ಉದಯರಶ್ಮಿ ದಿನಪತ್ರಿಕೆ
ಚಡಚಣ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ಕಾರ್ಯಕ್ರಮದ ಅಂಗವಾಗಿ, ಚಡಚಣದ ಶ್ರೀ ವಿದ್ಯಾಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆನೀಡಲಾಯಿತು.
ಕಾರ್ಯಕ್ರಮದ ಕುರಿತು ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಡಚಣ ವಲಯ ಮೇಲ್ವಿಚಾರಕರಾದ ಶಿವಯ್ಯ ಹಿರೇಮಠ ಅವರು ವಿದ್ಯಾರ್ಥಿಗಳಿಗೆ ದುಶ್ಚಟಗಳಿಂದ ದೂರವಿರಲು ಹೇಳಿದ ಅವರು ಅದರಿಂದಾಗುವ ಶಾರೀರಿಕ ಹಾನಿ,ಆರ್ಥಿಕ ಹಾನಿ, ಸಮಾಜದಲ್ಲಿ ಸಿಗುವಗೌರವದ ಹಾನಿ, ಕುಟುಂಬದ ಹಾನಿಯ ಬಗ್ಗೆ ವಿವರಿಸಿದರು.
ದುಶ್ಚಟಮುಕ್ತ ಸಮಾಜ ನಿರ್ಮಾಣದ ಅಗತ್ಯತೆಯನ್ನು ಉಲ್ಲೇಖಿಸಿದ ಅವರು, ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಪ್ರತಿಪಾದಿಸಿದರು.
ಮುಂದುವರೆದು ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಚಟುವಟಿಕೆಗಳಾದ ಸ್ವಸಹಾಯ ಸಂಘ ರಚನೆ, ಬಿ.ಸಿ. (ಬೆಲೆ ಕಟ್ಟುವ) ಕಾರ್ಯಕ್ರಮ, ಕೃಷಿ ಅಭಿವೃದ್ಧಿ, ವಿಮಾ ಸೌಲಭ್ಯ,ನಮ್ಮೂರು–ನಮ್ಮ ಕೆರೆ, ಶುದ್ಧ ಗಂಗಾ ಘಟಕ,ಸಮುದಾಯ ಅಭಿವೃದ್ಧಿ, ಜನಮಂಗಳ ಯೋಜನೆ,ಜ್ಞಾನ ವಿಕಾಸ ಕಾರ್ಯಕ್ರಮ ಹೀಗೆ ಇನ್ನು ಅನೇಕ ಮಹತ್ವದ ಯೋಜನೆಗಳ ಕುರಿತು ವಿವರಿಸಿದರು.
ಸಮುದಾಯ ಆರೋಗ್ಯ ಕೇಂದ್ರ ಚಡಚಣದ ಆಪ್ತ ಸಮಾಲೋಚಕರಾದ ಪ್ರಶಾಂತ ಸಾಳುಂಕೆ ಅವರು ಮಕ್ಕಳಿಗೆ ಧೂಮಪಾನ ಮತ್ತು ಮಧ್ಯಪಾನದಿಂದ ಉಂಟಾಗುವ ಅಪಾಯಗಳು ಹಾಗೂ ಮಾನಸಿಕ, ಶಾರೀರಿಕ ಹಾನಿಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮ ಕುರಿತು ಮಾತನಾಡಿದ ಶ್ರೀ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಪಿ. ಬೋಳೆಗಾಂವ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಆರೋಗ್ಯ ಜಾಗೃತಿ ಮೂಡಿಸುವದರೊಂದಿಗೆ, ದುಶ್ಚಟ ಮುಕ್ತ ಸಮಾಜ ನಿರ್ಮಿಸಲು ಶ್ರೀ ಧರ್ಮಸ್ಥಳ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಗಳು ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಗುರು ಆರ್.ಎಸ್. ಬಣಗಾರ, ಶಿಕ್ಷಕರಾದ ಎಸ್.ಎಸ್. ಪೂಜಾರಿ, ಬಿ.ಎಲ್. ಪೂಜಾರಿ, ಡಿ.ಎಸ್. ಬಗಲಿ ಹಾಗೂ ಎಲ್.ಬಿ. ಮಟ್ಟಿಕಲ್ಲಿಮಠ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

