ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಹರನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಮಲ್ಲನಗೌಡ(ಬಾಬುಗೌಡ) ಬಿರಾದಾರ ನೇತೃತ್ವದ ಬಣ ಜಯಗಳಿಸಿದ ಹಿನ್ನೆಲೆಯಲ್ಲಿ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.
ತಾಲ್ಲೂಕಿನ ಹರನಾಳ ಗ್ರಾಮದ ಪಿಕೆಪಿಎಸ್ ಆಡಳಿತ ಮಂಡಳಿಯ ಹನ್ನೊಂದು ಸ್ಥಾನಗಳಿಗೆ ಭಾನುವಾರ ಜರುಗಿದ ಜಿದ್ದಾಜಿದ್ದಿನ ಚುನಾವಣೆಯಲ್ಲಿ ಒಂದೇ ಬಣದ ಹನ್ನೊಂದು ಅಭ್ಯರ್ಥಿಗಳು ಅಧಿಕ ಮತಗಳನ್ನು ಪಡೆಯುವುದರ ಮೂಲಕ ಜಯಗಳಿಸಿದರು. ಒಟ್ಟು ೧೨ ಜನ ಸದಸ್ಯರ ಆಡಳಿತ ಮಂಡಳಿಗೆ ಸಾಲಗಾರ ಹಿಂದುಳಿದ ವರ್ಗ ‘ಬ’ ಸ್ಥಾನದಿಂದ ಗಂಗಾಬಾಯಿ ಜೋಗೂರ(ಇಂಗಳಗಿ) ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನುಳಿದ ಸಾಲಗಾರ ಸಾಮಾನ್ಯ ಸ್ಥಾನ-೫, ಸಾಲಗಾರ ಮಹಿಳಾ ಮೀಸಲು-೨, ಸಾಲಗಾರ ಹಿಂದುಳಿದ ವರ್ಗ ‘ಅ’ ಸ್ಥಾನ-೦೧, ಸಾಲಗಾರ ಪರಿಶಿಷ್ಟ ಜಾತಿ-೦೧, ಸಾಲಗಾರ ಪರಿಶಿಷ್ಟ ಪಂಗಡ-೦೧, ಬಿನ್ ಸಾಲಗಾರರ ಕ್ಷೇತ್ರ-೦೧ ಹೀಗೆ ಒಟ್ಟು ೧೧ ಸ್ಥಾನಗಳಿಗೆ ಚುನಾವಣೆ ಜರುಗಿತು.
ಚುನಾವಣೆಯಲ್ಲಿ ಸಾಮಾನ್ಯ ಸ್ಥಾನಗಳಿಗೆ ವಿಠ್ಠಲ ಮಂಟ್ಲಾಕುಂಟಿ, ಶಾಂತಗೌಡ ಚೌದ್ರಿ, ಸಿದ್ರಾಮರಡ್ಡಿ ಪಾಟೀಲ, ಶರಣಗೌಡ ಗೊಡಿಹಾಳ, ಸಿದ್ದಣ್ಣ ಅಂಗಡಿ ಮಹಿಳಾ ಮೀಸಲು ಸ್ಥಾನಗಳಿಗೆ ಚಂದ್ರಕಲಾ ಹದ್ನೂರ, ನೀಲಮ್ಮ ಗುಂಡಿ ಹಿಂದುಳಿದ ವರ್ಗ ‘ಅ’ ಸ್ಥಾನಕ್ಕೆ ಗೌರಮ್ಮ ಹಚ್ಯಾಳ ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಸವಿತಾ ನಾಟೀಕಾರ, ಪರಿಶಿಷ್ಟ ಪಂಗಡ ಸ್ಥಾನಕ್ಕೆ ಶಂಕ್ರೆಮ್ಮ ತಳವಾರ, ಬಿನ್ ಸಾಲಗಾರ ಕ್ಷೇತ್ರದಿಂದ ಅರವಿಂದ ಬಿರಾದಾರ, ಚುನಾಯಿತರಾದರು.
ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಸರ್ಕಾರಿ ಪ್ರಾಥಮಿಕ ಶಾಲೆ ಮತದಾನ ಕೇಂದ್ರದಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಬೆಳಿಗ್ಗೆ ೯ರಿಂದ ಸಾಯಂಕಾಲ ೪ರವರೆಗೆ ನಡೆದ ಚುನಾವಣೆ ಜಿದ್ದಾಜಿದ್ದಿನಿಂದ ಕೂಡಿದ್ದು, ವಿಧಾನಸಭಾ ಚುನಾವಣೆಯಂತೆ ಕಂಡು ಬಂತು. ಸಾಲಗಾರ ಕ್ಷೇತ್ರದ ೫೭೧ ಒಟ್ಟು ಮತದಾರರಲ್ಲಿ ೪೯೧ ಮತದಾರರು ಹಾಗೂ ಬಿನ್ ಸಾಲಗಾರರ ೧೩೬ ಮತದಾರರ ಪೈಕಿ ೮೮ ಮತದಾರರು ಮತ ಚಲಾಯಿಸಿದರು.
ಎಸ್.ಎಮ್.ಹಂಗರಗಿ ಚುನಾವಣಾಧಿಕಾರಿ ಹಾಗೂ ಲೀಲಾವತಿಗೌಡ ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.
ಸಾಯಂಕಾಲ ಮತಗಳ ಎಣಿಕೆ ನಡೆದು ನಂತರ ವಿಜೇತ ಅಭ್ಯರ್ಥಿಗಳನ್ನು ಘೋಷಿಸಲಾಯಿತು.
ಈ ಸಂದರ್ಭದಲ್ಲಿ ಬೆಂಬಲಗರು ವಿಜೇತರನ್ನು ಸನ್ಮಾನಿಸಿದರು. ನಂತರ ಬಣ್ಣ ಎರಚಿ, ಸಿಹಿ ಹಂಚಿ, ಪಟಾಕಿ ಸಿಡಿಸುವುದರ ಮೂಲಕ ವಿಜಯೋತ್ಸವ ಆಚರಿಸಿದರು.

