ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಉತ್ತಮ ಮೂಲಸೌಕರ್ಯ, ಸುಸಜ್ಜಿತ ತರಗತಿ ಕೊಠಡಿಗಳು ಮತ್ತು ಕಲಿಕೆಗೆ ಅನುಕೂಲವಾದ ವಾತಾವರಣ ಮಕ್ಕಳ ಭವಿಷ್ಯಕ್ಕೆ ಹೊಸ ಚೈತನ್ಯ ತುಂಬುತ್ತವೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಬಬಲೇಶ್ವರತಿಕೋಟಾ ತಾಲೂಕಿನ ಕಣಮುಚನಾಳದಲ್ಲಿ ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆ ವತಿಯಿಂದ ಸಿ.ಎಸ್.ಆರ್ ಅನುದಾನದಲ್ಲಿ ನಿರ್ಮಿಸಲಾಗಿರುವ ಸರಕಾರಿ ನೂತನ ಪ್ರೌಢಶಾಲೆ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಈ ಪ್ರೌಢಶಾಲೆ ಕಟ್ಟಡ ನಿರ್ಮಾಣಕ್ಕೆ ಅದೇ ವರ್ಷದ ಜನವರಿಯಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಇದೇ ವರ್ಷಾಂತ್ಯದೊಳಗೆ ಲೋಕಾರ್ಪಣೆ ಮಾಡುವ ಭರವಸೆ ನೀಡಿದ್ದೆ. ಅದು ಈಗ ಸಾಕಾರವಾಗಿದೆ. ಸಕಾಲಕ್ಕೆ ಅನುದಾನ ನೀಡಿರುವ ಸಂಸ್ಥೆಗೆ ಕೃತಜ್ಞತೆಗಳು. ಈ ಶಾಲೆಯಲ್ಲಿ ಮಕ್ಕಳಿಗೆ ಬಿಸಿ ಊಟ ತಯಾರಿಸಲು ಗುಣಮಟ್ಟದ ಅಡುಗೆ ಮನೆ, ಭೋಜನ ಶಾಲೆ, ಉಪಾಧ್ಯಾಯರಿಗೆ ವಿರಮಿಸಿಕೊಳ್ಳಲು ಸ್ಟಾಫ್ ರೂಂ, ಶೌಚಾಲಯ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಆಧುನಿಕ ಶಾಲಾ ಕಟ್ಟಡವು ಗ್ರಾಮೀಣ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಹೊಸ ದಿಕ್ಕುನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ವಾಮೀಜಿಗಳಾದ ಶ್ರೀ ಕಲ್ಲಯ್ಯ ಅರಕೇರಿಮಠ, ಶ್ರೀ ಮಲ್ಲಿಕಾರ್ಜುನ ಹಿರೇಮಠ, ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆಯ ಉಪಾಧ್ಯಕ್ಷ ರಮೇಶ ರಾವ ಮತ್ತು ಜನರಲ್ ಮ್ಯಾನೇಜರ್ ಕಿರಣ, ಸಚಿವರ ಆಪ್ತ ಕಾರ್ಯದರ್ಶಿ ನರೇಂದ್ರ,, ಬಿಇಓ ಬಸವರಾಜ ತಳವಾರ ಎಸ್.ಡಿ.ಎಂ ,ಸಿ ಅಧ್ಯಕ್ಷ ಲಕ್ಷ್ಮಣಗೌಡ ಬಿರಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಮುಖಂಡರಾದ ವಿದ್ಯಾರಾಣಿ ತುಂಗಳ, ಮಹಾದೇವ ನಾಟೀಕಾರ, ಮಲ್ಲು ಕಲಾದಗಿ, ವಿಠ್ಠಲ ನಾಟೀಕಾರ, ಮಾದುರಾಯಗೌಡ ಬಿರಾದಾರ, ನಿಂಗೊಂಡ ಬಿರಾದಾರ, ದೇವಾನಂದ ಲಚ್ಯಾಣ, ಕಣಮುಚನಾಳ, ಸಾರವಾಡ, ಧನ್ಯಾಳ, ಅತಾಲಟ್ಟಿ ಗ್ರಾಮಗಳ ನಾನಾ ಮುಖಂಡರು ಉಪಸ್ಥಿತರಿದ್ದರು.
ಶಾಲೆಯ ಮುಖ್ಯೋಪಾಧ್ಯಾಯ ಆರ್. ಬಿ. ಪಾಟೀಲ ಸ್ವಾಗತಿಸಿದರು. ಸಹಶಿಕ್ಷಕ ಪ್ರಕಾಶ ಮನ್ನಿಕೇರಿ ನಿರೂಪಿಸಿದರು.

