ಕೋರವಾರ ಹೆಸ್ಕಾಂ ವ್ಯಾಪ್ತಿಯ ಗ್ರಾಮಗಳ ರೈತರ ಪ್ರತಿಭಟನೆ | ಹಗಲು ಕನಿಷ್ಠ ೬ ಗಂಟೆ ವಿದ್ಯುತ್ ಪೂರೈಕೆಗೆ ಆಗ್ರಹ
ದೇವರಹಿಪ್ಪರಗಿ: ಗ್ರಾಮಗಳಿಗೆ ಸರಿಯಾಗಿ ನಿರಂತರ ವಿದ್ಯುತ್ ಪೂರೈಸಬೇಕೆಂದು ಆಗ್ರಹಿಸಿ ರೈತರು ಹೆಸ್ಕಾಂ ಕಚೇರಿಗೆ ಬೀಗ ಹಾಗೂ ಮುತ್ತಿಗೆ ಹಾಕಿ, ಪ್ರತಿಭಟನೆ ಕೈಗೊಂಡರು.
ತಾಲ್ಲೂಕಿನ ಕೋರವಾರ ಗ್ರಾಮದ ಹೆಸ್ಕಾಂ ಕಚೇರಿಯ ಮುಂದೆ ಮಂಗಳವಾರ ಸೇರಿದ ನೂರಾರು ರೈತರು ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾನ್ಹ ೩ ಗಂಟೆಯವರೆಗೆ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.
ಕೋರವಾರ ಶಾಖೆಯ ವ್ಯಾಪ್ತಿಯಲ್ಲಿ ಬರುವ ತಾಂಡಾ, ವರ್ಕಾನಹಳ್ಳಿ, ಹಂದಿಗನೂರ, ಬಸ್ತಿಹಾಳ, ಹಾಗೂ ಸುತ್ತಲಿನ ಗ್ರಾಮಗಳಿಗೆ ಕನಿಷ್ಟ ಆರು ಗಂಟೆ ಹಗಲು ವಿದ್ಯುತ್ ಪೂರೈಸಬೇಕೆಂದು ಆಗ್ರಹಿಸಿದರು.
ಬಸವರಾಜ ಏವೂರ, ಸೋಮಶೇಖರ ಹಿರೇಮಠ, ಮಲ್ಲು ಛಾಯಾಗೋಳ, ಶ್ರೀಶೈಲ ತಾಳಿಕೋಟಿ, ಬಾಪುಗೌಡ ಬಿರಾದಾರ ಮಾತನಾಡಿ, ವಿದ್ಯುತ್ ಸಮಸ್ಯೆಯಿಂದ ರೈತರು ಕಂಗಾಲಾಗಿದ್ದಾರೆ. ರಾತ್ರಿ ಹೊತ್ತಿನಲ್ಲಿ ವಿದ್ಯುತ್ ನೀಡುವುದರಿಂದ ಸಾಕಷ್ಟು ಅನಾನಕೂಲಗಳಾಗುತ್ತಿವೆ. ರಾತ್ರಿ ಸಮಯದಲ್ಲಿ ವಿದ್ಯುತ್ ಸ್ಥಗಿತಗೊಳ್ಳುವುದರಿಂದ ಕರೆಂಟ್ ಮೋಟಾರುಗಳು ಸುಡುತ್ತಿವೆ. ಅದಕ್ಕಾಗಿ ರಾತ್ರಿ ಸಮಯ ಬಿಟ್ಟು ಹಗಲು ಹೊತ್ತಿನಲ್ಲಿ ವಿದ್ಯುತ್ ಒದಗಿಸಬೇಕು. ಈ ಕುರಿತು ಹಲವು ಬಾರಿ ಪ್ರತಿಭಟನೆ ಕೈಗೊಂಡಾಗ ಒಂದು ವಾರದಲ್ಲಿ ಸರಿಪಡಿಸುವುದಾಗಿ ಭರವಸೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅದಕ್ಕಾಗಿ ನೂರಾರು ರೈತರೊಂದಿಗೆ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಗಿದೆ ಹಿರಿಯ ಅಧಿಕಾರಿಗಳು ಆಗಮಿಸಿ ಸಮಸ್ಯೆ ಪರಿಹರಿಸುವವರೆಗೆ ಸ್ಥಳ ಬಿಟ್ಟು ಕದಲುವುದಿಲ್ಲ ಎಂದರು.
ಇಂಡಿ ಹೆಸ್ಕಾಂ ಇಇ ಎಸ್.ಎ.ಬಿರಾದಾರ, ಸಿಂದಗಿ ಎಇಇ ಚಂದ್ರಕಾಂತ ನಾಯಿಕ, ದೇವರಹಿಪ್ಪರಗಿ ಎಇಇ ವಿಜಯಕುಮಾರ ಹವಾಲ್ದಾರ ಸ್ಥಳಕ್ಕೆ ಆಗಮಿಸಿ, ಹಗಲು ೩ ಗಂಟೆ ಮತ್ತು ರಾತ್ರಿ ೩ ಗಂಟೆ ವಿದ್ಯುತ್ ನೀಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಮಹಾಂತಗೌಡ ಸುಂಬಡ, ಬಸನಗೌಡ ಛಾಯಾಗೋಳ, ಮಹಾಂತಗೌಡ ಬಿರಾದಾರ, ಚೆನ್ನಪ್ಪಗೌಡ ಬಿರಾದಾರ, ಮಾಂತೇಶ ಕಲಬರ‍್ಗಿ, ಸಂಗಮೇಶ ಮ್ಯಾಗೇರಿ, ಬಸು ಬಿರಾದಾರ, ರಾಜು ಸಿದರಡ್ಡಿ, ಶಿವಾಜಿ ಬೇವಿನಮಟ್ಟಿ, ಕಾಶೀನಾಥ ಘಾಟಗೆ, ಧನಸಿಂಗ್ ಲಮಾಣಿ, ಶಿವಯ್ಯ ಚಿಕ್ಕಮಠ, ಭೀಮರಾಯ ಗುಡದಿನ್ನಿ, ರಮೇಶ ಅಂಗಡಿ, ಶ್ರೀಶೈಲ ಬಜಂತ್ರಿ ಇದ್ದರು.