ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ರಾಜುಗೌಡ ಪಾಟೀಲ ಕೃಷಿ ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮತಕ್ಷೇತ್ರದ ಗ್ರಾಮಗಳಲ್ಲಿ ಕೆಲವು ರೈತರಿಗೆ ವಾರಸಾ ವಿಷಯದಲ್ಲಿ ಬೆಳೆ ಪರಿಹಾರ ಜಮೆ ಆಗದೇ ಇದ್ದು, ಕೂಡಲೇ ಕೃಷಿ ಇಲಾಖೆಯ ಅಧಿಕಾರಿಗಳು ಈ ಕುರಿತು ಕ್ರಮವಹಿಸಬೇಕು ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಜರುಗಿದ ೨೦೨೫-೨೬ನೇ ಸಾಲಿನ ಒಂದನೇ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಶು ಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ, ಶಾಲೆಯ ಕೋಣೆಗಳ ಲಭ್ಯತೆ, ಕಟ್ಟಡಗಳ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡಬೇಕು ಇದನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಮತಕ್ಷೇತ್ರದ ಎಲ್ಲ ಶಾಲೆಗಳ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳು, ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆಗೆ ಕ್ರಮವಹಿಸುವುದು ಹಾಗೂ ಜಾಲವಾದ ಗ್ರಾಮದ ಹೆಸ್ಕಾಂ ವಿತರಣಾ ಕೇಂದ್ರಕ್ಕಾಗಿ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಅಧಿಕಾರಿಗಳು ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆ, ಶಾಲೆಗಳ ಶೌಚಾಲಯಗಳ ಶಾಸಕರ ಗಮನ ಸೆಳೆದರು. ಜೊತೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ತಾವು ಕೈಗೊಂಡ ಕಾರ್ಯಗಳ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಸಭೆಯ ವಿಳಂಬತೆಯ ಬಗ್ಗೆ ತಾಲ್ಲೂಕು ಮಟ್ಟದ ಕೆಡಿಪಿ ಸಮಿತಿ ಸದಸ್ಯರಾದ ಮುರ್ತುಜಾ ತಾಂಬೋಳಿ ಹಾಗೂ ಪ್ರಕಾಶ ಗುಡಿಮನಿ ಆಕ್ಷೇಪ ವ್ಯಕ್ತಪಡಿಸಿ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದರು. ತಹಶೀಲ್ದಾರ ತಾಲ್ಲೂಕು ಪಂಚಾಯಿತಿ ಇಓ ಸದಸ್ಯರ ಮನವೊಲಿಸಿ ಸಭೆ ಆರಂಭಿಸಿದರು.
ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಸಿ.ಬಿ.ಕುಂಬಾರ ದೇವರಹಿಪ್ಪರಗಿ ತಹಶೀಲ್ದಾರ ಪ್ರಕಾಶ ಸಿಂದಗಿ, ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ, ಬಸವನಬಾಗೇವಾಡಿ ತಹಶೀಲ್ದಾರ ಎಸ್.ವೈ.ಸೋಮನಕಟ್ಟಿ, ಇಓ ಪ್ರಕಾಶ ದೇಸಾಯಿ, ಪಿಡಬ್ಲೂಡಿ ಎಇಇ ಎಸ್.ಜಿ.ದೊಡಮನಿ, ವ್ಹಿ.ಬಿ.ಗೊಂಗಡಿ, ತಾರಾನಾಥ ರಾಠೋಡ, ಎಸ್.ಎಮ್.ಕಪನಿಂಬರಗಿ, ಕೆಡಿಪಿ ಸಮಿತಿ ಸದಸ್ಯರು ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

