ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕಾಂಗ್ರೆಸ್‌ನವರು ತಮ್ಮ ಸ್ವಾರ್ಥಕ್ಕಾಗಿ, ನೆಹರೂ ಮನೆತನ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿಯೇ ಸಂವಿಧಾನ ತಿದ್ದುಪಡಿ ಮಾಡಿದ್ದರು. ಸಂವಿಧಾನವನ್ನು ಯಾರು ಎಷ್ಟು ಬಾರಿ ತಿದ್ದುಪಡಿ ಮಾಡಿದರು, ಏತಕ್ಕಾಗಿ ಮಾಡಿದರು ಎಂಬುದು ಮುಖ್ಯ ಎಂದು ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಸಿಂದಗಿ ಪಟ್ಟಣದ ಮಾಂಗಲ್ಯ ಭವನದಲ್ಲಿ ಸಿಂದಗಿ ಯುವಾ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳ ಅನಾವರಣ ಹಾಗೂ ಹೊಸ ಬೆಳಕು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೧೯೭೫ರ ತುರ್ತು ಪರಿಸ್ಥಿತಿ, ೧೯೫೧ರಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೆರಲು ಮಾಡಿದ ತಿದ್ದುಪಡಿ ಸೇರಿದಂತೆ ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ೭೬ಬಾರಿ ಸಂವಿಧಾನ ತಿದ್ದುಪಡಿ ಮಾಡಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿದ್ದು ಕಾಂಗ್ರೆಸ್ ಎಂದು ಆರೋಪ ಮಾಡಿದರು.
ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ವಿರುದ್ಧ ಚುನಾವಣಾ ತಕರಾರು ಪ್ರಕರಣ ದಾಖಲಿಸಲು ನಿರ್ಬಂಧ ವಿಧಿಸುವ ತಿದ್ದುಪಡಿ ತಂದು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡುವಂತಿಲ್ಲ ಎಂದಿದ್ದು ಕಾಂಗ್ರೆಸ್. ಕಾಂಗ್ರೆಸ್ ಸೇರುವುದೆಂದರೆ, ಅದು ಆತ್ಮಹತ್ಯೆ ಮಾಡಿಕೊಂಡಂತೆ” ಎಂಬ ಅಂಬೇಡ್ಕರ್ ಮಾತು ಇಲ್ಲಿ ಉಲ್ಲೇಖಾರ್ಹ. ನಮ್ಮನ್ನೇ ಬಿಟ್ಟ ನಿಮಗೆ ಸೋಲೇ ಖಚಿತ ಎಂದು ಸಂವಿಧಾನ ಶಿಲ್ಪಿಯ ವಿರುದ್ಧ ಕಾಂಗ್ರೆಸ್ ಕುತಂತ್ರ ಮಾಡಿ ಅವರನ್ನು ಸಂಸತ್ತಿಗೆ ಬರಬಾರದೆಂದು ಅವರ ವಿರುದ್ಧ ಅವರ ಆಪ್ತ ಸಹಾಯಕರನ್ನೇ ಸ್ಪರ್ದಿಸಿ ಕಣಕ್ಕಿಳಿಸಿ ಸೋಲುವಂತೆ ಮಾಡಿದ್ದು ಕಾಂಗ್ರೆಸ್. ಕಾಂಗ್ರೆಸ್ ನಾಯಕ ನೆಹರು ಅವರು ಮುಸ್ಲಿಮರ ಬಗ್ಗೆ ಅನುಕಂಪ ಹೊಂದಿದ್ದರೂ ಒಮ್ಮೆಯೂ ಪರಿಶಿಷ್ಟ ಜಾತಿಗಳ ಕಲ್ಯಾಣದ ಬಗ್ಗೆ ಮಾತನಾಡಿಲ್ಲ ಎಂದು ಅಂಬೇಡ್ಕರ್ ಅವರೇ ಖುದ್ದು ಬರೆದಿದ್ದಾರೆ ಎಂದು ಪ್ರತಿಪಾದಿಸಿದ ಸೂಲಿಬೆಲೆ, ಇನ್ನು ದಲಿತರು ಕಾಂಗ್ರೆಸ್ ಪಕ್ಷದಿಂದ ಯಾವ ಅನುಕಂಪವನ್ನು ನಿರೀಕ್ಷಿಸಬಹುದು ಎಂದು ಪ್ರಶ್ನಿಸಿದ್ದಾರೆ. ಅತಿ ಹೆಚ್ಚು ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಿದ್ದು ಕಾಂಗ್ರೆಸ್ ಸರ್ಕಾರ. ೫೦ ವರ್ಷ ದೇಶ ಆಳಿದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ೭೫ಬಾರಿ, ವಾಜಪೇಯಿ ಪ್ರಧಾನಿಯಾಗಿದ್ದಾಗ ೧೪ಬಾರಿ, ನರೇಂದ್ರ ಮೋದಿಯವರು ಪ್ರಧಾನಿಯಾಗಿ ೮ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಲಾಗಿದೆ ಎಂದರು.
ಈ ವೇಳೆ ಮಾಜಿ ಸಚಿವ ಎನ್.ಮಹೇಶ ಬಾಬಾಸಾಹೇಬರ್ ೬ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅಂಬೇಡ್ಕರ ಅವರ ವ್ಯಕ್ತಿತ್ವ ಕ್ರಿಯಾಶೀಲತೆಯಿಂದ ಕೂಡಿತ್ತು. ಇಡೀ ಸಮಾಜವನ್ನು ತಮ್ಮ ಗುರಿಯೆಡೆಗೆ ಕರೆದುಕೊಂಡು ಹೋಗುವ ಸಾಮರ್ಥ್ಯಯುಳ್ಳವರಾಗಿದ್ದರು. ಭಾರತ ತುಂಬಾ ಕ್ರಿಯಾಶೀಲ ದೇಶ ಎಂದವರು ಬಾಬಾಸಾಹೇಬರು. ಅವರ ವಿಚಾರಗಳನ್ನು ಹೊಸ ಬೆಳಕು ಕಾರ್ಯಕ್ರಮಗಳ ಮೂಲಕ ಪರಿಚಯಿಸುತ್ತಿರುವ ಯುವಾ ಬ್ರಿಗೇಡ್ ಕಾರ್ಯ ಶ್ಲಾಘನೀಯ. ನಮ್ಮ ದೇಶದ ಸ್ವಾತಂತ್ರ‍್ಯ ಉಳಿಸುಕೊಳ್ಳಲು ನಮ್ಮ ದೇಹದ ರಕ್ತ ಕೊಟ್ಟಾದರೂ ಉಳಿಸಿಕೊಳ್ಳಬೇಕು ಎಂದು ಕರೆ ಕೊಟ್ಟವರು ಬಾಬಾಸಾಹೇಬರು. ಯುವಾ ಬ್ರಿಗೇಡ್ ಈ ನಡೆಗೆ ನಮ್ಮ ಬೆಂಬಲ ಯಾವಾಗಲು ಇದೆ. ಹೊಸ ಬೆಳಕು ಕಾರ್ಯಕ್ರಮ ನಿರಂತರವಾಗಿರಲಿ ಎಂದರು.
ಈ ವೇಳೆ ಬಾಬಾಸಾಹೇಬರ ೬ ಪುಸ್ತಕಗಳನ್ನು ಮಾಜಿ ಸಚಿವ ಎನ್.ಮಹೇಶ, ಚಕ್ರವರ್ತಿ ಸೂಲಿಬೆಲೆ ಹಾಗೂ ಅಭಿನವ ರುದ್ರಮುನಿ ಶಿವಾಚಾರ್ಯರು ಲೋಕಾರ್ಪಣೆಗೊಳಿಸಿದರು.
ಈ ವೇಳೆ ಯಂಕಂಚಿ ಶ್ರೀಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು. ಕಾರ್ಯಕ್ರಮ ದಲ್ಲಿ ಗುರುದೇವಾಶ್ರಮದ ಶಾಂತಗಂಗಾಧರ ಶ್ರೀಗಳು, ಮಾಜಿ ಶಾಸಕ ರಮೇಶ ಭೂಸನೂರ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಅಶೋಕ ಅಲ್ಲಾಪುರ, ಸಂತೋಷ ಪಾಟೀಲ ಡಂಬಳ, ಶ್ರೀಕಾಂತ ಬಿಜಾಪುರ, ಯುವಾ ಬ್ರಿಗೇಡ್ ವಿಭಾಗೀಯ ಸಂಚಾಲಕ ರಾಜು ಪಾಟೀಲ ಸೇರಿದಂತೆ ಅನೇಕರು ಇದ್ದರು.

