ಲೇಖನ – ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ನಾನು ಈಗ ಹೇಳ ಹೊರಟಿರುವ ವಿಷಯ ಹೊಸದೇನಲ್ಲ. ನಿಮಗೆಲ್ಲ ಅನುಭವಕ್ಕೆ ಬಂದ ವಿಷಯವೇ ಆಗಿದೆ. ಇತ್ತೀಚಿನ ದಿನಗಳಲ್ಲಿ ಟಿವಿ, ಮೊಬೈಲ್ ಗೀಳಿಗೆ ಅದೆಷ್ಟು ಅಂಟಿಕೊಂಡಿದ್ದೇವೆ ಎಂದರೆ ದಿನದ ಇಪ್ಪತ್ನಾಲ್ಕು ಗಂಟೆಗಳು ಸಾಲುತ್ತಿಲ್ಲ. ಸಮಯ ಹೇಗೆ ಹಾರಿ ಹೋಗುತ್ತಿದೆ ಅಂತ ಎಲ್ಲರೂ ದೂರುತ್ತಿದ್ದೇವೆ. ಮೊನ್ನೆ ಮೊನ್ನೆ ಹೊಸ ವರ್ಷ ಆರಂಭವಾಗಿತ್ತು. ಈಗಾಗಲೇ ಒಂದು ವರ್ಷ ಮುಗಿದು ಹೋಯಿತು. ಅದು ಹೇಗೆ ಒಂದು ವರ್ಷ ಕಳೆದು ಹೋಯಿತೋ ತಿಳಿಯಲೇ ಇಲ್ಲ. ಎನ್ನುವ ಮಾತುಗಳು ಕಿವಿಗೆ ಬೀಳುತ್ತವೆ. ಇಂಥ ಮಾತುಗಳು ಕಿವಿಗೆ ಬಿದ್ದಾಗ ಹೌದಲ್ಲ, ಅದೆಷ್ಟು ಅಮೂಲ್ಯ ಸಮಯವನ್ನು ಉಪಯೋಗಕ್ಕೆ ಬಾರದ ವಾಟ್ಸಪ್ ಚಾಟ್‌ಗಾಗಿ ಫೇಸ್ ಬುಕ್ ಲೈಕ್‌ಗಾಗಿ, ಇನ್ಸ್ಟಾಗ್ರಾಮ್ ಇನ್ನಿತರೆ ಸಾಮಾಜಿಕ ಜಾಲತಾಣಗಳಿಗೆ ವ್ಯಯ ಮಾಡುತ್ತಿದ್ದೇವೆ ಎಂಬ ಭಯ ಕಾಡಲು ಶುರುವಾಗುವದಂತೂ ನಿಜ. ಮನೆಯಲ್ಲಿ ಅಪ್ಪ ಅಮ್ಮನಿಗೆ ಮಕ್ಕಳಿಗೆ ಅಗತ್ಯವಾದ ಪ್ರೀತಿ ಕಾಳಜಿ ಸಮಯವನ್ನು ಕೊಡಲು ಆಗುತ್ತಿಲ್ಲ ಎಂದರೆ ಮೊದಲು ನಿಮಗೆ ನೀವೇ ಆದ್ಯತೆ ಕೊಟ್ಟುಕೊಳ್ಳಿ.
ಸಮಯದ ಪ್ರಥಮ ಆದ್ಯತೆ
ನಿಮಗೆ ನೀವು ಮತ್ತು ನಿಮ್ಮ ಕುಟುಂಬ ಮೊದಲು.
ನಿರುಪಯುಕ್ತತೆ

ಕೆಲಸಕ್ಕೆ ಬಾರದ ವಿಷಯಗಳು ನಮಗೆ ಗೊತ್ತಿಲ್ಲದಂತೆ ಸಮಯವನ್ನು ನುಂಗುತ್ತಿವೆ ನಾನೊಬ್ಬ ನಿರುಪಯೋಗಿಯಂತೆ ಬದುಕುತ್ತಿದ್ದೇನೆ ಎಂಬುದು ಕೆಲವರ ಕೊರಗು. ಅದಕ್ಕೆಲ್ಲ ಕಾರಣ ಸಮಯದ ಮಹತ್ವ ಗೊತ್ತಿರದೇ ನಿರುಪಯುಕ್ತ ಕೆಲಸಗಳಲ್ಲಿ ತೊಡಗಿರುವುದೇ ಮುಖ್ಯ ಕಾರಣ ನಿರುಪಯುಕ್ತ ಕೆಲಸಗಳು. ಅವು ಸಮಯವನ್ನು ಕೊಲ್ಲುತ್ತಿವೆ. ಎಂಬುದು ನಮಗೆ ಗೊತ್ತಿದೆ. ಆದರೆ ಅವುಗಳ ಜಾಲದಿಂದ ಹೊರಬರಲು ಆಗುತ್ತಿಲ್ಲ ಎನ್ನುವ ಅಳಲು ಹಲವರದು. ಕಳೆದು ಹೋದ ದಿನಗಳು ಬಹಳ ಸುಂದರವಾಗಿದ್ದವು ಅಂತ ಕೊರಗುವವರನ್ನು ಕಾಣುತ್ತೇವೆ. ಇಲ್ಲಿ ಖಲಿಲ್ ಗಿಬ್ರಾನ್ ಹೇಳಿದ ಮಾತೊಂದನ್ನು ಉಲ್ಲೇಖಿಸಲೇಬೇಕು. ‘ಲೈಫ್ ನೆವರ್ ಟ್ಯಾರಿಸ್ ವಿಥ್ ಎಸ್ಟರ್‌ಡೇ.’ ಜೀವನ ನದಿಯಂತೆ ಹರಿಯುತ್ತಲೇ ಇರುತ್ತದೆ. ಸಮಯ ಪಕ್ಷಿಯಂತೆ ಹಾರುತ್ತದೆ. ನಿನ್ನೆಗಳ ಬಗ್ಗೆ ಯೋಚಿಸುತ್ತ ಜೀವನ ಪ್ರವಾಹದಲ್ಲಿ ಕೊಚ್ಚಿ ಹೋಗುವ ಮುನ್ನ ಈ ದಿನ ಈ ಕ್ಷಣವನ್ನು ನಮ್ಮದಾಗಿಸಿಕೊಳ್ಳುವುದು ಸುಂದರವಾಗಿಸುವುದು ಜಾಣತನ.
ಹೀಗೆ ಹಾರುವ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿವೆ ಕೆಲ ಸಲಹೆಗಳು
ಒಂದೇ ಕಾರ್ಯ
ಒಂದು ಸಮಯಕ್ಕೆ ಒಂದೇ ಗುರಿಗೆ ಗುರಿ ಇಡಬೇಕು
ಸಮಯವನ್ನು ಉಳಿಸಲು ಒಂದು ಸಮಯಕ್ಕೆ ಹಲವಾರು ಕೆಲಸ ಕಾರ್ಯಗಳನ್ನು ಮಾಡಿ ಮುಗಿಸಲು ನೋಡಿದರೆ ಅದರಲ್ಲಿ ಯಾವುದನ್ನೂ ಸರಿಯಾಗಿ ಮುಗಿಸಲು ಆಗುವುದಿಲ್ಲ. ನಮ್ಮ ಮೆದಳು ಬಹುಕಾರ್ಯ ಮಾಡಲು ಮಾಡಲ್ಪಟ್ಟಿಲ್ಲ. ಆದರೆ ಒಂದಾದ ಮೇಲೆ ಇನ್ನೊಂದರ ಮೇಲೆ ಏಕಾಗ್ರತೆಯನ್ನು ಇರಿಸಲು ಮಾಡಲ್ಪಟ್ಟಿದೆ. ಹೀಗಾಗಿ ಒಂದು ಸಮಯಕ್ಕೆ ಒಂದು ಕಾರ್ಯ ನಿಯಮವನ್ನು ಪಾಲಿಸಬೇಕು. ಒಂದೇ ಸಲ ಹತ್ತು ಫೈಲ್ ಗಳನ್ನು ನೋಡಬಹುದು. ಆದರೆ ಒಂದನೇ ಫೈಲ್ ನೋಡುವಾಗ ಹತ್ತನೇ ಫೈಲ್‌ನಲ್ಲಿ ಏನಿರಬಹುದು ಎಂದು ತಲೆ ಕೆಡಿಸಿಕೊಳ್ಳುವ ಹಾಗಿಲ್ಲ. ಹತ್ತನೇ ಫೈಲ್ ನೋಡುವಾಗ ಒಂದನೇ ಫೈಲ್‌ನಲ್ಲಿ ಏನಿತ್ತು ಎಂದು ಯೋಚಿಸುತ್ತ ತಲೆ ಕೆರೆದುಕೊಳ್ಳುವ ಹಾಗಿಲ್ಲ. ಇನ್ನೂ ಸರಳವಾಗಿ ಹೇಳಬೇಕೆಂದರೆ ಯಾವ ಫೈಲ್‌ನ್ನು ನೋಡುತ್ತಿರುತ್ತೇವೆಯೋ ಅದರ ಮೇಲೆ ಗಮನ ಇರಬೇಕು. ಹಾಗಾದಾಗ ಮಾತ್ರ ಮಾಡುತ್ತಿರುವ ಕಾರ್ಯ ಸಫಲವಾಗುವುದು. ಸಮಯವೂ ಉಳಿಯುವುದು.
ಮರಳಿ ಬಾರದು
ಕೈಯಲ್ಲಿರುವ ಗಂಟೆಗಳಲ್ಲಿ ಎಲ್ಲರನ್ನೂ ಸಂತೋಷಗೊಳಿಸಲು ಪ್ರಯತ್ನಿಸುವುದು ಹುಚ್ಚುತನ. ಎಲ್ಲರನ್ನೂ ಸಂತೋಷಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಯಾರನ್ನೋ ತೃಪ್ತಿ ಪಡಿಸಲು ಹೋಗಿ ಮರಳಿ ಎಂದೆಂದೂ ಸಿಗಲಾರದ ಸಮಯವನ್ನು ಕಳೆದುಕೊಳ್ಳುವುದು ಮೂರ್ಖತನ. ‘ಒನ್ಸ್ ದ ಟೈಮ್ ಈಸ್ ಲಾಸ್ಟ್ ಕ್ಯಾನ್ ನೆವರ್ ಬಿ ರಿಗೇನ್ಡ್’ ಎಂಬುದನ್ನು ಮರೆಯದಿರಿ. ಜಗತ್ತಿನ ಯಾವ ಶ್ರೀಮಂತನೂ ಸಮಯವನ್ನು ಖರೀದಿಸಲಾರ. ಯಾರಿಂದಲೂ ಖರೀದಿಸಲಾಗದ ಸಂಪತ್ತು ಸಮಯ ಎಂಬುದನ್ನು ತಿಳಿದರೆ ಸಮಯವನ್ನು ತುಪ್ಪದಂತೆ ಬಳಸಿಕೊಳ್ಳಬಹುದು. ಇಲ್ಲದಿದ್ದರೆ ನೀರಿನಂತೆ ಹರಿಸಿಬಿಡುತ್ತೇವೆ. ಬೇರೆಯವರ ಬಗ್ಗೆ ಸುಖಾಸುಮ್ಮನೆ ಯೋಚಿಸಿದಷ್ಟು ಗಾಳಿಮಾತು ಹರಡಿಸಿದಷ್ಟು ನಮ್ಮದೇ ಸಮಯ ಕಡಿಮೆಯಾಗುತ್ತದೆ. ಎನ್ನುವ ಅರಿವು ನಮಗಿರಬೇಕು. ನಿನ್ನೆಗಿಂತ ಇಂದು ನಾನೆಷ್ಟು ಬೆಳೆದಿದ್ದೀನಿ ಪ್ರಬುದ್ಧನಾಗಿದ್ದೀನಿ ಎಂಬುದರ ಕಡೆಗೆ ಗಮನ ವಹಿಸಿದರೆ ಸಮಯ ನಮ್ಮೊಂದಿಗೆ ಕಾಲು ಹಾಕುತ್ತದೆ. ನಮ್ಮ ನಾಳೆಗಳೂ ಸಹ ಸುಖಕರವಾಗಿರುತ್ತವೆ. ಆನಂದವನ್ನೂ ನೀಡುತ್ತವೆ. ‘ಸಮಯ ಮತ್ತು ಸಮುದ್ರದ ಅಲೆಗಳು ಯಾರಿಗಾಗಿಯೂ ಕಾಯುವುದಿಲ್ಲ.’ ಎಂಬ ಮಾತನ್ನು ಮನದಲ್ಲಿಟ್ಟು ನಡೆಯಬೇಕು.
ಕನಸು-ನನಸು
ಜೀವನ ಸುಂದರವಾಗಿ ಇರುವುದೇ ಕನಸುಗಳಿಂದ. ಕನಸು ಕಾಣದವರು ಯಾರೂ ಇಲ್ಲ. ಅದನ್ನು ಮಾಡಬೇಕು ಇದನ್ನು ಮಾಡಬೇಕೆಂದು ಪ್ರಯತ್ನಿಸುವವರನ್ನು ನಿತ್ಯ ಸುತ್ತಲೂ ನೋಡುತ್ತಲೇ ಇರುತ್ತೇವೆ. ಹಾಗೆ ಓಡಾಡುವವರು ಮರ‍್ನಾಲ್ಕು ದಿನಗಳ ನಂತರ ನೋಡಿದರೆ ತಾವು ಮಾಡುವುದರ ಬಗ್ಗೆ ಉತ್ಸುಕತೆಯನ್ನು ಕಳೆದುಕೊಂಡು ಬಿಟ್ಟಿರುತ್ತಾರೆ. ತಮ್ಮ ಕನಸಿನತ್ತ ಸಾಗುವ ಪ್ರಯತ್ನವನ್ನೂ ಬಿಟ್ಟು ಬಿಡುತ್ತಾರೆ. ಕೆಲ ದಿನಗಳ ನಂತರ ಮತ್ತೆ ಬೇರೆ ಏನೋ ಮಾಡಬೇಕೆಂದು ಹೊರಟು ಅದನ್ನು ನಟ್ಟನಡುವೆ ನೀರಲ್ಲಿ ಬಿಡುವುದನ್ನು ಕಾಣುತ್ತೇವೆ. ಕೆಲವೊಮ್ಮೆ ಅಂಥವರಲ್ಲಿ ನಾವೂ ಒಬ್ಬರಾಗಿರುತ್ತೇವೆ. ಇದೆಲ್ಲ ಸಮಯವನ್ನು ವ್ಯರ್ಥ ಮಾಡುತ್ತದೆಯೇ ಹೊರತು ಉತ್ಪಾದಕತೆಯನ್ನು ನೀಡುವುದಿಲ್ಲ. ಏನನ್ನೂ ಸಾಧಿಸದೇ ದಂಡಪಿಂಡಗಳಂತೆ ಮುನ್ನುಗ್ಗುತ್ತಿರುವುದು ಶೋಚನೀಯ ಸಂಗತಿ. ಹೀಗಾಗದಿರಲು ಉತ್ಪಾದಕತೆಗಾಗಿ ಸಮಯವನ್ನು ಮೀಸಲೀಡುವುದು ಸೂಕ್ತ.
ಪ್ರಯತ್ನದ ಹಾದಿ
ಸಂದರ್ಭ ಸನ್ನಿವೇಶಗಳು ಯಾವಾಗಲೂ ನಮ್ಮ ಪರವಾಗಿಯೇ ಇರುತ್ತವೆ ಅಂತೇನಿಲ್ಲ. ಇನ್ನೊಂದು ವಿಷಯವೆಂದರೆ ಪ್ರತಿಕೂಲ ಸಮಯವಿದ್ದಾಗಲೇ ನಮ್ಮಲ್ಲಿರುವ ಸೂಕ್ತ ಪ್ರತಿಭೆ, ಸಾಮರ್ಥ್ಯ ಹೊರ ಬರುತ್ತದೆ. ಬದುಕಿನ ಪ್ರತಿ ಹಂತದಲ್ಲೂ ತಿರುವುಗಳು ಇದ್ದೇ ಇರುತ್ತವೆ. ಕೆಲವೊಮ್ಮೆ ಊಹಿಸಿದ್ದು ಇನ್ನೂ ಕೆಲವೊಮ್ಮೆ ಕಲ್ಪನೆಗೆ ಮೀರಿದ್ದು. ಎಲ್ಲವೂ ಸರಿ ಎಂದುಕೊಂಡು ನಡೆಯುತ್ತಿರುವಾಗಲೇ ಯಾವುದೇ ಸರಿ ಇಲ್ಲ ಎನ್ನುವಂತಾಗಬಹುದು. ಜೀವನ ಅನಿಶ್ಚಿತೆತಗಳ ಮೂಟೆ. ಆದ್ದರಿಂದ ಬದುಕಲ್ಲಿ ಬಂದದ್ದನ್ನು ಬಂದಂತೆ ಸ್ವೀಕರಿಸಬೇಕು. ಬಯಸದೇ ಬಂದದ್ದನ್ನು ಆಸ್ವಾದಿಸಬೇಕು. ಆಗೆಲ್ಲ ಸಮಯ ರಸಮಯವೆನಿಸುತ್ತದೆ. ಬಂದಂತೆ ಸ್ವೀಕರಿಸುವುದು ಎಂದರೆ ಅತಿಯಾದ ಆಲೋಚನೆಗೆ ಸಮಯ ಹಾಳು ಮಾಡಬಾರದು ಎಂದು ಅರ್ಥವೇ ಹೊರತು ಪ್ರಯತ್ನದ ಹಾದಿಯನ್ನು ಬಿಟ್ಟಬಿಡಬೇಕೆಂದು ಅರ್ಥವಲ್ಲ.
ದೊಡ್ಡ ಕಾಣಿಕೆ
ಇರೋದು ಒಂದು ಜೀವನ ಅದರಲ್ಲಿ ಬೇಡವಾದ ವಿಷಯ ವಸ್ತುಗಳಿಗೆ ಎಗ್ಗಿಲ್ಲದೇ ಸಮಯವನ್ನು ವ್ಯರ್ಥ ಮಾಡಬಾರದು. ಮನಸ್ಸಿಗೆ ಇಷ್ಟವಾದುದನ್ನು ಸಮಾಜಕ್ಕೆ ಉಪಯೋಗವಾದುದನ್ನು ಮಾಡಲು ಉಪಯೋಗಿಸಬೇಕು. ಏನೇ ಆದರೂ ಎದುರಿಸಿ. ಸಮಯ ಸಾಧಿಸೋಕೆ ಇರುವುದು ಹೊರತು ಸಾಯಿಸೋಕೆ ಅಲ್ಲ. ಸರ್ವ ಜೀವಿಗಳಿಗೆ ಬೆಳಕು ನೀಡುವ ಸೂರ್ಯನೇ ವರ್ಷಕ್ಕೊಮ್ಮೆ ತನ್ನ ಫಥವನ್ನು ಬದಲಿಸುತ್ತಾನೆ. ಅಂಥದ್ದರಲ್ಲಿ ನಾವು ಸಂಯಮದೊಂದಿಗೆ ನಮ್ಮ ಸಮಯದ ಪಥವನ್ನು ಬದಲಿಸಿದರೆ ಬದುಕು ಸರಳ ಸುಂದರ. ಏನೇ ಆಗಲಿ ಏನೇ ಹೋಗಲಿ ಸಮಯದ ದೋಣಿ ಸರಿಯಾಗಿ ಸಾಗಿ ಚೆಂದದ ದಡ ಸೇರಿದಾಗ ನಮಗೆ ನಾವೇ ಕೊಟ್ಟಿಕೊಳ್ಳುವ ದೊಡ್ಡ ಕಾಣಿಕೆಯಂತಹ ಸಮಯ ನಮ್ಮನ್ನು ಹಿಂಬಾಲಿಸುತ್ತದೆ.


