ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ನಾವು ನಡೆದಾಡುವ ಈ ನೆಲ ಕುಡಿಯುವ ನೀರು , ಸೇವಿಸುವಾಗ ಗಾಳಿ ಎಲ್ಲವೂ ಈ ಪ್ರಕೃತಿಯ ಕೊಡುಗೆ ಅದಕ್ಕೆ ನಾವು ಸದಾ ಕೃತಜ್ಞರಾಗಿರಬೇಕು ಎಂಬ ಭಾವ ನಮ್ಮಲ್ಲಿ ಸದಾ ಮಿಡಿಯುತ್ತಿರುತ್ತದೆ. ಯಾವುದೇ ವಸ್ತುವಿರಲಿ ವ್ಯಕ್ತಿ ಇರಲಿ ಅವರಿಂದ ನಮಗೆ ದೊರೆಯುವ ಸಹಾಯ ಸಲಹೆ ಸಹಕಾರಗಳು ಅನುಕೂಲಕರವಾಗಿ ಪರಿಣಮಿಸಿದಾಗ ನಾವು ಅವರಿಗೆ ಗೌರವ ಮತ್ತು ಪ್ರೀತಿಪೂರ್ವಕವಾಗಿ ಧನ್ಯವಾದಗಳು ಅರ್ಪಿಸುತ್ತೇವೆ. ಇದನ್ನೇ ಕೃತಜ್ಞತೆ ಎಂದು ಹೇಳುವುದು..
ಮನುಷ್ಯನಿಗೆ ಯಾವುದೇ ವಿಷಯದಲ್ಲಿ ಸಂತಸ ತೃಪ್ತಿಗಳು ಅತ್ಯವಶ್ಯಕ. ಈ ಸಂತಸ ಮತ್ತು ತೃಪ್ತಿಗಳಿಗೆ ಪೂರಕವಾಗಿ ಕೃತಜ್ಞತೆಯು ಕಾರ್ಯನಿರ್ವಹಿಸುತ್ತದೆ.

ಹೊಲದಲ್ಲಿ ಕಾಲಿಡುವ ಮುನ್ನ ರೈತ ತನ್ನ ಭೂಮಿಗೆ ನಮಸ್ಕರಿಸಿ ಬಂಗಾರದ ಬೆಳೆ ಕೊಡು ಎಂದು ಬೇಡಿಕೊಂಡು ಬೀಜವನ್ನು ಬಿತ್ತುತ್ತಾನೆ, ನೀರು ಹಾಯ್ಸುತ್ತಾನೆ ಬೆಳೆ ಬೆಳೆಯುತ್ತಾನೆ. ಒಂದೊಳ್ಳೆಯ ಫಸಲು ಬೆಳೆದು ನಿಂತಾಗ ಸಕುಟುಂಬ ಪರಿವಾರ ಸಮೇತ ಅತ್ಯಂತ ವಿಜೃಂಭಣೆಯಿಂದ ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಆಕೆಯ ಮಡಿಲಲ್ಲಿ ನೈವೇದ್ಯವನ್ನು ಇಟ್ಟು ಎಲ್ಲರೊಂದಿಗೆ ತಾನು ಆಹಾರವನ್ನು ಸ್ವೀಕರಿಸುತ್ತಾನೆ. ಇದು ಆತ ತನಗೆ ಒಳ್ಳೆಯ ಬೆಳೆಯನ್ನು ನೀಡಿದ ಭೂಮಿತಾಯಿಗೆ ಅರ್ಪಿಸುವ ಕೃತಜ್ಞತೆಯ ಕ್ರಿಯೆ.
ಇದನ್ನು ನೋಡಿ ಗಮನಿಸುವ ಮಕ್ಕಳು ಭೂಮಿ ತಾಯಿಯಿಂದ ತಮ್ಮ ಕುಟುಂಬಕ್ಕೆ ಆಧಾರವಾಗಿ ಆಹಾರ ದೊರೆಯುತ್ತದೆ ಎಂಬ ಭಾವ ಮತ್ತು ಅದಕ್ಕೆ ತಾವು ಕೃತಜ್ಞರಾಗಿರಬೇಕು ಎಂಬ ಅರಿವು ಮೂಡುತ್ತದೆ ಮತ್ತು ಮುಂದೆ ಅವರು ಕೂಡ ಈ ಸಂಪ್ರದಾಯವನ್ನು ಪಾಲಿಸಿಕೊಂಡು ಹೋಗುತ್ತಾರೆ.
ದೇರ್ ಇಸ್ ಆಲ್ವೇಸ್ ಎ ಡಿಫರೆನ್ಸ್ ಬಿಟ್ವೀನ್ ಪ್ರಾಬ್ಲೆಮ್ ಅಂಡ್ ಕಂಪ್ಲೇಂಟ್…. ಎಂಬ ವಾಕ್ಯವನ್ನು ನೋಡಿ ಇದರಲ್ಲಿ ದೂರು ಮತ್ತು ತೊಂದರೆಗೆ ಅಗಾಧವಾದ ವ್ಯತ್ಯಾಸವಿದೆ ಎಂದು ಹೇಳುತ್ತಾರೆ. ತೊಂದರೆಗೆ ಯಾವಾಗಲೂ ಒಂದು ಪರಿಹಾರ ಇದೆ ಆದರೆ ದೂರಿಗೆ?
ದೂರಿಗೆ ಯಾವುದೇ ರೀತಿಯ ಪರಿಹಾರ ಇಲ್ಲ.
ನಾವು ಪ್ರಸ್ತುತ ಇರುವ ಪರಿಸ್ಥಿತಿಯನ್ನು ಅದು ಇರುವಂತೆಯೇ ಸ್ವೀಕರಿಸುವ ಬದಲು ಬೇರೊಂದು ರೀತಿಯಲ್ಲಿ ಇರಬೇಕಿತ್ತು ಎಂದು ಬಯಸುವ, ಇಲ್ಲದೇ ಇರುವ ಕುರಿತು ತಕರಾರು ಹೇಳುವ ನಮ್ಮ ಮನಸ್ಥಿತಿಯನ್ನು ದೂರುವುದು ಎಂದು ಹೇಳಬಹುದು.
ನಮ್ಮ ಬದುಕಿನಲ್ಲಿ ಪ್ರತಿಯೊಂದು ಜೀವಿಗೂ ವಿಶೇಷವಾದ ಸ್ಥಾನವಿದೆ. ನೂರಾರು ಜನರ ಶ್ರಮದ ಪ್ರತಿಫಲವಾಗಿ ನಮ್ಮ ತಟ್ಟೆಯಲ್ಲಿ ನಾವು ಆಹಾರವನ್ನು ಕಾಣುತ್ತೇವೆ ಎಂದರೆ ನಾವು ಅದೆಷ್ಟು ಜನರಿಗೆ ಋಣಿಯಾಗಿರಬೇಕು ಹೇಳಿ ?
ಈ ಹಿಂದೆ ಶಾಲೆಗಳನ್ನು ಸಾಲಿಗುಡಿ ಎಂದು ಕರೆಯುತ್ತಿದ್ದರು. ಶಾಲೆಗಳನ್ನು ಮಂದಿರಗಳಿಗೆ ಹೋಲಿಸುತ್ತಿದ್ದರು. ಜ್ಞಾನದ ಆಲಯವಿದು ಕೈಮುಗಿದು ಒಳಗೆ ಬಾ ಎಂಬ ಹೇಳಿಕೆಗಳನ್ನು ನಾವು ಶಾಲೆಯ ಗೋಡೆಗಳ ಮೇಲೆ ನೋಡಬಹುದು. ಪ್ರತಿಯೊಂದು ಶಾಲೆಯಲ್ಲಿ ಓದುವ ವಿದ್ಯಾರ್ಥಿಗೆ ಆ ಶಾಲೆಯ ಕುರಿತು ಅಲ್ಲಿನ ಪ್ರತಿಯೊಂದು ವಸ್ತುವಿನ ಕುರಿತು ತನ್ನದೇ ಆದ ಭಾವನಾತ್ಮಕ ಬಂಧ ಇದ್ದೇ ಇರುತ್ತದೆ. ನಾನು ಕಲಿತ ಶಾಲೆಯ ಕುರಿತು ವಿಶೇಷ ಪ್ರೀತಿ ಕೃತಜ್ಞತಾ ಭಾವವನ್ನು ಹೊಂದಿರಬೇಕಾದದ್ದು ಅತ್ಯವಶ್ಯಕ. ಈ ರೀತಿ ತನ್ನ ಶಾಲೆಯನ್ನು ಗೌರವ ಭಾವದಿಂದ ಕಾಣುವ ಮೌಲ್ಯವನ್ನು ಮಕ್ಕಳಲ್ಲಿ ಹುಟ್ಟು ಹಾಕಬೇಕಾಗಿರುವ ಕರ್ತವ್ಯ ಪಾಲಕರದ್ದು.
ಹೀಗೆ ಪ್ರಪಂಚದಲ್ಲಿರುವ ಎಲ್ಲ ವಸ್ತುಗಳನ್ನು ವ್ಯಕ್ತಿಗಳನ್ನು ಅವು ಇರುವಂತೆಯೇ ಅವುಗಳನ್ನು ಗ್ರಹಿಸಿ ಕೃತಜ್ಞತೆಯ ಭಾವದಿಂದ ನೋಡಿದಾಗ ನಮಗೆ ಅವುಗಳ ಮೌಲ್ಯದ ಕುರಿತು ಗೌರವ ಮತ್ತು ಹೆಮ್ಮೆ ಉಂಟಾಗುತ್ತದೆ.
ಒಂದೇ ಸಮನೆ ಸುರಿಯುತ್ತಿರುವ ಮಳೆಯನ್ನು ನೋಡಿ ಅಯ್ಯೋ ಈ ಮಳೆಯಿಂದ ಸಾಕು ಸಾಕಾಯ್ತು ಬಿಡ್ತಾನೆ ಇಲ್ಲ ಎಂದು ಹೇಳುವುದು ಒಂದು ರೀತಿಯಾದರೆ… ಅಂತೂ ಇಂತೂ ಒಳ್ಳೆ ಮಳೆ ಬಂತು ಎಂದು ಹೇಳುವುದು ಮತ್ತೊಂದು ರೀತಿ. ಮೊದಲನೇ ರೀತಿಯಲ್ಲಿ ನಮಗೆ ಮಳೆಯ ಕುರಿತು ನಕಾರಾತ್ಮಕ ಭಾವ ವ್ಯಕ್ತವಾದರೆ ಎರಡನೆಯ ರೀತಿಯಲ್ಲಿ ಸಂತಸದ ಸಕಾರಾತ್ಮಕ ಭಾವ ಮೂಡಿ ಬರುತ್ತದೆ. ಸುರಿದ ಮಳೆಯ ಒಂದೇ ಆದರೆ ನಾವು ಗ್ರಹಿಸುವ ರೀತಿ ವಿಭಿನ್ನ. ಸಕಾರಾತ್ಮಕ ದೃಷ್ಟಿಕೋನವು ಸಂಕುಚಿತತೆಯನ್ನು ಹೋಗಲಾಡಿಸಿ ನಮ್ಮ ಮನಸ್ಸನ್ನು ವಿಶಾಲಗೊಳಿಸುತ್ತದೆ. ವಸ್ತುಗಳನ್ನು ವ್ಯಕ್ತಿಗಳನ್ನು ಪರಿಸ್ಥಿತಿಯನ್ನು ಅದು ಇರುವಂತೆಯೇ ಸ್ವೀಕರಿಸುವ ಮನೋವೈಶಾಲತೆಯನ್ನು ನಮ್ಮಲ್ಲಿ ಹುಟ್ಟು ಹಾಕುತ್ತದೆ.
ಬದುಕಿನ ಪ್ರತಿಯೊಂದು ಹಂತದಲ್ಲಿಯೂ ನಮಗೆ ಸಹಾಯ ಸಹಕಾರ ನೀಡಿದ ಪ್ರತಿಯೊಬ್ಬರ ಕುರಿತು ನಮ್ಮಲ್ಲಿ ಇರಬಹುದಾದ, ಮತ್ತು ಇರಲೇಬೇಕಾದ ಕೃತಜ್ಞತಾ ಭಾವವನ್ನು ವ್ಯಕ್ತಪಡಿಸುವುದನ್ನು ನಮ್ಮ ಮಕ್ಕಳು ರೂಡಿಸಿಕೊಳ್ಳಲು ಪಾಲಕರಾದವರು ಖಂಡಿತವಾಗಿಯೂ ಪ್ರಯತ್ನ ಪಡಲೇಬೇಕು ಮತ್ತು ಯಶಸ್ವಿಯಾಗಲೇಬೇಕು.


