ಉದಯರಶ್ಮಿ ದಿನಪತ್ರಿಕೆ
ವರದಿ: ದೇವೇಂದ್ರ ಹೆಳವರ
ವಿಜಯಪುರ: ಈ ಅಜ್ವಿಗೆ ವಯಸ್ಸು ನೂರರ ಮೇಲಾಗಿದೆ. ಬೆನ್ನು ಬಾಗಿಲ್ಲ. ಕಣ್ಣಿಗೆ ಕನ್ನಡಕ ಇಲ್ಲ. ಕೆಲಸ ಮಾಡುವ ಉತ್ಸಾಹ ಕುಗ್ಗಿಲ್ಲ. ಶರೀರ ಮುಪ್ಪಾದರೂ ನಿತ್ಯದ ಕಾಯಕ ಬಿಟ್ಟಿಲ್ಲ.
ನೂರು ವಸಂತಗಳನ್ನು ಕಂಡ ಈ ಶತಾಯುಷಿ ಅಜ್ವಿಯ ಹೆಸರು ಸುಂದರವ್ವ ರಾಮಚಂದ್ರ ಭಜಂತ್ರಿ. ವಿಜಯಪುರ ನಗರದ ಇಬ್ರಾಹಿಂಪುರ ಬಡಾವಣೆಯ ನಿವಾಸಿ. ಸುಂದರವ್ವಜ್ಜಿ ಊರಿನ ಎಲ್ಲರಿಗೂ ಚಿರಪರಿತ.
ಸುಂದರವ್ವಜ್ಜಿಗೆ ಹತ್ತು ಮಕ್ಕಳು. ಆರು ಜನ ಹೆಣ್ಣುಮಕ್ಕಳು. ನಾಲ್ವರು ಗಂಡುಮಕ್ಕಳು. ಇವರಲ್ಲಿ ಒಬ್ಬ ಮಗ ಕಲಬುರ್ಗಿ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿ(ಎಎಸ್ ಐ)ಯಾಗಿದ್ದಾರೆ.
ಪತಿ ರಾಮಚಂದ್ರ ಮೂವತ್ತು ವರ್ಷಗಳ ಹಿಂದೆಯೇ ತೀರಿಹೋಗಿದ್ದಾರೆ. ಪತಿಯ ನಿಧನ ನಂತರ ಕಷ್ಟಪಟ್ಟು ಮಕ್ಕಳನ್ನು ಬೆಳೆಸಿದ್ದಾಳೆ. ಗಿರಿಮೊಮ್ಮಕ್ಕಳನ್ನು ಕಂಡಿರುವ ಈ ಸುಂದರವ್ವಜ್ಜಿಗೆ ೧೨೦ ಕ್ಕೂ ಹೆಚ್ಚು ಮೊಮ್ಮಕ್ಕಳು ಮರಿಮೊಮ್ಮಕ್ಕಳು ಇದ್ದಾರೆ.
ವಯಸ್ಸು ನೂರಾದರೂ ಸುಂದರವ್ವಜ್ಜಿ ಈವರೆಗೂ ತನ್ನ ಕಾಯಕ ಮಾತ್ರ ಬಿಟ್ಟಿಲ್ಲ. ಇನ್ನೂ ಮೈ ಬಾಗಿಸಿ ನಿತ್ಯ ಕೆಲಸ ಮಾಡುತ್ತಾಳೆ.
ಇಳಿವಯಸ್ಸಿನಲ್ಲೂ ಸುಂದರವ್ವಜ್ಜಿ ದಣಿವರಿಯದೇ ಕೆಲಸ ಮಾಡುವುದನ್ನು ನೋಡಿ ಇಡೀ ಗ್ರಾಮಸ್ಥರು ಬೆರಗಾಗಿ ಹೋಗಿದ್ದಾರೆ.
ಮನೆಯಲ್ಲಿ ಉಪಜೀವನಕ್ಕಾಗಿ ಸಾಕಿದ ಒಂದೆರಡು ಎಮ್ಮೆಗಳಿವೆ. ಪ್ರತಿನಿತ್ಯ ಸೂರ್ಯೋದಯಕ್ಕೂ ಮೊದಲು ಏಳುವುದು, ಎಮ್ಮೆಗಳ ಹೆಂಡಿ-ಕಸ ತೆಗೆಯುವುದು, ಅವುಗಳಿಗೆ ಮೇವು ತಂದು ಹಾಕುವುದು. ನೀರು ಕುಡಿಸುವುದು, ಅಂಗಳ ಕಸಗೂಡಿಸುವುದು. ಕುಳ್ಳು ತಟ್ಟಿ ಮಾರುವುದು ಈ ಸುಂದರವ್ವಜ್ಜಿಯ ನಿತ್ಯದ ಕಾಯಕ.
ನಿತ್ಯ ಕಾಯಕ ಮಾಡಿಯೇ ಊಟ ಮಾಡುವ ಶತಾಯುಷಿ ಸುಂದರವ್ವಜ್ಜಿ ನಿಜಕ್ಕೂ ಕಾಯಕಯೋಗಿಯೇ ಸರಿ.
ಸುಂದರವ್ವಜ್ಜಿ ದಿನಾಲು ಸ್ನಾನ ಮಾಡಲು ಸ್ವತ: ತಾನೇ ಬಿಸಿನೀರು ಕಾಯಿಸಿಕೊಳ್ಳುತ್ತಾಳೆ. ಸ್ನಾನದ ಬಳಿಕ ತನ್ನ ಬಟ್ಟೆಯನ್ನು ತಾನೇ ತೊಳೆದುಕೊಳ್ಳುತ್ತಾಳೆ. ನಮಗ್ಯಾರೀಗೂ ನಮ್ಮವ್ವ ಹೊರೆ ಅನಿಸಿಲ್ಲ ಎಂದು ಹೇಳುತ್ತಾಳೆ ಆಕೆಯ ಹಿರಿಯ ಮಗಳು ನೀಲವ್ವ.
ಈ ಇಳಿವಯಸ್ಸಿನಲ್ಲೂ ಯಾರಿಗೂ ಹೊರೆಯಾಗದೇ ಸುಂದರವ್ವಜ್ಜಿ ತನ್ನ ನಿತ್ಯದ ಕಾಯಕ ಮಾಡುತ್ತ ನಡೆದಾಡಿಕೊಂಡು ಆರೋಗ್ಯವಾಗಿದ್ದಾಳೆ.
ವಯಸ್ಸಿದ್ದು, ಮೈಯಲ್ಲಿ ಶಕ್ತಿ ಇದ್ದರೂ ಮೈಮುರಿದು ದುಡಿಯದೇ ವ್ಯರ್ಥ ಸಮಯ ಕಳೆಯುವ ಸೋಮಾರಿಗಳಿಗೆ
ಈ ಸುಂದರವ್ವಜ್ಜಿಯ ಕಾಯಕ ಜೀವನ ಸ್ಫೂರ್ತಿಯಾಗಲಿ.
ಇಂದಿನ ಸಮಾಜದಲ್ಲಿ ನೂರು ವರ್ಷ ಮೇಲ್ಪಟ್ಟ ಹಿರಿಯರು ಸಿಗುವುದು ಅತೀ ವಿರಳ. ಅಂಥ ಹಿರಿಯ ಜೀವಿ, ದೀರ್ಘಾಯುಷಿ ಈ ಸುಂದರವ್ವಜ್ಜಿಗೆ ಆ ದೇವರು ಚೆನ್ನಾಗಿಟ್ಟಿರಲಿ ಎಂದು ನಾವೆಲ್ಲರೂ ಹಾರೈಸೋಣ.

ಹಲ್ಲುಗಳು ಬಿದ್ದರೂ ಅಜ್ಜಿ ಮಾತುಗಳು ಮಾತ್ರ ಖಡಕ್
ತೆಳ್ಳನೆ ಮೈಕಟ್ಟು ಹೊಂದಿದ ಕಂಚಿನ ಕಂಠದ ಸುಂದರವ್ವಜ್ಜಿ ತಾನು ಸಾಕಿದ ಎಮ್ಮೆಗಳಿಗೆ ಸ್ವತ: ತಾನೇ ತಿರುಗಾಡಿ ಮೇವು ಮಾಡಿಕೊಂಡು ಬರುತ್ತಾಳೆ. ಕಿವಿಗಳು ಸ್ವಲ್ಪ ಮಂದವಾಗಿವೆ. ಹಲ್ಲುಗಳು ಬಿದ್ದು ಹೋಗಿವೆ. ಆದರೆ, ಮಾತುಗಳು ಮಾತ್ರ ಬಹಳ ಖಡಕ್.
ದಿನಕ್ಕೆ ಐದಾರು ಬಾರಿ ಚಹಾ ಸೇವನೆ, ಎರಡು ಹೊತ್ತು ಊಟ, ರಾತ್ರಿ ಕಣ್ತುಂಬ ನಿದ್ದೆ ಮಾಡುವ ಈ ಸುಂದರವ್ವಜ್ಜಿಗೆ ಯಾವ ಕಾಯಿಲೆಯೂ ಇಲ್ಲ.
ನೂರು ವರ್ಷ ಪೂರೈಸಿದ ಶತಾಯುಷಿ ಸುಂದರವ್ವಜ್ಜಿ ಕಣ್ಣಿಗೆ ಕನ್ನಡಕ ಹಾಕುವುದಿಲ್ಲ. ಕಣ್ದಿಗಿ ಇನ್ನೂ ನಂಬರ ಬಂದಿಲ್ಲಾ ಅಜ್ಜಿ ಅಂತಾ ಕೇಳಿದರೆ ನಂಬರ ಬಂದಾವು, ಮನ್ಯಾಗ ಮೂರ್ನಾಕ ಚಸ್ಮಾ ಅದಾವ, ಆದರ ಚಸ್ಮಾ ಹಾಕೊಂಡ್ರ ನೆಲ ಏರ ಇಳವ ಕಾಣ್ತದಂತ ಚಸ್ಮಾ ಹಾಕೋಳ್ಳೂದೇ ಬಿಟ್ಟೀನ್ರೀ. ಚಸ್ಮಾ ಹಾಕೋಳದೇನೇ ಹಂಗೇ ತಿರಗ್ಯಾಡತೀನಿ. ನನಗ ಚಸ್ಮಾನೇ ಬೇಕಾಗಿಲ್ರೀ ಎನ್ನುತ್ತಾಳೆ ಸುಂದರವ್ವಜ್ಜಿ.

