ಉದಯರಶ್ಮಿ ದಿನಪತ್ರಿಕೆ
ಚಡಚಣ: ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ ಹಾಗೂ ಭಾಷೆಯ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಸಾಹಿತಿ ಶಂಕರ ಬೈಚಬಾಳ ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ಸಾಹಿತ್ಯ ವೇದಿಕೆ ಮತ್ತು ಶ್ರೀ ಸಂಗಮೇಶ್ವರ ಕಲಾ & ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗ ಸಂಯುಕ್ತಾಶ್ರಯದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆಯ ಶ್ರೀಮಂತಿಕೆ ವಿಸ್ತರಿಸಲು ಕನ್ನಡ ಬಳಕೆ ಹೆಚ್ಚಳ ಅಗತ್ಯವಿದೆ ಎಂದು ಹೇಳಿದ ಅವರು, “ಗಡಿ ಪ್ರದೇಶಗಳಲ್ಲಿ ಕನ್ನಡ ನಾಡು–ನುಡಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮ ವಹಿಸಬೇಕು” ಎಂದು ಒತ್ತಿಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ.ಎಸ್. ಮಾಗಣಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಪರಭಾಷೆಗಳ ವ್ಯಾಮೋಹದಿಂದ ಕನ್ನಡದ ಬೇರುಗಳು ಕುಗ್ಗುತ್ತಿರುವ ಆತಂಕ ವ್ಯಕ್ತಪಡಿಸಿದರು. “ಕನ್ನಡದ ಗತ ವೈಭವ ಮರಳಿ ತರಬೇಕಾದ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ” ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಆರ್.ಪಿ. ಬಗಲಿ, ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಬದುಕಿನ ಭಾಗ “ಕನ್ನಡವನ್ನು ಬದುಕಾಗಿ ತಳೆದುಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ” ಎಂದು ಹೇಳಿದರು.
ಇಂಡಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರವಿ ಅರಳಿ ಮಾತನಾಡಿ, ಜ್ಞಾನ ಸಂಪಾದನೆಗೆ ಎಲ್ಲಾ ಭಾಷೆಗಳು ಅಗತ್ಯವಾದರೂ, ಮಾತೃಭಾಷೆಯಾದ ಕನ್ನಡವನ್ನು ಪ್ರೀತಿಯಿಂದ ಉಳಿಸಬೇಕು ಎಂದರು. “ಎಂಟು ಜ್ಞಾನಪೀಠಗಳನ್ನು ಪಡೆದ ಏಕೈಕ ಭಾಷೆ ಕನ್ನಡ; 2008ರಲ್ಲಿ ಶಾಸ್ತ್ರಿಯ ಭಾಷೆ ಸ್ಥಾನಮಾನ ಪಡೆದಿರುವುದು ನಮ್ಮ ಹೆಮ್ಮೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ. ಎಸ್.ಬಿ. ರಾಠೋಡ ಅವರು, “ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸುಂದರ ಹಾಗೂ ಶ್ರೀಮಂತ ಭಾಷೆ. ಕನ್ನಡ ನಾಡು–ನುಡಿಯ ಪರಂಪರೆಯನ್ನು ಯಾರೂ ಮರೆಯಬಾರದು” ಎಂದು ಹೇಳಿದರು.
ಸ್ವಾಗತ ಪ್ರೊ. ಮಹಾಂತೇಶ್ ಜನವಾಡ, ವಂದನೆ ಪ್ರೊ. ಎಸ್.ಎಫ್. ಬಿರಾದಾರ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಹಲಸಂಗಿ, ಡಿ. ಜೋಸೆಫ್, ಎಂ.ಕೆ. ಬಿರಾದಾರ, ಡಾ. ಎಸ್.ಎಸ್. ದೇಸಾಯಿ, ಬಸವರಾಜ ಯಳ್ಳೂರ, ವಿದ್ಯಾ ಕಲ್ಯಾಣಶೆಟ್ಟಿ, ಡಾ. ರಾಜಶೇಖರ ಮಾವಿನಮರ, ಪ್ರೊ. ಬಸವರಾಜ ನೀಲವಾಣಿ, ಬಾಬು ಸಿಂಪಿ ಸೇರಿದಂತೆ ಅನೇಕರಿದ್ದರು.

