ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ವಿಷಯಗಳನ್ನು ಮನನ ಮಾಡಿಕೊಳ್ಳುವತ್ತಾ ಗಮನಹರಿಸಬೇಕು ಎಂದು ಬಾಗಲಕೋಟೆ ಜಿಲ್ಲಾ ಉಪ ನಿರ್ದೇಶಕ ಅಜಿತ್ ಮನಿಕೇರಿ ಹೇಳಿದರು.
ಅವರು ಕುಂಬಾರಹಳ್ಳದ ಸರಕಾರಿ ಪ್ರೌಢಶಾಲೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಶಾಲೆ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾ ವಿದ್ಯಾರ್ಥಿ ಜೀವನ ಸುಂದರವಾಗಿ ರೂಪಿಸಿಕೊಳ್ಳಲು ಎಸ್ ಎಸ್ ಎಲ್ ಸಿ ಪ್ರಮುಖ ಘಟ್ಟವಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಒಳ್ಳೆಯ ಫಲಿತಾಂಶ ಪಡೆದು ತೇರ್ಗಡೆ ಹೊಂದಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇಲ್ಲಿನ ಶಿಕ್ಷಕ ವೃಂದ ಅತ್ಯಂತ ಅಚ್ಚುಕಟ್ಟಾಗಿ ತಮ್ಮ ಬೋಧನೆಯಲ್ಲಿ ತೊಡಗಿಕೊಂಡು ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುತ್ತಿರುವುದು ಅತ್ಯಂತ ಶ್ಲಾಘನೀಯವಾದದ್ದು ಎಂದರು. ಕುಂಬಾರಹಳ್ಳ ಪ್ರೌಢಶಾಲೆಯು ಫಲಿತಾಂಶ ಮತ್ತು ಕ್ರೀಡೆಗಳಲ್ಲಿ ತಾಲೂಕು ಮತ್ತು ಜಿಲ್ಲೆಯಲ್ಲಿ ಮುಂಚೂಣಿಯಲ್ಲಿರುವ ಶಾಲೆಯಾಗಿದೆ ಎಂದು ಹೇಳಿದರು.
ಕಳೆದ ವರ್ಷಕ್ಕಿಂತ ಈ ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶ ನೂರಕ್ಕೆ ನೂರರಷ್ಟು ಆಗಲು ಶಿಕ್ಷಕರು ಶ್ರಮಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಶ್ರೀಮತಿ ಶಾರದಾ ಮಠ, ಸಂಜೀವ ಝಂಬುರೆ, ಸಂಗನಬಸವ ಉಟಗಿ, ಬಾಹುಬಲಿ ಮುತ್ತೂರ, ಚಂದ್ರಕಾಂತ್ ಪೊಲೀಸ್, ಶಕುಂತಲಾ ಬಿರಾದಾರ ಉಪಸ್ಥಿತರಿದ್ದರು.

