ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದಲ್ಲಿ ವಿಕಲಚೇತನರ ಕುಂದುಕೊರತೆ ಸಭೆ ನಡೆಸಿ, ಅವರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಸೂಚನೆ ನೀಡಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿಕಲಚೇತನರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಕಲಚೇತನರ ಸಮಸ್ಯೆಗಳನ್ನು ಸ್ಥಳೀಯವಾಗಿ ಸ್ಪಂದಿಸಿ, ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದಲ್ಲಿ ವಿಕಲಚೇತನರ ಕುಂದುಕೊರತೆ ಸಭೆಗಳನ್ನು ನಿಯಮಿತವಾಗಿ ಆಯೋಜಿಸಿ ಅವರ ಸಮಸ್ಯೆಗೆ ಪರಿಹಾರ ಒದಗಿಸಲು ಪ್ರಯತ್ನಿಸಬೇಕು. ವಿಕಲಚೇತನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಿ ಕಚೇರಿ, ಆಸ್ಪತ್ರೆ, ಬ್ಯಾಂಕ್ ಎಟಿಎಂಗಳಲ್ಲಿ ರ‍್ಯಾಂಪ್ ಮತ್ತು ರೇಲಿಂಗ್ಸ್ ಅಳವಡಿಸುವಂತೆ ಸೂಚಿಸಲಾಯಿತು.ಜಿಲ್ಲೆಯಲ್ಲಿ ಬೆನ್ನುಹುರಿ ಅಪಘಾತಕ್ಕೆ ಒಳಗಾದ ವಿಕಲಚೇತನರಿಗೆ ಮೆಡಿಕಲ್ ಕಿಟ್ ವಿತರಿಸಲು ಅವಕಾಶವಿದ್ದು, ಅವಶ್ಯಕತೆ ಇರುವ ಹಾಗೂ ಯಾರು ಕೈಬಿಟ್ಟು ಹೋಗದಂತೆ ವೈದ್ಯಕೀಯ ಕಿಟ್‌ಗಳನ್ನು ಒದಗಿಸಬೇಕು. ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಮೆಡಿಕಲ್ ಕಿಟ್ ವಿತರಿಸಿರುವ ಮಾಹಿತಿ ವಿವರವನ್ನು ಐದು ದಿನಗಳೊಳಗಾಗಿ ನೀಡಬೇಕು ಎಂದು ಅವರು ಸೂಚಿಸಿದರು.
ಸರ್ಕಾರ ವಿಕಲಚೇತನರ ಏಳಿಗೆಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಯ ಲಾಭ ಅರ್ಹ ವಿಕಲಚೇತನರಿಗೆ ದೊರಕಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಅರ್ಹರು ಸಹ ಇಂತಹ ಯೋಜನೆಗಳ ಮಾಹಿತಿ ಪಡೆದು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸೂಚಿಸಿದ ಅವರು, ವಿಕಲಚೇತನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಅವರಿಗೆ ಮಿಸಲಿಟ್ಟ ಶೇ.೫ರಷ್ಟು ಅನುದಾನವನ್ನು ಸರ್ಕಾರದ ಮಾರ್ಗಸೂಚಿಯಂತೆ ಕ್ರಮ ವಹಿಸಬೇಕು. ಸರ್ಕಾರದ ಮಾರ್ಗಸೂಚಿಯಂತೆ ವಿಕಲಚೇತನರ ಅನುಕೂಲಕ್ಕಾಗಿ ಮೀಸಲಿಟ್ಟ ಅನುದಾನವನ್ನು ಸಮರ್ಪಕವಾಗಿ ವಿತರಣೆಯಾಗುವಂತೆ ಕ್ರಮವಹಿಸಿ ವಿಕಲಚೇತನರ ಸ್ವಾವಲಂಬಿ ಬದುಕಿಗೆ ಪ್ರೋತ್ಸಾಹ ನೀಡಬೇಕು. ಗ್ರಾಮ ಪಂಚಾಯತಿ, ಸ್ಥಳೀಯ ಸಂಸ್ಥೆಗಳು ಹಾಗೂ ಪಾಲಿಕೆ ಅನುದಾನದ ಕುರಿತ ಸಮಗ್ರ ಮಾಹಿತಿಯನ್ನು ೧೫ ದಿನಗಳೊಳಗಾಗಿ ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
೨೦೧೬ರ ಕಾಯ್ದೆಯಡಿ ಬರುವ ವಿಕಲಚೇತನರ ಕಾಯ್ದೆ ಕಾನೂನು ಕುರಿತಾಗಿ ಇರುವ ಜಾಗೃತಿಗಾಗಿ ನಾಮ ಫಲಕಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಬೇಕು. ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿರುವ ವಿವಿಧ ಯೋಜನೆಗಳಡಿ ಅರ್ಹ ವಿಕಲಚೇತನರು ಅರ್ಜಿ ಸಲ್ಲಿಸಿದ್ದ ಸಂದರ್ಭದಲ್ಲಿ ಮೊದಲಾದ್ಯತೆ ನೀಡಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ಬಯಸುವವರಿಗೆ ಸ್ಥಳೀಯವಾಗಿ ಜಾಬ್ ಕಾರ್ಡ್ ಮಾಡಿ, ನಿಯಮನುಸಾರ ಉದ್ಯೋಗ ನೀಡಲು ಕ್ರಮವಹಿಸಬೇಕು ಎಂದು ಸಂಬಂಧಿಸಿ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.
೧೫ನೇ ಹಣಕಾಸು ಯೋಜನೆಯಡಿ ಸಾಮೂಹಿಕ ಫಲಾನುಭವಿಗಳ ಆಯ್ಕೆಗೆ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ವೈಯಕ್ತಿಕ ಫಲಾನುಭವಿಗಳ ಆಯ್ಕೆಗೆ ಕುಂದುಕೊರತೆ ಸಭೆಯಲ್ಲಿ ವಿಕಲಚೇತನರು ಮನವಿ ಮಾಡಿದ್ದು, ಇದರ ಸಾಧ್ಯತೆಗಳನ್ನು ಪರಿಶೀಲಿಸಿ ಮಾಹಿತಿ ನೀಡಿ ಎಂದು ಅವರು ಹೇಳಿದರು.
ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ನಲ್ಲಿ ವಿಕಲಚೇತನರಿಗೆ ನಿಗದಿಪಡಿಸಿರುವ ಆಸನಗಳನ್ನು ಅವರಿಗೆ ಬಳಕೆಯಾಗುವಂತೆ ನೋಡಿಕೊಳ್ಳಲು ನಿರ್ವಾಹಕರಿಗೆ ಸುತ್ತೋಲೆ ಹೊರಡಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಂಚಾಯತ ಮಟ್ಟದಲ್ಲಿ ಜಾರಿಯಾಗುವ ವಸತಿ ಯೋಜನೆಗಳಲ್ಲಿ ವಸತಿರಹಿತ ಅರ್ಹ ವಿಕಲಚೇತನರನ್ನು ಪರಿಗಣಿಸಬೇಕು.ವಿಕಲಚೇತನರು ತಮ್ಮ ಕುಂದುಕೊರತೆ ಮತ್ತು ಸಮಸ್ಯೆಗಳಿದ್ದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಸ್ಥಾಪಿಸಿರುವ ಉಚಿತ ಸಹಾಯವಾಣಿ ಸಂಖ್ಯೆ : ೦೮೩೫೨-೭೯೬೦೬೦ ಸಂಖ್ಯೆಗೆ ಕರೆ ಮಾಡಿ ತಮ್ಮ ಕುಂದುಕೊರತೆ ಅಹವಾಲುಗಳನ್ನು ದಾಖಲಿಸಬಹುದಾಗಿದೆ ಎಂದು ಹೇಳಿದ ಅವರು ಸ್ವೀಕರಿಸುವ ಮಾಹಿತಿಯನ್ನು ಕ್ರೂಢೀಕರಿಸಿ ಆಯಾ ಇಲಾಖಾವಾರು ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ತಿಳಿಸಿ, ಸಮನ್ವಯದಿಂದ ವಿಕಲಚೇತನರ ಸಮಸ್ಯೆಗಳಿಗೆ ಪರಿಹಾರಕ್ಕೆ ತ್ವರಿತ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬದ್ರುದ್ದಿನ ಸೌದಾಗರ, ಆಹಾರ ಇಲಾಖೆಯ ಉಪ ನಿರ್ದೇಶಕರಾದ ವಿನಯಕುಮಾರ ಪಾಟೀಲ, ಪಾಲಿಕೆಯ ಉಪಆಯುಕ್ತ ಮಹಾವೀರ ಬೋರಣ್ಣವರ, ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ವಸೀಂ ಬಾಬಾ ಮುದ್ದೇಬಿಹಾಳ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಜಗದೀಶ ಕೆ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸೇವಾ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.

