ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಚಿಂತಕ ಡಿ.ಉಮಾಪತಿ ಕರೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕುಡಿಯುವ ನೀರನ್ನು ಸಹ ಸರ್ಕಾರಗಳು ಖಾಸಗೀಕರಣ ಮಾಡುತ್ತಿದೆ, ಖಾಸಗಿಯವರು ದುಬಾರಿ ಶುಲ್ಕದ ಮೂಲಕ ಜನಸಾಮಾನ್ಯರ ಬೆನ್ನುಮೂಳೆ ಮುರಿಯುವ ಕೆಲಸ ಮಾಡುತ್ತಿವೆ ಎಂದು ಚಿಂತಕ ಡಿ.ಉಮಾಪತಿ ಖಾಸಗಿಕರಣದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವಿಜಯಪುರದ ಡಾ.ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷ ಬೇಧವಿಲ್ಲದೇ ಸಕಲ ಪಕ್ಷಗಳು ಖಾಸಗೀಕರಣಕ್ಕೆ ಕುಮ್ಮಕ್ಕು ನೀಡುತ್ತಿವೆ, ಕುಡಿಯುವ ನೀರು, ಆರೋಗ್ಯ ಎಲ್ಲವನ್ನೂ ಖಾಸಗಿಯವರ ಸುಪರ್ದಿಗೆ ನೀಡುತ್ತಿದೆ, ಈ ಖಾಸಗಿಯವರು ಶುಲ್ಕಗಳನ್ನು ಮನಸ್ಸಿಗೆ ಬಂದಂತೆ ಪಡೆದುಕೊಂಡು ಜನಸಾಮಾನ್ಯರ ಬೆನ್ನು ಮೂಳೆ ಮುರಿಯುವ ಕೆಲಸ ಮಾಡುತ್ತಿವೆ ಎಂದು ಆಕ್ರೋಶ ಹೊರಹಾಕಿದರು.
ಈ ದೇಶದ ಕಾಡು, ನದಿ, ಗುಡ್ಡ ಕೊಳ್ಳೆ ಹೊಡೆದು ಪ್ರಾಕೃತಿಕ ಸಂಪತ್ತುಗಳಾದ ಗಣಿ ಮೊದಲಾದವುಗಳನ್ನು ಖಾಸಗಿ ಕಂಪನಿಗಳಿಗೆ ಒಪ್ಪಿಸುತ್ತಿದ್ದಾರೆ, ಖಾಸಗಿ ಸಹಭಾಗಿತ್ವ ಹೆಸರಿನಲ್ಲಿ ಜಿಲ್ಲಾ ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡುವ ಹುನ್ನಾರವನ್ನು ಪ್ರತಿಯೊಬ್ಬರು ಪ್ರತಿಭಟಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ಜಿಲ್ಲೆಯ ಶಾಸಕರು ನಿದ್ದೆ ಮಾಡುವುದನ್ನು ಬಿಡಬೇಕು, ಮೊನ್ನೆ ಸಿ.ಎಂ. ಭೇಟಿಯಾಗಲು ಹೋಗಿದ್ದೆವು, ಆದರೆ ಹೋರಾಟಗಾರರ ಅಹವಾಲು ಸಹ ಸಿ.ಎಂ. ಆಲಿಸದೇ ಅವಮಾನ ಮಾಡಿದ್ದಾರೆ, ನಮಗೆ ಅವಮಾನ ಮಾಡುವ ಉದ್ದೇಶದಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದೀರಾ? ನಿಮಗೆ ಮನಸ್ಸಿಲ್ಲದಿದ್ದರೆ ಯಾಕೆ ಕರೆದುಕೊಂಡು ಹೋಗಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು.
ನಾವು ಕೊಲೆ, ರೇಪ್, ಲೂಟಿ ಮಾಡಿ ಬೆಂಗಳೂರಿಗೆ ಹೋಗಿಲ್ಲ, ಜನರಿಗಾಗಿ, ಬಡವರಿಗಾಗಿ ಮುಖ್ಯಮಂತ್ರಿಗಳ ಬಳಿ ಹೋಗಿದ್ದೆವು, ಕೂಡಿಸಿ ಮಾತನಾಡುವಷ್ಟು ಸೌಜನ್ಯ ಇಲ್ಲವೇ? ಈ ಹೋರಾಟ ನಿಮ್ಮ ಮನೆ ಬಾಗಿಲಿಗೂ ಬರುತ್ತೆ, ಇಲ್ಲಿ ಬಂದು ಕಾಟಾಚಾರಕ್ಕೆ ಬೆಂಬಲ ಕೊಟ್ಟು ಹೋಗಿದ್ದೀರಿ, ಬೆಂಗಳೂರಿನಲ್ಲಿ ಮಾಡಿದ ಅವಮಾನಕ್ಕೆ ವಿಜಯಪುರ ಜಿಲ್ಲೆಯ ಜನತೆಗೆ ಕ್ಷಮೆಯಾಚಿಸಬೇಕು ಎಂದು ಸಚಿವ ಡಾ.ಎಂ.ಬಿ. ಪಾಟೀಲರ ವಿರುದ್ಧವೂ ಅಸಮಾಧಾನ ಹೊರಹಾಕಿದರು.
ನಿಮ್ಮ ಕುತಂತ್ರದಿಂದ ಹೋರಾಟ ಶಾಂತವಾಗುತ್ತದೆ ಎಂದುಕೊಂಡಿದ್ದರೆ ಅದು ತಪ್ಪು, ಬಸವಣ್ಣನ ನಾಡು ಕ್ರಾಂತಿಯ ನಾಡು, ಇಲ್ಲಿಯೂ ಬಸವಣ್ಣನವರ ಹಾಗೆ ಕ್ರಾಂತಿ ಆಗುತ್ತೆ, ನಿಮಗೆ ವಾಂತಿ ಮಾಡಿಸುತ್ತೇವೆ,
ನಾವು ನೀಚರಿಗೆ ಅಧಿಕಾರ ಕೊಟ್ಟಿರುವುದರಿಂದ ಹೋರಾಟಕ್ಕೆ ಬೆಲೆ ದೊರಕುತ್ತಿಲ್ಲ ಎಂದು ಗರಂ ಆದರು.
ನಾವು ಹೋರಾಟಗಾರರು ಮೂರ್ಖರೆಂದು ಕೊಂಡಿದ್ದೀರಾ? ದನ ಕಾಯುವವರು ಎಂಎಲ್‌ಎ, ಮಂತ್ರಿಯಾಗಿದ್ದಾರೆ, ಇವರೆಲ್ಲ ಹೆಬ್ಬಟ್ಟಿದ್ದಂತೆ, ಸರ್ಕಾರಿ ಮೆಡಿಕಲ್ ಕಾಲೇಜನ್ನು ಬಾರಾಕಮಾನ ಆಗಲು ಬಿಡಲ್ಲ ಗೋಲಗುಮ್ಮಟನೆ ಕಟ್ಟುತ್ತೇವೆ ಎಂದು ಕುಲಕರ್ಣಿ ಗುಡುಗಿದರು.
ಮಾನವ ಸರಪಳಿ
ಪ್ರತಿಭಟನಾ ಸಮಾವೇಶಕ್ಕೂ ಮುನ್ನ ಶ್ರೀ ಶಿವಾಜಿ ಮಹಾರಾಜರ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಗಾಂಧೀವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸಿ ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ಹಕ್ಕೊತ್ತಾಯ ಮಂಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಭಿ. ಭಗವಾನರೆಡ್ಡಿ, ವಿ.ಸಿ. ನಾಗಠಾಣ, ಅನೀಲ ಹೊಸಮನಿ, ಶ್ರೀನಾಥ ಪೂಜಾರಿ, ಪ್ರಭುಗೌಡ ಪಾಟೀಲ, ಅಣ್ಣಾರಾಯ ಈಳಿಗೇರ, ಚಂದ್ರಶೇಖರ ಲೆಂಡಿ, ಸುರೇಶ ಜಿಬಿ, ಸಿದ್ಧಲಿಂಗ ಬಾಗೇವಾಡಿ, ಎಚ್.ಟಿ. ಭರತಕುಮಾರ, ಅಕ್ರಂ ಮಾಶ್ಯಾಳಕರ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

” ಸರ್ಕಾರಿ ಸ್ವತ್ತುಗಳ ಉಳಿವಿಗಾಗಿ ನಡೆದ ಹೋರಾಟಗಳು ಮೈಸೂರು, ಕೊಡಗಿನಲ್ಲಿ ಮಾತ್ರ, ಈಗ ವಿಜಯಪುರದಲ್ಲಿ ನಡೆಯುತ್ತಿರುವ ಹೋರಾಟ ಚರಿತ್ರೆಯ ಪುಟಗಳನ್ನು ಸೇರ್ಪಡೆಯಾಗಲಿದೆ, ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಬಾರದು, ಖಾಸಗಿಯವರ ಕೈಗೆ ಮೆಡಿಕಲ್ ಕಾಲೇಜ್ ಅಷ್ಟೇ ಅಲ್ಲ ಯಾವ ವ್ಯವಸ್ಥೆಯೂ ಖಾಸಗಿಯವರ ಸುಪರ್ದಿಗೆ ಹೋಗಬಾರದು.”
– ಜಿ.ಬಿ. ಪಾಟೀಲ
ಹಿರಿಯ ಹೋರಾಟಗಾರ

