ಹೂವು ಬಿಟ್ಟ ಕಬ್ಬಿನ ತೂಕ ಇಳಿಕೆ | ಕಬ್ಬು ಕಟಾವು ಗ್ಯಾಂಗ್‌ಗೆ ಬಾರಿ ಡಿಮ್ಯಾಂಡ್ | ಆತಂಕದಲ್ಲಿ ರೈತರು
ಉದಯರಶ್ಮಿ ದಿನಪತ್ರಿಕೆ
ವರದಿ: ಎಸ್ ಎಮ್ ಇಟ್ಟಿ
ಜಮಖಂಡಿ: ಕಬ್ಬಿಗೆ ಸೂಕ್ತ ದರ ನಿಗದಿಗೆ ಆಗ್ರಹಿಸಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದ ಕಬ್ಬು ಬೆಳೆಗಾರರು, ಈಗ ಕಟಾವಿಗೆ ಗ್ಯಾಂಗ್‌ಮನ್‌ಗಳನ್ನು ಕಾಯುವಂತಾಗಿದೆ. ಅಷ್ಟೇ ಅಲ್ಲ ಹೆಚ್ಚಿಗೆ ದುಡ್ಡು ಕೇಳಿದರೂ ನೀಡಿ ಕಾರ್ಖಾನೆಗೆ ಕಬ್ಬು ಸಾಗಿಸುವ ಒತ್ತಡದಲ್ಲಿ ಸಿಲುಕಿದ್ದಾರೆ. ಹೌದು, ಜಿಲ್ಲೆಯಲ್ಲಿ ಎಲ್ಲ ಸಕ್ಕರೆ ಕಾರ್ಖಾನೆಗಳು ಒಮ್ಮೆಲೆ ಆರಂಭವಾದ ಬಳಿಕ ಕಬ್ಬು ಬೆಳೆಗಾರರು ಎದುರಿ ಸುತ್ತಿರುವ ಹೊಸ ಸಂಕಷ್ಟ ಇದು.
”ತಿಂಗಳುಗಟ್ಟೆ ಕೆಲಸ ಬಿಟ್ಟು ಕಬ್ಬಿನ ದರಕ್ಕಾಗಿ ರಸ್ತಾದಾಗ ಕುಳಿತು ಪ್ರತಿಭಟನೆ ಮಾಡಿದ್ದ ಆಯ್ರೀ. ಈಗ ಕಾರ್ಖಾನೆಗೆ ಕಬ್ಬ ಕಳಸಬೇಕಂದ್ರ ಕಡ್ಯಾಕ (ಕಟಾವು) ಗ್ಯಾಂಗ್‌ಮನ್‌ಗಳು ಹೆಚ್ಚಿಗೆ ಹಣ ಕೇಳಾಕ ಶುರು ಮಾಡ್ಯಾರಿ,” ಎಂದು ಕಬ್ಬು ಬೆಳೆಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಜಮೀನುಗಳು ರಸ್ತೆಯಿಂದ ಒಂದಿಷ್ಟು ದೂರ ಇದ್ದರೆ ಕಾರ್ಖಾನೆಯವರು ನೀಡುವ ಹಣ ಬಿಟ್ಟು ಪ್ರತಿ ಲೋಡ್ ಗೆ ಗ್ಯಾಂಗ್‌ಮನ್ ಗಳಿಗೆ 3 ಸಾವಿರ ರೂ. ಹೆಚ್ಚಿಗೆ ನೀಡಬೇಕು. ಜತೆಗೆ ಟ್ರ್ಯಾಕ್ಟರ್ ಡೈವರ್‌ಗೆ 500 ರೂ. ಕೊಡಬೇಕು. ಇಷ್ಟು ಹಣ ನೀಡಲು ಒಪ್ಪಿದರೂ 15 ದಿನಗಳ ನಂತರ ಸರದಿ ಬರುತ್ತದೆ ಎನ್ನುತ್ತಿದ್ದಾರೆ ರೈತರು.
ಕಬ್ಬಿಗೆ ಹೆಚ್ಚಿನ ದರ ನಿಗದಿಯಾದ ಖುಷಿ ಕಟಾವಿನ ಖರ್ಚು ಒಂದೆಡೆಯಾದರೆ, ಹೆಚ್ಚಾಗಿದ್ದರಿಂದ ‘ಕಟ್ಟಿ ಕಲ್ಲು ಕಟ್ಟೆಗೆ ಹೊಂದಿಸಿದಂತಾಗಿದೆ’ ಎಂಬ ಮಾತು ಬೆಳೆಗಾರರಿಂದ ಕೇಳಿಬರುತ್ತಿದೆ.
ಸಾಕಷ್ಟು ಗ್ಯಾಂಗ್ ಇದ್ದರೂ ಬೇಡಿಕೆ
ಕಬ್ಬು ಕಟಾವಿಗೆ ಹೊರ ರಾಜ್ಯ ಸೇರಿದಂತೆ ಸ್ಥಳೀಯ ಗ್ಯಾಂಗ್‌ಗಳು ಸಾಕಷ್ಟಿವೆ. ಅಲ್ಲದೇ ಅಕ್ಕ-ಪಕ್ಕದ ಜಮೀನುಗಳ ರೈತರು ಸೇರಿ ತಾವೇ ಒಂದೊಂದು ಗ್ಯಾಂಗ್ ಕಟ್ಟಿಕೊಂಡಿದ್ದಾರೆ. ಇಷ್ಟಾದರೂ ಕಬ್ಬು ಕಟಾವು ಮಾಡಲು ಹೆಚ್ಚಿನ ಹಣದ ಬೇಡಿಕೆ ಶುರುವಾಗಿದೆ. ಬಹಳ ಮುಂದುವರಿದ ರೈತರ ಪ್ರತಿಭಟನೆ ಹಾಗೂ ಸಕ್ಕರೆ ಕಾರ್ಖಾನೆಗಳು ವಿಳಂಬವಾಗಿ ಕಬ್ಬು ನುರಿಸುವಿಕೆ ಆರಂಭಿಸಿರುವುದು ಇದಕ್ಕೆಲ್ಲಾ ಕಾರಣವಾಗಿದೆ. ಜತೆಗೆ ಕಬ್ಬು ಕಳುಹಿಸಿದ ಮೇಲೆ ಬೇರೆ ಬೆಳೆ ಬೆಳೆಯಲು ವಿಳಂಬ ಆಗಬಾರದು ಎಂಬ ಕಾರಣಕ್ಕೆ ರೈತರು ಅವಸರ ಮಾಡುತ್ತಿದ್ದಾರೆ.
ಗರಿಕೆ ಬಿಡುತ್ತಿರುವ ಕಬ್ಬು
ಕಬ್ಬಿಗೆ ಗರಿಕೆ ಮೂಡಲು ಆರಂಭವಾಗಿದೆ. ಇದರಿಂದ ಕಬ್ಬಿನಲ್ಲಿನ ರಸ ಕಡಿಮೆ ಆಗಿ ತೂಕ ಕಡಿಮೆ ಬರುತ್ತದೆ ಎಂಬ ಚಿಂತೆಯೂ ರೈತರನ್ನು ಕಾಡುತ್ತಿದೆ.
ಹಲವು ವ್ಯಾಪಾರಿಗಳಿಗೆ ಸುಗ್ಗಿ
ಕಬ್ಬು ಕಟಾವು ಪ್ರಾರಂಭಗೊಳ್ಳುತ್ತಿದ್ದಂತೆಯೇ ಹಲವು ವಹಿವಾಟಗಳು ಚುರುಕುಗೊಂಡಿವೆ. ಕಬ್ಬು ಕಟಾವಿಗೆ ನಸುಕಿನ ಜಾವ ಕಾರ್ಮಿಕರು ಹೋಗುತ್ತಿರುವು ದರಿಂದ ಹೋಟೆಲ್, ಪಾನ್‌ಶಾಪ್‌ಗಳಲ್ಲಿ ವ್ಯವಹಾರ ಚುರುಕಾಗಿದೆ. ಅದರಂತೆ ರಾತ್ರಿ ವೇಳೆ ಮಾಂಸಾಹಾರಿ ಖಾನಾವಳಿ, ಮದ್ಯದಂಗಡಿ ವಹಿವಾಟವೂ ಜೋರಾಗಿರುತ್ತದೆ.

