ಉದಯರಶ್ಮಿ ದಿನಪತ್ರಿಕೆ
ಆಲಮೇಲ: ವಿಜಯಪುರ ಜಿಲ್ಲೆ ಕಡಣಿಯ ಬೆರಗು ಪ್ರಕಾಶನ ಸಂಸ್ಥೆಯು ನೀಡುವ ರಾಜ್ಯಮಟ್ಟದ ೨೦೨೫ನೇ ಸಾಲಿನ ಪ್ರೊ.ಎಚ್.ಟಿ.ಪೋತೆ ಹಸ್ತಪ್ರತಿ ಪ್ರಶಸ್ತಿಗೆ ಸಿಂದಗಿಯ ದೇವೂ ಮಾಕೊಂಡ ಅವರ “ಯುದ್ಧ ಮೃದಂಗ’ ಅನುವಾದಿತ ಸಂಕಲನದ ಹಸ್ತಪ್ರತಿ ಆಯ್ಕೆಯಾಗಿದೆ ಹಾಗೂ ಪ್ರೊ.ಎಚ್.ಟಿ.ಪೋತೆ ಸೃಜನಶೀಲ ಸಾಹಿತ್ಯ ಪ್ರಶಸ್ತಿಗೆ ಬೆಂಗಳೂರಿನ ಡಾ.ಪದ್ಮನಿ ನಾಗರಾಜು ಅವರ ಸಮುದ್ರದ ತೆರೆಯ ಸರಿಸಿ ಕಥಾ ಸಂಕಲನ ಮತ್ತು ವಿಜಯಪುರದ ಡಾ. ಸುಜಾತ ಚಲವಾದಿ ಅವರ ಲಚಮವ್ವ ಮತ್ತು ಇತರ ಕತೆಗಳು ೨೦೨೪ರ ಕೃತಿಗಳನ್ನು ಆಯ್ಕೆಮಾಡಲಾಗಿದೆ, ದಿ.ಯಮುನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ ೨೦೨೪ರ ಸಾಲಿನ ಸೃಜನೇತರ ವಿಭಾಗದ ಪುಸ್ತಕ ಪ್ರಶಸ್ತಿಗೆ ಬಾಗಲಕೋಟೆಯ ಮಹಾದೇವ ಬಸರಕೋಡ ಅವರ ಸುರಧೇನು ಮತ್ತು ತುಮಕೂರಿನ ಅನಂತ ಕುಣಿಗಲ್ ಅವರ ‘ಅಪ್ಪನ ಅಟೋಗ್ರಾಫ್’ ಕೃತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಬೆರಗು ಪ್ರಕಾಶನ ಸಂಸ್ಥೆಯ ವಿಜಯಲಕ್ಷ್ಮಿ ಆರ್. ಕತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆರಗು ಪ್ರಕಾಶನವು ಕಳೆದ ೬ ವರ್ಷಗಳಿಂದಲೂ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದ್ದು. ಪ್ರಸಕ್ತ ವರ್ಷದ ಪ್ರಶಸ್ತಿಗೆ ೧೧೮ ಪುಸ್ತಕಗಳು, ಹಾಗೂ ಹಸ್ತಪ್ರತಿ ಸ್ಪರ್ಧೆಗೆ ೫೭ ಹಸ್ತಪ್ರತಿಗಳು ನಾಡಿನ ವಿವಿಧ ಭಾಗಗಳಿಂದ ಮತ್ತು ಮಹಾರಾಷ್ಟ್ರ, ಕೇರಳ ಹಾಗೂ ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದವು. ಖ್ಯಾತ ಕವಿ, ಕತೆಗಾರ ವಾಸುದೇವ ನಾಡಿಗ ಹಾಗೂ ವಿಜಯಪುರದ ಸಾಹಿತಿ ಶಂಕರ ಬೈಚಬಾಳ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು. ಹಸ್ತಪ್ರತಿ ಪ್ರಶಸ್ತಿಯು ಹತ್ತು ಸಾವಿರ ರೂ. ನಗದು, ಪ್ರಶಸ್ತಿಫಲಕ ಹಾಗೂ ಸ್ಮರಣಿಕೆಯೊಳಗೊಂಡಿದ್ದು ಬೆರಗು ಪ್ರಕಾಶನವು ಹಸ್ತಪ್ರತಿಯನ್ನು ಪ್ರಕಟಿಸುವ ಮೂಲಕ ಗೌರವಿಸಲಿದೆ ಹಾಗೂ ಪುಸ್ತಕ ಪ್ರಶಸ್ತಿಯು ಐದು ಸಾವಿರ ರೂ.ನಗದು, ಪ್ರಶಸ್ತಿಫಲಕ ಹಾಗೂ ಸ್ಮರಣಿಕೆಯೊಳಗೊಂಡಿದ್ದು ಜನೆವರಿ ೨೦೨೬ರ ಮೊದಲ ವಾರ ಕಡಣಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

