ವಿಜಯಪುರದಲ್ಲೊಂದು ಅಪರೂಪದ ವಿವಾಹ ಮಹೋತ್ಸವ | ಸ್ವಲ್ಪವೂ ಪ್ಲಾಸ್ಟಿಕ್ ಬಳಕೆ ಇಲ್ಲದ ಮಹೋತ್ಸವ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿವಾಹ ಸಮಾರಂಭದಲ್ಲಿ ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಪ್ಲೇಟ್ ಎಗ್ಗಿಲ್ಲದೇ ಬಳಕೆಯಾಗುವುದು ರೂಢಿ. ಆದರೆ ವಿಜಯಪುರದ ಆಶ್ರಮ ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ಮಂಗಲ ಕಾರ್ಯಾಲಯದಲ್ಲಿ ಸೋಮವಾರ ಅಪರೂಪದ ವಿವಾಹ ಮಹೋತ್ಸವ ನಡೆಯಿತು.
ಅದಕ್ಕೆ ಕಾರಣ ಪ್ಲಾಸ್ಟಿಕ್ ಬಳಕೆಯೇ ಇಲ್ಲದಿರುವುದು. ಅಷ್ಟೇ ಅಲ್ಲದೇ ಉತ್ತಮ ಜೀವನಕ್ಕೆ ಮಾರ್ಗದರ್ಶಿಯಾದ ಮಹಾತ್ಮರ ಸೂಕ್ತಿಗಳ ಪ್ರದರ್ಶನ, ಭಾರತೀಯ ಆಹಾರ ಸಂಸ್ಕೃತಿ ಪ್ರತಿನಿಧಿಸುವ ಬಾಳೆ ಎಲೆಯಿಂದ ಮಾಡಿದ ತಟ್ಟೆಗಳ ಬಳಕೆ ಹೀಗೆ ಸಂಸ್ಕೃತಿ, ಸ್ವದೇಶಿ, ಪರಿಸರ ರಕ್ಷಣೆಯ ತ್ರಿವೇಣಿ ಸಂಗಮದಂತೆ ಕಲ್ಯಾಣ ಮಹೋತ್ಸವ ಜರುಗಿತು.
ಕಳೆದ ಹಲವಾರು ವರ್ಷಗಳಿಂದ ಪರಿಸರ ರಕ್ಷಣೆ, ಸ್ವದೇಶಿ ಜಾಗೃತಿಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಾಗಪ್ಪ ಅಂಗಡಿ ಅವರು ತಮ್ಮ ಸುಪುತ್ರ ಸಚೀನ್ ಅವರ ವಿವಾಹ ಮಹೋತ್ಸವದಲ್ಲಿಯೂ ಸ್ವದೇಶಿ ಹಾಗೂ ಅರ್ಥಪೂರ್ಣತೆಯ ಸ್ಪರ್ಶ ಮಾಡಿದ್ದು ವಿಶೇಷ.
ಸಚೀನ್ ಹಾಗೂ ಪ್ರತೀಕ್ಷಾ ಅವರು ಸಪ್ತಪದಿ ತುಳಿದ ಪವಿತ್ರ ಶುಭ ಸಮಾರಂಭದಲ್ಲಿ ಪರಿಸರ ರಕ್ಷಣೆಯ ಕಾಳಜಿ ಮೊಳಗಿದ್ದು ವಿಶೇಷ. ಊಟಕ್ಕಾಗಿ ತಟ್ಟೆಗಳ ಬಳಕೆ, ಕುಡಿಯುವ ನೀರಿಗಾಗಿ ಪ್ಲಾಸ್ಟಿಕ್ ಬದಲು ಸ್ಟೀಲ್ ಗ್ಲಾಸ್ ಬಳಕೆ ಮಾಡಲಾಗಿತ್ತು. ನಂತರ ಈ ಎಲ್ಲ ಸ್ಟೀಲ್ ಗ್ಲಾಸ್‌ಗಳನ್ನು ಮಂಗಲ ಕಾರ್ಯಾಲಯಕ್ಕೆ ಒಪ್ಪಿಸಿ ಇದೇ ಬಳಕೆ ಮಾಡಿ ಪ್ಲಾಸ್ಟಿಕ್‌ಗೆ ಕಡಿವಾಣ ಹಾಕುವಂತೆ ಕೋರಲಾಯಿತು.
ಇದಕ್ಕೆ ಮತ್ತಷ್ಟು ಮೆರಗು ನೀಡುವಂತೆ `ಚೆಲ್ಲದಿರಿ ಅನ್ನ- ಇದೇ ಚಿನ್ನ’, ’ಅನ್ನದ ಬೆಲೆ ಮರೆಯದಿರಿ’ ಎಂಬಿತ್ಯಾದಿ ಆಹಾರ ಮಹತ್ವ ಸಾರುವ ಸೂಕ್ತಿಗಳು, ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಬೋಧಿಸಿದ ಜೀವನ ಮಾರ್ಗಸೂಚಿಗಳ ಉಕ್ತಿಗಳನ್ನು ಕಲ್ಯಾಣಮಂಟಪದಲ್ಲಿ ಪ್ರದರ್ಶಿಸಿದ್ದೂ ವಿಶೇಷವಾಗಿತ್ತು.
ಅದೊಂದು ಅಪರೂಪದ ವಿವಾಹ ಮಹೋತ್ಸವ.


