ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ೩೦೩ ಪಲಾನುಭವಿಗಳಿಗೆ ಡಿಬಿಟಿ ಮೂಲಕ ಈಗಾಗಲೇ ಹಸುಗಳಿಗಾಗಿ ಅನುದಾನವನ್ನು ರೈತರಿಗೆ ಬಿಡುಗಡೆ ಮಾಡಿಸಲಾಗಿದೆ.ಇದರಿಂದ ತಾಲೂಕಿನಲ್ಲಿ ಹಾಲು ಉತ್ಪಾದಕರ ಸಂಘಗಳ ಹೆಚ್ಚೆಚ್ಚು ನಿರ್ಮಾಣವಾಗಬೇಕು. ಮತ್ತು ರೈತರು ಜೋಡಿ ಕೃಷಿಯೆಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ಪಟ್ಟಣದ ಕೃಷಿ ಇಲಾಖೆಯ ಆವರಣದಲ್ಲಿ ವಿಜಯಪುರ ಜಿಲ್ಲಾ ಪಂಚಾಯತ್, ಸಿಂದಗಿ ಕೃಷಿ ಇಲಾಖೆ ವತಿಯಿಂದ ೨೦೨೫-೨೬ನೆಯ ಸಾಲಿನ ಜಲಾನಯನ ಅಭಿವೃದ್ಧಿ ಇಲಾಖೆಯ ಆರ್.ಎ.ಡಿ-ಆರ್.ಕೆ.ವಿ.ವಾಯ್-ಆರ್.ಎ.ಎಫ್.ಟಿ.ಎ.ಎ.ಆರ್ ಯೋಜನೆಯಡಿ ಹೈನುಗಾರಿಕೆ ಹಾಗೂ ಸಮಗ್ರ ಕೃಷಿ ಉತ್ತೇಜಸಲು ಹಸುಗಳ ವಿತರಣಾ ಕಾರ್ಯಕ್ರಮದಲ್ಲಿ ೩೩ಪಲಾನುಭವಿಗಳಿಗೆ ಹಸು ಮತ್ತು ಸ್ಪಿಂಕಲರ್‌ಗಳನ್ನು ವಿತರಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಹಸುಗಳ ಖರೀದಿಗಾಗಿ ಈಗಾಗಲೇ ತಾಲೂಕಿನಲ್ಲಿ ೩೦೩ಪಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ಬಿಡುಗಡೆಗೊಳಿಸಲಾಗಿದೆ. ಅದರಲ್ಲಿ ಸೋಮಜಾಳ ಗ್ರಾಮಕ್ಕೆ ೩೦, ಮೋರಟಗಿಗೆ ೫೩, ಬಳಗಾನೂರ ಗ್ರಾಮಕ್ಕೆ ೫೦, ನಾಗರಹಳ್ಳಿ ಗ್ರಾಮಕ್ಕೆ ೧೨, ತೋಂಟಾಪುರ ಗ್ರಾಮಕ್ಕೆ ೦೭, ಗುಡ್ಡಳ್ಳಿ ಗ್ರಾಮಕ್ಕೆ ೦೯, ವಿಭೂತಿಹಳ್ಳಿ ಗ್ರಾಮಕ್ಕೆ ೧೨, ರಾಮನಹಳ್ಳಿ ಗ್ರಾಮಕ್ಕೆ ೧೦, ಯರಗಲ್ ಬಿಕೆ ೬೩, ಗೋಲಗೇರಿ ಗ್ರಾಮಕ್ಕೆ ೬೦ ಸೇರಿ ಒಟ್ಟು ೩೦೩ ಪಲಾನುಭವಿಗಳಿಗೆ ಅನುದಾನ ಒದಗಿಸಲಾಗಿದೆ. ಇನ್ನು ರಾಂಪೂರ ಪಿಎ ಪಂಚಾಯತ್ ವ್ಯಾಪ್ತಿಗೆ ೫೦ ಹಸುಗಳು ಮಂಜೂರಾಗಿದ್ದು, ಅದರಲ್ಲಿ ೩೩ ಹಸುಗಳಿಗೆ ಹಣ ಬಿಡುಗಡೆಯಾಗಿದೆ. ಸರಕಾರದಿಂದ ವರುವ ಯೋಜನೆಯನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ವೇಳೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿ, ಕೃಷಿ ಎಂದರೆ ಕೇವಲ ಬೆಳೆಯುವುದಲ್ಲ. ಅದಕ್ಕೆ ಪೂರಕವಾದ ವಿವಿಧ ಕಾರ್ಯಗಳನ್ನು ಮಾಡುವುದಾಗಿದೆ. ಕೃಷಿ ಎಂದರೆ ಯಾಂತ್ರಿಕವಲ್ಲ. ಮೂರು ವರ್ಷದಲ್ಲಿ ಒಮ್ಮೆಯಾದರೂ ಸಾವಯವ ಕೃಷಿ ಪದ್ಧತಿ ಅಳವಡಿಕೊಳ್ಳಬೇಕು. ಫಲವತ್ತಾದ ಮಣ್ಣಿನ ಅರಿವು ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದ್ದು. ಆಲಮೇಲದಲ್ಲಿ ಹತ್ತಿ ಕೇಂದ್ರ ಪ್ರಾರಂಭ ಮಾಡಲಾಗಿದೆ. ಕೃಷಿಯಲ್ಲಿ ಸಿಬ್ಬಂದಿಗಳು ಕಡಿಮೆ ಇದ್ದರು ರೈತರಿಗೆ ಸೇವೆ ಒದಗಿಸುವ ಕಾರ್ಯ ನಿರಂತರವಾಗಿ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಅಶೋಕ ಅಲ್ಲಾಪುರ ಮಾತನಾಡಿ, ವಿಶಮುಕ್ತ ಆಹಾರಕ್ಕೆ ಆಕಳು ಮುಖ್ಯ. ಒಂದು ಆಕಳು ಒಂದು ಔಷಧಿ ಅಂಗಡಿ ಇದ್ದ ಹಾಗೆ. ಇಂದು ಸರಕಾರದ ಯೋಜನೆಗಳನ್ನು ಸದುಪಯೋಗಕ್ಕಿಂತ ಮಾಡಿಕೊಳ್ಳುವುಕ್ಕಿಂತ ದುರುಪಯೋಗ ಮಾಡಿಕೊಳ್ಳುವುದೇ ಹೆಚ್ಚಾಗಿದೆ. ಅದನ್ನು ತಡೆಗಟ್ಟುವ ಕಾರ್ಯವಾಗಬೇಕು. ರೈತರು ಮಣ್ಣಿನ ಅರೋಗ್ಯದೆಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಶಾಂತ ಸಾಣಿ, ಸಂದೀಪ ಚೌರ, ಬಸವರಾಜ ಕಾಂಬಳೆ, ಕೆಡಿಪಿ ಸದಸ್ಯ ಗಂಗಾಧರ ಚಿಂಚೊಳ್ಳಿ, ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಸುರೇಶ ಪೂಜಾರಿ ಮಹಾನಂದ ಬಮ್ಮಣ್ಣಿ, ಕೆಡಿಪಿ ಸದಸ್ಯ ನಿಂಗಣ್ಣ ಬುಳ್ಳಾ, ಪ್ರಗತಿಪರ ರೈತ ಭಾಗಪ್ಪಗೌಡ ಪಾಟೀಲ ಆಹೇರಿ, ಬಸಯ್ಯ ಹಿರೇಮಠ, ಎಪಿಎಂಸಿ ಅಧ್ಯಕ್ಷ ಯಲ್ಲಪ್ಪ ಪೂಜಾರಿ, ಶಿವಾನಂದ ಹೂವಿನಹಳ್ಳಿ, ಉಪ ನಿರ್ದೇಶಕ ಚಂದ್ರಕಾಂತ ಪವಾರ, ಸುನಂದಾ ಯಂಪುರೆ, ಜಯಶ್ರೀ ಹದನೂರ, ಆಲಮೇಲ ಕೃಷಿ ಅಧಿಕಾರಿ, ಅನಿಲ ದಶವಂತ ಸೇರಿದಂತೆ ಅನೇಕರು ಇದ್ದರು.

