ವಿಜಯಪುರ: ಸ್ಪೋಟಕ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಪಟಾಕಿ ಅಂಗಡಿಗಳನ್ನು ತೆರೆದಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್) ಪಕ್ಷದ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಮಾತನಾಡಿ, ಪಟಾಕಿ ಮಳಿಗೆಗಳನ್ನು ತೆಗೆಯಲು ಸರ್ಕಾರ ನಿರ್ದಿಷ್ಟವಾದ ಕಾನೂನುಗಳನ್ನು ಜಾರಿಗೆ ತಂದಿದೆ. ಆದರೆ ವಿಜಯಪುರ ಜಿಲ್ಲೆಯಾದ್ಯಂತ ಯಾವುದೇ ರೀತಿಯ ಲೈಸನ್ಸ್ ಪಡೆಯದೆ ಅನಧಿಕೃತವಾಗಿ ಜನಸಂದಣಿ ಹೆಚ್ಚಾಗಿರುವ ಪ್ರದೇಶದಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಪಟಾಕಿ ಮಳಿಗೆಗಳು ತೆರೆಯಲು ಜಿಲ್ಲಾಧಿಕಾರಿಗಳಿಂದ ಸ್ಫೋಟಕ ಪರವಾನಿಗೆ, ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆಯಿಂದ ಅನುಮತಿ ಪತ್ರ, ಸ್ಥಳೀಯ ಸಂಸ್ಥೆಗಳ ಜನರಲ್ ಲೈಸೆನ್ಸ್ ಮುಂತಾದ ಅನುಮತಿ ಪತ್ರಗಳನ್ನು ಪಡೆದುಕೊಂಡು ಜನಸಂದಣಿ ಇಲ್ಲದ, ಅಗ್ನಿ ಅವಗಡಗಳು ಸಂಭವಿಸಿದಾಗ ಹೆಚ್ಚು ಹಾನಿಯಾಗದ ಪ್ರದೇಶಗಳಲ್ಲಿ ಸುರಕ್ಷತೆಯಿಂದ ಮಳಿಗೆಗಳನ್ನು ತೆಗೆಯಲು ಮತ್ತು ವ್ಯಾಪಾರ ವಹಿವಾಟುಗಳು ಮಾಡಲು ಅವಕಾಶವಿರುತ್ತದೆ. ಆದರೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ. ಪೋಲಿಸ್ ಇಲಾಖೆ ಮತ್ತು ಅಗ್ನಿಶಾಮಕ ಅಧಿಕಾರಿಗಳಿಗೆ ತಿಂಗಳುವಾರು ಹಪ್ತಾ ನೀಡುವುದರ ಮೂಲಕ ಅನಧಿಕೃತ ಅಂಗಡಿಗಳ ಮಾಲೀಕರು ವರ್ಷವಿಡಿ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿದ್ದಾರೆ. ಆದ್ದರಿಂದ ಈ ಕೂಡಲೇ ತಮ್ಮ ಇಲಾಖೆಯ ರಾಜಶ್ವ ನಿರೀಕ್ಷಕರ ನೇತೃತ್ವದಲ್ಲಿ ಒಂದು ಟಾಸ್ಕ್ ಫೋರ್ಸ್ ತಂಡವನ್ನು ರಚಿಸಿ ಅನಧಿಕೃತ ಅಂಗಡಿಗಳನ್ನು ಬಂದ್ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇತ್ತೀಚೆಗೆ ಅತ್ತಿಬೆಲೆಯಲ್ಲಿ ಬೆಂಕಿ ಅವಘಡದಿಂದ ಪಟಾಕಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ೧೩ ಜನ ಕಾರ್ಮಿಕರು ಸಜೀವವಾಗಿ ದಹನವಾಗಿದ್ದಾರೆ. ಆ ರೀತಿಯ ಪ್ರಕರಣಗಳು ವಿಜಯಪುರ ಜಿಲ್ಲೆಯಲ್ಲಿ ನಡೆಯಬಾರದು ಎಂಬ ಮುಂಜಾಗ್ರತೆ ಕ್ರಮವನ್ನು ವಹಿಸಬೇಕೆಂದು ಒತ್ತಾಯಿ
ಸಿದರು.
ಈ ಸಂದರ್ಭದಲ್ಲಿ ರಾಕೇಶ ಇಂಗಳಗಿ, ಹಮೀದ ಇನಾಮದಾರ, ಪ್ರವೀಣ ಕನಸೆ, ವಿಕ್ರಮ ವಾಗಮೋರೆ, ಶ್ರೀಶೈಲ ಮಠ ಉಪಸ್ಥಿತರಿದ್ದರು.
Related Posts
Add A Comment