ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ವಿಳಂಬ ನೀತಿ ಅನುಸರಿಸುತ್ತಿರುವುದು ವಿರೋಧಿಸಿ ಜನಪ್ರತಿನಿಧಿಗಳ ಪಿಂಡ ಪ್ರದಾನ ಹಾಗೂ ಪ್ರತಿಕೃತಿ ದಹನ ಮಾಡಲು ಹೋರಾಟಗಾರರು ಅಣಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿದ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನಾ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸರ್ಪಗಾವಲು ಹಾಕಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಹೋರಾಟಗಾರರು ಹೋರಾಟವನ್ನು ತೀವ್ರಗೊಳಿಸಿದ್ದು ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ನಡೆಸಿದರು.
ಹೋರಾಟಗಾರರಾದ ಅರವಿಂದ ಕುಲಕರ್ಣಿ, ಮಲ್ಲಿಕಾರ್ಜುನ ಬಟಗಿ, ಅಕ್ರಂ ಮಾಶ್ಯಾಳಕರ ಸೇರಿದಂತೆ ಅನೇಕ ಹೋರಾಟಗಾರರು ಕಲ್ಲು ಹೊತ್ತುಕೊಂಡು ಪ್ರತಿಭಟನೆ ಕುಳಿತರು.
ಕಲ್ಲು ಹೊತ್ತಿಕೊಂಡೇ ಅಸಮಾಧಾನ ವ್ಯಕ್ತಪಡಿಸಿದ ರೈತ ಮುಖಂಡ ಅರವಿಂದ ಕುಲಕರ್ಣಿ, ಸರ್ಕಾರಿ ಮೆಡಿಕಲ್ ಕಾಲೇಜ್ ಜಿಲ್ಲೆಯ ಬಡಜನತೆಯ ಹಿತಕ್ಕಾಗಿ ಸ್ಥಾಪನೆಯಾಗಬೇಕು, ಈ ಉದ್ದೇಶಕ್ಕಾಗಿ ನಮ್ಮ ಹೋರಾಟ ನಡೆಯುತ್ತಿದೆ, ಆದರೆ ಈ ಹೋರಾಟವನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದರು.
ರಾಜ್ಯ ಸರ್ಕಾರವು ಪೊಲೀಸ್ ಬಲವನ್ನೇ ಇಂದು ದುರುಪಯೋಗಪಡಿಸಿಕೊಂಡು ಹೋರಾಟವನ್ನು ದಮನ ಮಾಡುವ ಹುನ್ನಾರ ನಡೆಸುತ್ತಿದೆ, ಹೋರಾಟಗಾರರ ಸುತ್ತಲೂ ಭಾರಿ ಪೊಲೀಸ್ ಪಡೆಯನ್ನು ನಿಯೋಜಿಸಿ ಸರ್ಪಗಾವಲು ಒಡ್ಡಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರು ಈ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೋರ್ವ ಹೋರಾಟಗಾರ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ವಿಜಯಪುರ ಜಿಲ್ಲೆಯ ಜನತೆ, ಜಿಲ್ಲೆಯ ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಕಾಲೇಜು ಕೇಳುತ್ತಿರುವುದು ಯಾವುದೇ ವೈಯಕ್ತಿಕ ಅಥವಾ ರಾಜಕೀಯ ಲಾಭಕ್ಕಾಗಿ ಅಲ್ಲ, ಆದರೆ ಈ ನ್ಯಾಯಯುತ ಬೇಡಿಕೆಯನ್ನು ದಬ್ಬಿ, ಖಾಸಗಿ ವ್ಯಾಪಾರಿ ಆಸಕ್ತಿಗೆ ಧಕ್ಕೆ ಬರದಂತೆ ನೋಡಿಕೊಳ್ಳಲು ಸಚಿವರೇ ಪೊಲೀಸ್ ಬಲ ಪ್ರಯೋಗದ ಮೂಲಕ ಹೋರಾಟವನ್ನು ದಮನ ಮಾಡುವ ಪ್ರಯತ್ನಕ್ಕೆ ಕೈ ಹಾಕಿರುವುದು ಸರಿಯಲ್ಲ, ಈ ಕೂಡಲೇ ಪೊಲೀಸರ ಸರ್ಪಗಾವಲು ಹಿಂಪಡೆಯಬೇಕು ಎಂದರು.
ಹೋರಾಟಗಾರರಾದ ಸಿದ್ಧಲಿಂಗ ಬಾಗೇವಾಡಿ, ಭೋಗೇಶ ಸೊಲ್ಲಾಪೂರ ಸೇರಿದಂತೆ ಅನೇಕ ಹೋರಾಟಗಾರರು ಪಾಲ್ಗೊಂಡಿದ್ದರು.

