ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಬಾಡಿಗೆ ಆಟೋ ಓಡಿಸುತ್ತಾ ಜೀವನ ಸಾಗಿಸುತ್ತಾ ಇರುವ ನಿವಾಸಿ ಬಂದೆನವಾಜ್ ಬಾಪುಲಾಲ ಬಡಕಲ್ ಎಂಬುವವರು ಶುಕ್ರವಾರ ತಮ್ಮ ಆಟೋದಲ್ಲಿ ಅಂಕಲಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಬಸವರಾಜ ಹೊಸಮನಿ ಎಂಬುವವರು ಬಿಟ್ಟು ಹೋದ ಲ್ಯಾಪಟಾಪ್ ಹಾಗೂ ಶಾಲಾ ದಾಖಲೆಗಳನ್ನು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ನಗರದಲ್ಲಿ ಬೆಳಗ್ಗೆ 8 ಕ್ಕೆ ಶಾಲಾ ಶಿಕ್ಷಕ ಹೊಸಮನಿ ಶಾಲಾ ಕ್ರೀಡಾ ಸಾಮಗ್ರಿ ಹಾಗೂ ಬಿಸಿಊಟ ತರಕಾರಿಯೊಂದಿಗೆ ಶಾಲೆಗೆ ಹೊರಟ ಸಂದರ್ಭದಲ್ಲಿ ಅವಸರದಲ್ಲಿ ಲ್ಯಾಪಟಾಪ್ ಅಟೊದಲ್ಲಿ ಬಿಟ್ಟು ಇಳಿದು ಹೋಗಿದ್ದಾರೆ. ಮಾರ್ಗ ಮಧ್ಯ ಶಿಕ್ಷಕನಿಗೆ ನೆನಪಾಗಿ ಶಾಲೆಗೆ ಅಗತ್ಯ ವಸ್ತು ತಲುಪಿಸಿ ಮರಳಿ ವಿಜಯಪುರಕ್ಕೆ ಬಂದು ಗಾಂಧಿಚೌಕ್ ಫೋಲಿಸರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬ್ಯಾಗನಲ್ಲಿನ ಶಾಲೆಗೆ ಸೇರಿದ್ದ ಪ್ರಮುಖ ದಾಖಲೆಗಳ ಬಗ್ಗೆ ಪೋಲಿಸರಿಗೆ ಮನವರಿಕೆ ಮಾಡಿದಾಗ ಬಸ್ ಸ್ಟ್ಯಾಂಡ್ ಠಾಣೆಯ ಸುಭಾಸ ಚವಾಣ ಅವರು ಸಿಸಿಟಿವಿ ಪೋಟೇಜ್ ಒದಗಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ ಅಟೊ ನಂಬರ ಸರಿಯಾಗಿ ಕಾಣಿಸದಿದ್ದರೂ, ಆಟೋದ ಗಾಜಿನ ಮೇಲಿನ ಡಿಜಾಯಿನ್ ಚಿತ್ರದೊಂದಿಗೆ ಅಟೋ ಹುಡುಕುತ್ತ ಸಹೋದರ ಮಂಜುನಾಥ ಹಾಗೂ ಶಿಕ್ಷಕ ಗಾಂಧಿ ಚೌಕನಲ್ಲಿ ಎಲ್ಲ ಅಟೋಗಳನ್ನು ಗಮನಿಸುತ್ತ ನಿಂತಿದ್ದಾರೆ. ಶಿಕ್ಷಕನನ್ನು ಕಂಡ ಆಟೋ ಚಾಲಕ ಇವರನ್ನು ಗುರ್ತಿಸಿ ಬೆಳಗ್ಗೆ ನೀವು ಲ್ಯಾಪಟಾಪ್ ಮರೆತು ಹೋಗಿದ್ದೀರಿ ಸರ್ ಎಂದು ಹೇಳಿ ತನ್ನ ಪ್ರಾಮಾಣಿಕತೆ ಮೆರೆದಿದ್ದಾನೆ. ಆಟೋ ಚಾಲಕ ಬಂದೇನವಾಜ್ ಶಿಕ್ಷಕ ಬಸವರಾಜ ಹೊಸಮನಿಯವರನ್ನು ಮನೆಗೆ ಕರೆದುಕೊಂಡು ಹೋಗಿ ಲ್ಯಾಪಟಾಪ್ ಮರಳಿ ನೀಡಿದ್ದಾರೆ. ನೀವು ಇಂದು ಬರದೇ ಇದ್ದರೂ ನಾನು ನಿಮ್ಮನ್ನು ಹುಡುಕಿ ಲ್ಯಾಪಟಾಪ್ ವಾಪಸ್ಸು ಕೊಡುತ್ತಿದೆ ಎಂದಿದ್ದಾನೆ. ಆಟೋ ಚಾಲಕನ ಪ್ರಾಮಾಣಿಕತೆಗೆ ಅವನ ಮಗಳ ಕೈಯಲ್ಲಿ ಶಿಕ್ಷಕ ₹ 1000 ಹಣ ನೀಡಿದ್ದಾರೆ.
ಈ ಹಿಂದೆ ಮಹಿಳೆಯೊಬ್ಬರು ಎರಡು ತೊಲೆ ಬಂಗಾರ ಆಟೋದಲ್ಲಿ ಬಿಟ್ಟು ಹೋಗಿದ್ದು, ಅದನ್ನು ಕೂಡಾ ಆಟೋ ಚಾಲಕ ಆ ಮಹಿಳೆಗೆ ವಾಪಸ್ಸು ನೀಡಿ ಪ್ರಾಮಾಣಿಕತೆ ಮೆರೆದಿದ್ದರು.

