ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ವ್ಯಾಪ್ತಿಯಲ್ಲಿ ಸಂಜೆ ಸುರಿದ ಅಕಾಲಿಕ ಮಳೆ ರೈತರಲ್ಲಿ ಆತಂಕಕ್ಕೆ ಕಾರಣವಾಯಿತು.
ಗುರುವಾರ ಸಂಜೆ ದಿಡೀರನೆ ಆರಂಭಗೊಂಡ ಮಳೆ ರಭಸವಾಗಿ ಸುರಿದು ದ್ರಾಕ್ಷಿ, ಕಡಲೆ ಹಾಗೂ ತೊಗರಿ ಬೆಳೆಗಾರರಲ್ಲಿ ಕಸಿವಿಸಿ ಉಂಟುಮಾಡಿತು. ಈ ಕುರಿತು ರೈತನಾಯಕರಾದ ಜಯರಾಮ್ ನಾಡಗೌಡ ಮಾತನಾಡಿ, ತೊಗರಿ, ಮೆಕ್ಕೆಜೋಳ ಬೆಳೆಗಳು ರಾಶಿ ಮಾಡುವ ಹಂತದಲ್ಲಿದೆ. ಈ ಮಳೆಗೆ ಕಾಳು ಸಿಡಿದುಹೋಗುವ ಸಾಧ್ಯತೆಗಳಿವೆ. ಕಡಲೆ ಬೆಳೆಯು ಸಹ ತನ್ನ ಹುಳುಚು ಕಳೆದುಕೊಂಡು ಮುಂದೆ ಕಡಿಮೆ ಹೂ ಬಿಡುವ ಹಾಗೂ ಬಿಡದೇ ಇರಬಹುದು. ಇನ್ನೂ ಗೋಧಿ ಸಹ ಇಟ್ಟಂಗಿರೋಗ ಎಂಬ ಬಾಧೆಗೆ ಒಳಗಾಗಿ ಕೆಂಪಾಗುವ ಸಾಧ್ಯತೆಗಳಿವೆ. ಅಲ್ಲದೆ ಹೂ ಬಿಡುವ ದ್ರಾಕ್ಷಿ ಬೆಳೆಗೆ ಸಾಕಷ್ಟು ಹಾನಿಯಾಗುವದು. ಸರ್ಕಾರದಿಂದ ಬೆಳೆ ಪರಿಹಾರ ಸ್ವಲ್ಪವಾದರೂ ಬಂದಾಯಿತಲ್ಲ ಎಂದು ಸಮಾಧಾನ ಪಡುತ್ತಿರುವಂತೆಯೇ ಮತ್ತೇ ಮಳೆ ಆರಂಭಗೊಂಡು ಉಳಿದ ಬೆಳೆಗಳಿಗೆ ಮಾರಕವಾಗುತ್ತದೆಯೋ ಎಂಬ ಸಣ್ಣ ಭಯ ಆರಂಭವಾಗಿದೆ ಎನ್ನುತ್ತಾರೆ.
ಮಳೆಯಿಂದ ರಸ್ತೆಯಲ್ಲಿ ಹರಿಯುವ ನೀರಿನ ಪ್ರಮಾಣ ನೋಡಿದಾಗ ಇನ್ನೂ ಸ್ವಲ್ಪ ದಿನ ಯಾವುದೇ ಮಳೆ ಬೇಡ. ಮುಂದೆ ಮಳೆಯಾದರೆ ಜೋಳ, ಕಡಲೆಗಳಿಗೂ ಮಾರಕ ಎಂದು ಹರನಾಳ ಗ್ರಾಮದ ಪ್ರಗತಿಪರ ರೈತ ಶಂಕರಗೌಡ ಕೋಟಿಖಾನಿ ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಾರೆ.

