ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂದಿನ ಡಿಜಿಟಲ್ ಯುಗದಲ್ಲಿ ಮಾಧ್ಯಮ ಕೌಶಲಗಳು ಬಹಳ ಪ್ರಾಮುಖ್ಯತೆ ಪಡೆದಿದ್ದು, ವಿದ್ಯಾರ್ಥಿನಿಯರು ಈ ಕೌಶಲ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಹಿಳಾ ವಿವಿಯ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಣ ಅಭಿಯಾನ, ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಇವರ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ‘ವಿಡಿಯೋಗ್ರಾಫಿ ಕೌಶಲಗಳು’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಫೋಟೋ ಮತ್ತು ವಿಡಿಯೋ ಯಾವುದೇ ಘಟನೆ, ಪರಿಸ್ಥಿತಿ ಮತ್ತು ದೃಶ್ಯದ ನಿಜವಾದ ಸ್ವರೂಪವನ್ನು ಅತ್ಯಂತ ಸ್ಪಷ್ಟವಾಗಿ ಪ್ರತಿಬಿಂಬಿಸುವ ಶಕ್ತಿಯನ್ನು ಹೊಂದಿವೆ. ಇಂದಿನ ಡಿಜಿಟಲ್ ಯುಗದಲ್ಲಿ ಈ ರೀತಿಯ ದೃಶ್ಯ–ಮಾಧ್ಯಮ ಕೌಶಲಗಳು ಅಪಾರ ಮಹತ್ವವನ್ನು ಪಡೆದಿವೆ. ಈ ಕೌಶಲಗಳು ಜ್ಞಾನವನ್ನು ವಿಸ್ತರಿಸುವುದಷ್ಟೇ ಅಲ್ಲ, ಭವಿಷ್ಯದ ವೃತ್ತಿಜೀವನಕ್ಕೆ ಹೊಸ ಅವಕಾಶಗಳನ್ನೂ ಒದಗಿಸುತ್ತವೆ ಎಂದರು.
ಕಾರ್ಯಾಗಾರದಲ್ಲಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಇಂದಿನ ಪೀಳಿಗೆಯಲ್ಲಿ ಬಾಲ್ಯದಿಂದಲೇ ಫೋಟೋ ಮತ್ತು ವೀಡಿಯೋಗ್ರಾಫಿ ಕೌಶಲಗಳು ಕಂಡು ಬರುತ್ತಿವೆ. ಕೆಲವೊಮ್ಮೆ ಅಪಾಯವನ್ನು ಲೆಕ್ಕಿಸದೆ ಯುವಕರು ಫೋಟೋ–ವಿಡಿಯೋ ಮಾಡುವ ಸಾಹಸಗಳಲ್ಲಿ ತೊಡಗುತ್ತಾರೆ. ಡಿಜಿಟಲ್ ಯುಗದೊಂದಿಗೆ ಎಐ ಬಳಕೆ ಕೂಡ ಹೆಚ್ಚಾಗಿದೆ. ಫೋಟೋಗ್ರಾಫರ್‌ಗಳು ಸಮಾಜದ ಕಳವಳ ಮತ್ತು ಸಮಸ್ಯೆಗಳನ್ನು ದೃಶ್ಯಗಳ ಮೂಲಕ ಪರಿಣಾಮಕಾರಿಯಾಗಿ ಚಿತ್ರಿಸುತ್ತಾರೆ. ವೀಡಿಯೋಗ್ರಾಫಿ ಇಂದು ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ವೀಡಿಯೋಗ್ರಾಫಿ ಕುರಿತು ರಸಪ್ರಶ್ನೆ ಕೂಡ ಆಯೋಜಿಸಲಾಯಿತು.
ಇದೇ ಸಂದರ್ಭದಲ್ಲಿ ಟಿವಿ-೯ ಹಿರಿಯ ವರದಿಗಾರ ಅಶೋಕ ಯಡಳ್ಳಿ ಮಾತನಾಡಿ, ವೀಡಿಯೋಗ್ರಾಫಿ ಮೂಲತಃ ಫೋಟೋಗ್ರಾಫಿಯೇ ಆಗಿದೆ. ವೀಡಿಯೋಗ್ರಾಫಿ ಎಂದರೆ ನೆರಳು ಮತ್ತು ಬೆಳಕಿನ ಆಟ. ಈ ಆಟವನ್ನು ಅರ್ಥಮಾಡಿಕೊಂಡವರು ಫೋಟೋಗ್ರಾಫಿಯಲ್ಲಿ ಪರಿಣಿತರಾಗುತ್ತಾರೆ. ಒಂದು ಚಿತ್ರ ಸಾವಿರ ಪದಗಳಿಗೆ ಸಮಾನವೆಂದು ಹೇಳಲಾಗುತ್ತದೆ. ಫೋಟೋಗ್ರಾಫರ್‌ಗಳು ಸಮಾಜದಲ್ಲಿನ ಸಮಸ್ಯೆಗಳಾದ ಪ್ರವಾಹ, ಭೂಕಂಪ ಮುಂತಾದ ವಿಷಯಗಳನ್ನು ಫೋಟೋಗ್ರಾಫಿ ಮೂಲಕ ಜನರು ಮತ್ತು ಸರ್ಕಾರದ ಗಮನಕ್ಕೆ ತರುವ ಮಹತ್ವದ ಪಾತ್ರ ವಹಿಸುತ್ತಾರೆ. ಸುದ್ದಿ ವಾಹಿನಿಗಳಲ್ಲಿ ಬಳಸುವ ವೀಡಿಯೋಗ್ರಾಫಿ ಮತ್ತು ಫೋಟೋಗಳು ಅತ್ಯಂತ ಮೌಲ್ಯಯುತವಾಗಿರುತ್ತವೆ ಎಂದರು.
ಇದೇ ಸಂದರ್ಭದಲ್ಲಿ “ಉದಯರಶ್ಮಿ” ಕನ್ನಡ ದಿನಪತ್ರಿಕೆಯ ಸಂಪಾದಕ ಇಂದುಶೇಖರ ಮಣೂರ ಮಾತನಾಡಿ, ಫೋಟೋಗ್ರಾಫಿ ಮತ್ತು ವೀಡಿಯೋಗ್ರಾಫಿ ದೃಶ್ಯ-ವರ್ಣ ಸಂಯೋಜನೆಯ ಕಲೆಯಾಗಿವೆ. ಇಂದಿನ ಕಾರ್ಯಾಗಾರವು ನನ್ನ ಹಳೆಯ ಸಿನೆಮಾ ಮತ್ತು ಸೀರಿಯಲ್‌ಗಳ ವೀಡಿಯೋಗ್ರಾಫಿ ಅನುಭವಗಳನ್ನು ಮೆಲುಕು ಹಾಕುವಂತೆ ಮಾಡಿದೆ. ಪತ್ರಿಕೋದ್ಯಮದಲ್ಲಿ ಕಲಿಯುವಿಕೆ ನಿರಂತರ ಪ್ರಕ್ರಿಯೆ; ಕಲಿತುಕೊಂಡಷ್ಟು ಇನ್ನೂ ಕಲಿಯಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ದೈನಂದಿನ ಜೀವನದಲ್ಲಿ ಬಳಸುವ ವೀಡಿಯೋಗ್ರಾಫಿ ಕೌಶಲಗಳ ತಂತ್ರಗಳನ್ನು ಕಲಿಯುವುದು ಅತ್ಯಂತ ಮುಖ್ಯ. ಸೃಜನಶೀಲತೆಯ ಮೂಲಕ ಈ ಕೌಶಲ್ಯಗಳನ್ನು ಅರಿತುಕೊಳ್ಳಬಹುದು. ನಿರಂತರ ಕಲಿಕೆಯ ಮನೋಭಾವವನ್ನು ಬೆಳೆಸಿಕೊಂಡು, ಇಂದಿನ ಕಾರ್ಯಾಗಾರವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಟಿವಿ-೯ ಹಿರಿಯ ವರದಿಗಾರ ಅಶೋಕ ಯಡಳ್ಳಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಉದಯರಶ್ಮಿ ಕನ್ನಡ ದಿನಪತ್ರಿಕೆಯ ಸಂಪಾದಕ ಇಂದುಶೇಖರ ಮಣೂರ ಅವರನ್ನು ವಿಭಾಗದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಸಹಾಯಕ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿನಿಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಮಹಿಳಾ ಗೀತೆೆ ಹಾಡಿದರು.
ಕಾರ್ಯಕ್ರಮದ ಸಂಯೋಜಕಿ ಡಾ.ತಹಮೀನಾ ಕೋಲಾರ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗನ್ನಾಡಿದರು. ಅತಿಥಿ ಉಪನ್ಯಾಸಕಿ ಸುಷ್ಮಾ ಪವಾರ ನಿರೂಪಿಸಿದರು. ಸಂಶೋಧನಾ ವಿದ್ಯಾರ್ಥಿನಿ ಪವಿತ್ರಾ ಕಂಬಾರ ವಂದಿಸಿದರು.

ತಾಂತ್ರಿಕ ಗೋಷ್ಠಿಗಳು
೧. ಮೊದಲನೇ ತಾಂತ್ರಿಕ ಗೋಷ್ಠಿಯಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೀಪ ಮಾತನಾಡಿ, ಆಧುನಿಕ ಛಾಯಾಗ್ರಹಣಕ್ಕೆ ಅಗತ್ಯವಾದ ಬದಲಾದ ತಂತ್ರಜ್ಞಾನ ಮತ್ತು ವಿಧಾನಗಳನ್ನು ಪರಿಚಯಿಸಿದರು. ಜೊತೆಗೆ ಫೋಕಸ್, ಎಕ್ಸ್ಪೋಝರ್, ಐಎಸ್‌ಒ, ಶಟ್ಟರ್ ಸ್ಪೀಡ್ ಮುಂತಾದ ಅಂಶಗಳ ಪ್ರಾಯೋಗಿಕ ಉಪಯೋಗಗಳನ್ನೂ ಮಾಹಿತಿ ನೀಡಿದರು. ಇದರಿಂದ ವಿದ್ಯಾರ್ಥಿನಿಯರು ತಮಗೆ ಕೈಲಾದ ಸಾಧನದಿಂದಲೂ ಉತ್ತಮ ಗುಣಮಟ್ಟದ ದೃಶ್ಯಗಳನ್ನು ಸೃಷ್ಟಿಸಲು ಸಾಧ್ಯವೆಂಬ ಆತ್ಮವಿಶ್ವಾಸ ಪಡೆದರು.
೨. ಎರಡನೇ ತಾಂತ್ರಿಕ ಗೋಷ್ಠಿಯಲ್ಲಿ ಬಾಗಲಕೋಟೆಯ ಪತ್ರಿಕಾ ಛಾಯಾಗ್ರಾಹಕ ಇಂದ್ರಕುಮಾರ ಬಿ.ಡಿ. ಮಾತನಾಡಿ, ತಮ್ಮ ಅನುಭವ ಹಂಚಿಕೊಂಡು, ಪ್ರಕೃತಿ ಛಾಯಾಗ್ರಹಣ, ಕಾರ್ಯಕ್ರಮ ಛಾಯಾಗ್ರಹಣ, ಪೋರ್ಟ್ರೆಟ್ ಫೋಟೋಗ್ರಫಿ, ನ್ಯೂಸ್ ಫೋಟೋಗ್ರಫಿ ಸೇರಿದಂತೆ ವಿವಿಧ ರೀತಿಯ ಛಾಯಾಗ್ರಹಣ ತಂತ್ರಗಳ ಕುರಿತು ವಿದ್ಯಾರ್ಥಿನಿಯರಿಗೆ ಸವಿಸ್ತಾರವಾಗಿ ತಿಳಿಸಿದರು.
- ಉತ್ತಮ ಫೋಟೊಗಾಗಿ ಬೆಳಕು, ಹಿನ್ನೆಲೆ, ವಿಷಯದ ಆಯ್ಕೆ, ಕ್ಷಣದ ಹಿಡಿತ ಮತ್ತು ಸೃಜನಾತ್ಮಕ ದೃಷ್ಟಿಕೋನದ ಮಹತ್ವವನ್ನು ವಿವರಿಸಿದರು.
೩. ಮೂರನೇ ತಾಂತ್ರಿಕ ಗೋಷ್ಠಿಯಲ್ಲಿ ತುಮಕೂರಿನ ಶ್ರೀ ಸಿದ್ದಾರ್ಥ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್‌ನ ಸಹಾಯಕ ಪ್ರಾಧ್ಯಾಪಕ ನವೀನ್ ಎನ್.ಜಿ. ಮಾತನಾಡಿ, ಅವರು ವಿದ್ಯಾರ್ಥಿನಿಯರಿಗೆ ಕ್ಯಾಮೆರಾದ ಮೂಲಭೂತ ಅಂಶಗಳಾದ ಶಾಟ್‌ಗಳ ಪ್ರಕಾರ, ಕ್ಯಾಮೆರಾ ಆಂಗಲ್‌ಗಳು, ಫ್ರೇಮಿಂಗ್, ಮೋಮೆಂಟ್‌ಗಳನ್ನು ಸರಿಯಾಗಿ ಹಿಡಿಯುವ ವಿಧಾನಗಳ ಬಗ್ಗೆ ಪ್ರಾಯೋಗಿಕವಾಗಿ ಮಾರ್ಗದರ್ಶನ ನೀಡಿದರು. ಕ್ಯಾಮೆರಾವನ್ನು ಯಾವ ಸಂದರ್ಭದಲ್ಲಿ ಹೇಗೆ ಬಳಸಬೇಕು ಮತ್ತು ದೃಶ್ಯ ಸಂವಹನದಲ್ಲಿ ಶಾಟ್‌ಗಳ ಮಹತ್ವ ಏನು ಎಂಬುದನ್ನು ಉದಾಹರಣೆಗಳ ಮೂಲಕ ಸ್ಪಷ್ಟಪಡಿಸಿದರು.

