಲ. ಹಣಗೀ ಅಂತೂ ದೂರ.
ಎಲ್ಲ ಆಫೀಸುಗಳ ಮುಂದ ಜನ ಜಂಗುಳಿ ಇರ್ತದೆ. ಪೇಪರ್ ಗಳಿಗೆ ಮೆತ್ತೋಕೆ ಫೋಟೊ ಕೇಳ್ತಾರೆ ಅಲ್ಲಿ. ನಾವು ಗಡಿಬಿಡೀಲಿ ಬಂದು ಫೋಟೂ ತಕ್ಕೋತೀವಿ. ಝರಾಕ್ಸ್ ಮಾಡ್ಕೋತೀವಿ. ನಾವು ಮನುಷ್ಯರಲ್ಲ, ಈಗ ಬರೀ ‘ಫಲಾನುಭವಿಗಳು’!
ಅಷ್ಟಕ್ಕೂ ಫಲ ಅಂದ್ರ ಏನು.. ಎರಡು ಫೋಟೊ, ನಾಲ್ಕು ಝರಾಕ್ಸು!
‘ಏನ್ರಿ ನಮ್ದಿನಾ ಕೆಲಸಾ ಆಗಿಲ್ಲ, ಏನ್ ಗೋರ್ಮೆಂಟ್ರಿ ಇದು ಸುಡಗಾಡು’ ಅಂತ ಗೋಳಾಡ್ತೀವಿ. ಸ್ವಲ್ಪ ದಿನಾ ಆಗಾನ ಮತ್ತ ಫೋಟೊ ತಕ್ಕೋತೀವಿ. ನಾಲಿಗೆ ಉಗುಳ ತಗೋಂಡು ಅಂಟ್ ಹಚ್ತೀವಿ.
**
ನಿಜವಾಗಿ ನಾವೆಲ್ಲ ಎಲ್ಲಿಗೆ ಹೂರಟೀವಿ? ಅರ್ಜಿ ತುಂಬೋಕಾ.. ಅಂಟ್ ಹಚ್ಚೋಕಾ? ಬದುಕು ಬವಣೆಯ ಬಜಾರಲ್ಲಿ ಬಂದು ನಿಂತದೆ.
Related Posts
Add A Comment