ಅಕ್ಕಮಹಾದೇವಿ ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಡಿಜಿಟಲೀಕರಣ ವೇಗವಾಗಿ ಹೆಚ್ಚುತ್ತಿರುವ ಇಂದಿನ ಯುಗದಲ್ಲಿ ಸೈಬರ್ ಅಪರಾಧಗಳೂ ಆತಂಕಕಾರಿ ಮಟ್ಟಕ್ಕೆ ಏರಿದ್ದು, ಅದಕ್ಕೆ ಬಲಿಯಾಗುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳೆಯರಲ್ಲಿ ಸೈಬರ್ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ಯುಜಿ ಬ್ಲಾಕ್ ಹಾಗೂ ಪ್ರಧಾನಮಂತ್ರಿ ಉಚ್ಛತರ ಶಿಕ್ಷಣ ಅಭಿಯಾನ, ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಇವರ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ “ಡಿಜಿಟಲ್ ಸುರಕ್ಷತೆ ಮತ್ತು ಸೈಬರ್ ಜಾಗೃತಿ” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಜನತೆ ಡಿಜಿಟಲ್ ವೇದಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದು, ಡಿಜಿಟಲ್ ಸುರಕ್ಷತೆಯ ನಿರ್ಲಕ್ಷ್ಯದಿಂದ ಹಲವು ಗಂಭೀರ ದುಷ್ಪರಿಣಾಮಗಳು ಕಂಡುಬರುತ್ತಿವೆ. ಹೆಚ್ಚಾಗಿ ಮಹಿಳೆಯರೇ ಇದಕ್ಕೆ ಬಲಿಯಾಗುತ್ತಿದ್ದು, ಅವರು ದೌರ್ಜನ್ಯ ಮತ್ತು ಕಿರುಕುಳಕ್ಕೆ ಒಳಗಾಗುತ್ತಿರುವುದು ಆತಂಕಕಾರಿ. ಆದ್ದರಿಂದ ಇಂತಹ ಉತ್ತಮ ಕಾರ್ಯಗಾರಗಳನ್ನು ಆಯೋಜಿಸುವ ಮೂಲಕ ಮಹಿಳೆಯರಲ್ಲಿ ಸೈಬರ್ ಕ್ರೈಮ್ ಕುರಿತು ಅರಿವು ಮೂಡಿಸುವುದು ಅತ್ಯಂತ ಉಪಯುಕ್ತವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಸೈಬರ್ ಕಮಾಂಡ್ ಕೇಂದ್ರದ ವಿಶೇಷ ಕೋಶದ ಪೊಲೀಸ್ ವರಿಷ್ಠಾಧಿಕಾರಿ ಸವಿತಾ ಶ್ರೀನಿವಾಸ್ ಮಾತನಾಡಿ, ಮಹಿಳೆಯರ ಸಾಮಾಜಿಕ ಜಾಲತಾಣ ಖಾತೆಗಳನ್ನು ಹ್ಯಾಕ್ ಮಾಡುವ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಮಹಿಳೆಯರು ತಮ್ಮ ಡಿಜಿಟಲ್ ಸುರಕ್ಷತೆಯ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುವ ಅಗತ್ಯವಿದೆ ಎಂದರು.
ಇಂದಿನ ವೃತ್ತಿ ಜೀವನದಲ್ಲಿಯೂ ಸೈಬರ್ ಅಪರಾಧವು ದೊಡ್ಡ ಸವಾಲಾಗಿದ್ದು, ವಿಶ್ವದ ಯಾವ ಮೂಲೆಯಲ್ಲಿ ಏನು ನಡೆಯುತ್ತಿದೆ ಎಂಬ ಮಾಹಿತಿಯೂ ಕೆಲವೇ ಕ್ಷಣಗಳಲ್ಲಿ ನಮ್ಮ ಮೊಬೈಲ್‌ಗಳಿಗೆ ತಲುಪುತ್ತದೆ. ಆದರೆ, ಈ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡು ಜನರನ್ನು ಮೋಸಗೊಳಿಸುವುದು, ಬಲೆಗೆ ಬೀಳಿಸುವುದು ಹೇಗೆ ಎನ್ನುವುದರ ಕುರಿತು ದುರುದ್ದೇಶದ ಅಪರಾಧಿಗಳು ಸಂಚು ರೂಪಿಸುತ್ತಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಸೈಬರ್ ಕಮಾಂಡ್ ಕೇಂದ್ರದ ವಿಶೇಷ ಕೋಶದ ಪೊಲೀಸ್ ವರಿಷ್ಠಾಧಿಕಾರಿ ಸವಿತಾ ಶ್ರೀನಿವಾಸ್ ಅವರನ್ನು ವಿಭಾಗದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಾಗಾರದಲ್ಲಿ ಮಹಿಳಾ ವಿವಿಯ ಪಿಎಂ ಉಷಾ ಯೋಜನೆಯ ಹಿರಿಯ ನೋಡಲ್ ಅಧಿಕಾರಿ ಪ್ರೊ. ಜಿ. ಬಿ ಸೋನಾರ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಘಟಕದ ನಿರ್ದೇಶಕ ಪ್ರೊ.ಎನ್.ಎಲ್.ಮಲ್ಲಿಕಾರ್ಜುನ, ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿಯರು, ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿನಿಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಸಂಯೋಜಕ ಸಂದೀಪ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ತಹಮೀನಾ ಕೋಲಾರ ಸ್ವಾಗತಿಸಿದರು. ಸಂಶೋಧನಾ ವಿದ್ಯಾರ್ಥಿನಿ ಜಯಶ್ರೀ ತಳವಾರ ಅತಿಥಿಯನ್ನು ಪರಿಚಯಿಸಿದರು, ಅತಿಥಿ ಉಪನ್ಯಾಸಕಿ ಸುಷ್ಮಾ ಪವಾರ ನಿರೂಪಿಸಿ, ವಂದಿಸಿದರು.

ಡಿಜಿಟಲ್ ಸುರಕ್ಷತೆಯ ಅರಿವು ಅಗತ್ಯ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಖಾಸಗೀಕರಣ ಮತ್ತು ವೈಯಕ್ತಿಕ ಜೀವನದ ಬಗ್ಗೆ ನಾವು ಹೆಚ್ಚಿನ ಜಾಗೃತಿಯನ್ನು ಹೊಂದಿ ಸುರಕ್ಷಿತವಾಗಿರಬೇಕಾಗಿದೆ. ಡಿಜಿಟಲ್ ದೌರ್ಜನ್ಯ ಮತ್ತು ಸೈಬರ್ ಅಪರಾಧಗಳನ್ನು ಪತ್ತೆಹಚ್ಚಿ ಅದರ ವಿರುದ್ಧ ಕ್ರಮ ಕೈಗೊಳ್ಳುವುದು ಅತ್ಯಂತ ಮುಖ್ಯ. ಕೇವಲ ನಾವಷ್ಟೇ ಜಾಗೃತರಾಗದೆ, ಗ್ರಾಮೀಣ ಜನರು, ನಮ್ಮ ಕುಟುಂಬ ಸದಸ್ಯರು ಹಾಗೂ ಸಹಪಾಠಿಗಳಲ್ಲಿಯೂ ಡಿಜಿಟಲ್ ಸುರಕ್ಷತೆಯ ಅರಿವು ಮೂಡಿಸುವುದು ಇಂದಿನ ತುರ್ತು. ಈ ಸುರಕ್ಷತಾ ಕ್ರಮಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅತ್ಯಂತ ಉತ್ತಮ ಮಾರ್ಗ ಎಂದರು.

