ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಮಸ್ಯೆಗೆ ಒಳಗಾದ ವ್ಯಕ್ತಿಗಳಿಗೆ ಉಚಿತ ಕಾನೂನು ವ್ಯವಸ್ಥೆ ಕಲ್ಪಿಸುವ ಅವಕಾಶ ನ್ಯಾಯಾಲಯದಲ್ಲಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ನಾಗೇಶ ಮೊಗೇರ ಹೇಳಿದರು.
ಸಿಂದಗಿ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಸಿಂದಗಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಸಾರ್ವಜನಿಕ ಆಸ್ಪತ್ರೆ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಇವುಗಳ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನಿನ ಕಾಯ್ದೆಗಳ ಬಗ್ಗೆ ಮತ್ತು ಎಚ್‌ಐವಿ ಮತ್ತು ಏಡ್ಸ್ ಬಗ್ಗೆ ಯುವ ಜನತೆ ಜಾಗೃತರಾಗಬೇಕು. ಈ ರೋಗದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ, ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಈ ವೇಳೆ ವಕೀಲರಾದ ಎಸ್.ಎಸ್.ಹಂಗರಗಿ, ಡಾ.ಎಂ.ಬಿ.ಬಿರಾದಾರ, ಎಸ್.ಬಿ.ಪಾಟೀಲ ಗುಂದಗಿ ಮಾತನಾಡಿ, ಮಾನವನ ಜನನದಿಂದ ಮರಣದವರೆಗೆ ಕಾನೂನು ಬಹಳ ಅತ್ಯವಶ್ಯಕ. ಎಲ್ಲರೂ ಕಾನೂನು ಮತ್ತು ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ವಿಚಾರವಾಗಿ ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯ ಶ್ಲಾಘನೀಯ. ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಎ.ಆರ್.ಟಿ ಕೇಂದ್ರದ ಆಪ್ತ ಸಮಾಲೋಚಕ ಎಂ.ಪಿ ಸಾಗರ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಶಂಕರರಾವ ದೇಶಮುಖ, ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಪಾಟೀಲ ಗುಂದಗಿ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಎಂ.ಬಿ.ಬಿರಾದಾರ, ಸಿಂದಗಿ ಎ.ಆರ್.ಟಿ ವೈದ್ಯಾಧಿಕಾರಿ ಡಾ.ಸೋಮನಗೌಡ ಪಾಟೀಲ, ವಕೀಲರಾದ ವ್ಹಿ.ಎಲ್.ಮೋಪಗಾರ, ಎಸ್.ಎಸ್.ಹಂಗರಗಿ, ಡಾ.ಎಂ.ಆರ್.ಬಡಿಗೇರ, ಡಾ.ಶಂಕರ ರಾಠೋಡ, ಮಡಿವಾಳಮ್ಮ ಗದ್ದಗಿಮಠ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಹರಿ ಕುಲಕರ್ಣಿ ಸ್ವಾಗತಿಸಿದರು. ಕಿರಿಯ ಪ್ರಯೋಗಾಲಯ ತಾಂತ್ರಿಕಾಧಿಕಾರಿ ರಾಜು ನರಗೋದಿ ನಿರೂಪಿಸಿ ವಂದಿಸಿದರು.

