ನ.೫ರಂದು ನೆಲೆ ಪ್ರಕಾಶನ ಸಂಸ್ಥೆ, ಡಾ.ಎಂ.ಎಂ ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ
ಸಿಂದಗಿ: ಪಟ್ಟಣದ ನೆಲೆ ಪ್ರಕಾಶನ ಸಂಸ್ಥೆಯ ಹಾಗೂ ಡಾ.ಎಂ.ಎಂ ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರತಿ ವರ್ಷ ಜಾನಪದ ವಿದ್ವಾಂಸರಿಗೆ ನೀಡುವ ದೇಸಿ ಸಮ್ಮಾನವನ್ನು ನೀಡುತ್ತಿದೆ. ಈ ಬಾರಿ ದೇಸಿ ಸಮ್ಮಾನ ಪ್ರಶಸ್ತಿಗೆ ಹೊನ್ನಾವರದ ಹಿರಿಯ ಜಾನಪದ ವಿದ್ವಾಂಸರಾದ ಶಾಂತಿ ನಾಯಕ ಅವರು ಆಯ್ಕೆಯಾಗಿದ್ದಾರೆ ಎಂದು ಸಂಚಾಲಕ ಡಾ.ಚನ್ನಪ್ಪ ಕಟ್ಟಿ ತಿಳಿಸಿದ್ದಾರೆ.
ಇವರು ಶಿಕ್ಷಕ ವೃತ್ತಿಯ ಜೊತೆಗೆ ಸಾಹಿತ್ಯ ವಲಯದಲ್ಲಿ ಸಾಕಷ್ಟು ಕೃಷಿ ಮಾಡಿದ್ದಾರೆ. ಶಾಂತಿ ನಾಯಕ ಅವರು ಇದುವರೆಗೆ ೪೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಜಾನಪದ ಲೋಕಕ್ಕೆ ಇವರು ನೀಡರುವ ಕೊಡುಗೆಯನ್ನು ಪರಿಗಣಿಸಿ ೨೦೨೩ನೇ ಸಾಲಿನ ದೇಸಿ ಸಮ್ಮಾನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಡಾ.ರಾಮಕೃಷ್ಣ ಮರಾಠ, ಡಾ.ವಿಜಯಕುಮಾರ್ ಕಟಗಿಹಳ್ಳಿಮಠ, ಡಾ.ಎಫ್.ಟಿ ಹಳ್ಳಿಕೇರಿ ಇದ್ದಾರೆ.
ಇದೇ ನ.೫ರಂದು ಸಿಂದಗಿ ಪಟ್ಟಣದಲ್ಲಿ ಜರುಗಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ೧೧ ಸಾವಿರ ರೂಪಾಯಿ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು.
ಈ ವೇಳೆ ಪ್ರಾಧ್ಯಾಪಕ ನಾಗರಾಜ ಹೆಗಡೆ ಬರೆದ ಶಾಂತಿ ನಾಯಕ ಬದುಕು ಬರಹ ಎನ್ನುವ ಕಿರು ಪುಸ್ತಕವನ್ನು ನೆಲ ಪ್ರಕಾಶನ ಪ್ರಕಟಿಸಿ ಬಿಡುಗಡೆಗೊಳಿಸುತ್ತದೆ ಎಂದು ಪ್ರತಿಷ್ಠಾನದ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.