ನಾವು – ನಮ್ಮ ಮಕ್ಕಳು(ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಕುರಿತ ಲೇಖನ ಮಾಲಿಕೆ)
ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಇದೇನಿದು! ಮಕ್ಕಳಿಗೆ ಪಾಲಕರು ಹೆದರಬೇಕೇ ಎಂದು ಸೋಜಿಗ ಪಡದಿರಿ. ಸಾಮಾನ್ಯವಾಗಿ ಮಕ್ಕಳು ತಮ್ಮ ಪಾಲಕರಿಗೆ ಹೆದರಬೇಕು ಎಂಬುದು ಲೋಕಾರೂಢಿ, ಆದರೆ ಪಾಲಕರೇ ಮಕ್ಕಳಿಗೆ ಹೆದರಬೇಕು ಎಂಬುದು ಆಧುನಿಕ ಪರಿಭಾಷೆ.
ಖಂಡಿತವಾಗಿಯೂ ಪಾಲಕರು ತಮ್ಮ ಮಕ್ಕಳಿಗೆ ಹೆದರಬೇಕು. ಯಾವ ಕಾರಣಕ್ಕಾಗಿ ಎಂಬುದನ್ನು ಹೇಳಿದರೆ ನೀವು ಕೂಡ ಈ ಮಾತುಗಳನ್ನು ಒಪ್ಪಿಕೊಳ್ಳುತ್ತೀರಿ.
ಕೆಲವೇ ವರ್ಷಗಳ ಹಿಂದೆ ನಮ್ಮ ತಂದೆ, ಚಿಕ್ಕಪ್ಪ, ದೊಡ್ಡಪ್ಪ ಮಾವ ಹೀಗೆ ದ್ವಿಚಕ್ರ ವಾಹನಗಳನ್ನು ಹೊಂದಿರುವವರು ತಲೆಗೆ ಹೆಲ್ಮೆಟ್ ಧರಿಸಿ ಸಂಚಾರಿ ನಿಯಮಗಳನ್ನು ಪಾಲಿಸುತ್ತಾ ವಾಹನಗಳನ್ನು ಚಲಾಯಿಸುತ್ತಿದ್ದರು ಎಂಬುದು ನಮಗೆ ನೆನಪಿದೆ. ಅಷ್ಟೇನೂ ವಾಹನ ದಟ್ಟಣೆ ಇಲ್ಲದ ಕಾಲದಲ್ಲಿಯೂ ಕೂಡ ಅವರು ಎಲ್ಲ ನಿಯಮಗಳನ್ನು ಪಾಲಿಸುತ್ತಿದ್ದರು. ಆದರೆ ಇಂದಿನ ವಿಪರೀತ ಸಂಚಾರ ದಟ್ಟಣೆಯ ಸಮಯದಲ್ಲಿಯೂ ಕೂಡ ನಾವು ಸಂಚಾರಿ ನಿಯಮಗಳನ್ನು ಅತ್ಯಂತ ಸುಲಭವಾಗಿ ಉಲ್ಲಂಘಿಸಿ ಮುನ್ನಡೆಯುತ್ತೇವೆ. ಸಂಚಾರ ನಿಯಮಗಳನ್ನು ಪಾಲಿಸುವ ಟ್ರಾಫಿಕ್ ಪೊಲೀಸರು ಖಳನಾಯಕರು ಎಂಬಂತೆ ವರ್ತಿಸುತ್ತೇವೆ ನಮ್ಮದೇ ಅನುಕೂಲಕ್ಕಾಗಿ ಮಾಡಿರುವ ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ನಮ್ಮ ವೈಯುಕ್ತಿಕ ಕಾಳಜಿ ಮಾಡಿಕೊಳ್ಳಲು ನಾವು ತಯಾರಿಲ್ಲ. ಕಾರಿನಲ್ಲಿ ಕುಳಿತಾಗ ಸೀಟ್ ಬೆಲ್ಟ್ ಧರಿಸಲು ಬಹಳಷ್ಟು ಜನ ಈಗಲೂ ಸಿದ್ದರಿಲ್ಲ.
ಕೇವಲ ಇಬ್ಬರು ಸವಾರರು ಬಳಸಬಹುದಾದ ದ್ವಿಚಕ್ರ ವಾಹನದಲ್ಲಿ ಮೂರಕ್ಕಿಂತ ಹೆಚ್ಚು ಜನರನ್ನು ಕುಳ್ಳಿರಿಸಿ ಕೊಂಡು ಇಂದಿನ ಪಾಲಕರು ವಾಹನ ಚಲಾಯಿಸುತ್ತಾರೆ.. ಇಂತಹವರು ತಮ್ಮ ಮಕ್ಕಳಿಗೆ ಯಾವ ರೀತಿಯ ಮೌಲ್ಯದ ಪಾಠವನ್ನು ಹೇಳಿಕೊಡುತ್ತಾರೆ. ಸಂಚಾರಿ ನಿಯಮದ ಅನುಸಾರ ಶಿರಸ್ತ್ರಾಣವನ್ನು ಕಡ್ಡಾಯವಾಗಿ ಧರಿಸಬೇಕು ಆದರೆ ನಮ್ಮ ಪಾಲಕರು ಇಲ್ಲೇ ಅರ್ಧ ಕಿಲೋಮೀಟರ್ ಹೋಗಿ ಬರುತ್ತೇನೆ ಅಷ್ಟಕ್ಕೇ ಹೆಲ್ಮೆಟ್ ಅವಶ್ಯಕತೆ ಇಲ್ಲ ಎಂದು ತಾವೇ ತೀರ್ಮಾನಿಸಿ ಸರಕಾರದ ನಿಯಮಾವಳಿಗಳಿಗೆ ಸಡ್ದು ಹೊಡೆಯುತ್ತಾರೆ. ಇನ್ನು ವರ್ತುಲ ರಸ್ತೆಗಳಲ್ಲಿ ವರ್ತುಲವನ್ನು ಸುತ್ತು ಹಾಕಿ ಎಡಕ್ಕೆ ಇಲ್ಲವೇ ಬಲಕ್ಕೆ ತಿರುಗಬೇಕಾದ ಸಮಯದಲ್ಲಿ
ವರ್ತುಲವನ್ನು ಸುತ್ತು ಹಾಕುವಲ್ಲಿ ಸಮಯವನ್ನು ವ್ಯರ್ಥ ಮಾಡುವುದು ಬೇಡ ಎಂದು ಹಾಗೆಯೇ ತಿರುಗಿಸಿಕೊಂಡು ಓಡುವ ಪಾಲಕರು ನಮ್ಮಲ್ಲಿದ್ದಾರೆ.

ಮತ್ತೆ ಕೆಲವರು ನೋ ಪಾರ್ಕಿಂಗ್ ಜಾಗದಲ್ಲಿಯೇ ವಾಹನಗಳನ್ನು ಬಿಟ್ಟು ಹೋಗುತ್ತಾರೆ.. ಹೀಗೆ ಮಾಡುವ ಮೂಲಕ ಪಾಲಕರು ತಮ್ಮ ಮಕ್ಕಳಿಗೆ ಯಾವ ಪಾಠಗಳನ್ನು, ಬದುಕಿನ ಮೌಲ್ಯಗಳನ್ನು ಕಲಿಸುತ್ತಾರೆ ಹೇಳಿ?
ಆದ್ದರಿಂದ ಪಾಲಕರೇ ನಿಮ್ಮ ಮಕ್ಕಳಿಗೆ ಹೆದರಿ ಸಂಚಾರಿ ನಿಯಮಗಳನ್ನು ಪಾಲಿಸಿ. ನಿಮ್ಮ ಮತ್ತು ನಿಮ್ಮ ಕುಟುಂಬದ ಸುರಕ್ಷತೆಗಾಗಿ ಇದು ಅತ್ಯವಶ್ಯಕ.
ಇನ್ನು ಕೆಲವು ಪಾಲಕರು ದುಷ್ಟ ಚಟಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡಿರುತ್ತಾರೆ. ನಿಮ್ಮ ಮಕ್ಕಳನ್ನು ಎತ್ತಿಕೊಂಡಾಗ ಆ ಮಕ್ಕಳು ನಿಮ್ಮ ಬಾಯಿಂದ ಹೊರಡುವ ದುರ್ನಾತವನ್ನು ಸಹಿಸದೆ ಮುಖ ಮುರಿಯುವುದನ್ನು ಪಾಲಕರು ಗಮನಿಸಲೇಬೇಕು. ಮಕ್ಕಳು ನಿಮ್ಮನ್ನು, ನಿಮ್ಮ ದುಶ್ಚಟಗಳನ್ನು ಗಮನಿಸುತ್ತಲೇ ಇರುತ್ತಾರೆ. ಪಾಲಕರೇ ನಿಮ್ಮ ಮಕ್ಕಳ ಮುಂದೆ ಅಪರಾಧಿ ಭಾವದಿಂದ ನಿಲ್ಲುವ ತಪ್ಪು ಮಾಡಬೇಡಿ.
ನಿಮ್ಮ ಮಕ್ಕಳಿಗೆ ಹೆದರಿ. ನಿಮ್ಮ ದುಶ್ಚಟಗಳಿಗೆ ಕಡಿವಾಣ ಹಾಕಿ.
ಮೂರನೆಯದಾಗಿ ಮನೆಯಲ್ಲಿ ಪಾಲಕರಾಗಿ ನಿಮ್ಮ ವರ್ತನೆ ಹೇಗಿರುತ್ತದೆ ಎಂಬುದನ್ನು ಮಕ್ಕಳು ಗಮನಿಸುತ್ತಿರುತ್ತಾರೆ. ಮನೆಯಲ್ಲಿ ನಿಮ್ಮ ಆಹಾರ ಪಾನೀಯಗಳ ನಿಯಮಿತತೆ, ನಿಮ್ಮ ಬಟ್ಟೆ ಬರೆಗಳ ಉಡುಗೆ ತೊಡುಗೆಗಳಲ್ಲಿನ ಶಿಸ್ತು, ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸ ಕಾರ್ಯಗಳಿಗೆ ತೆರಳಿ ಮರಳಿ ಮನೆಗೆ ಬರುವ ರೀತಿ ನೀತಿಗಳನ್ನು ಮಕ್ಕಳು ಗಮನಿಸುತ್ತಿರುತ್ತಾರೆ. ಊಟ ತಿಂಡಿಗಳನ್ನು ಸೇವಿಸುವಲ್ಲಿ ನೀವು ತೋರಿಸುವ ಶ್ರದ್ಧೆ, ಆರೋಗ್ಯದ ಕುರಿತು ನೀವು ವಹಿಸುವ ಕಾಳಜಿ, ಆರೋಗ್ಯವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನೀವು ಮಾಡಬಹುದಾದ ವ್ಯಾಯಾಮ ನಡಿಗೆಗಳು ಹೀಗೆ ನಿಮ್ಮ ವ್ಯಕ್ತಿತ್ವದ ಒಟ್ಟು ಮೊತ್ತ ನಿಮ್ಮ ಮಕ್ಕಳ ಮೇಲೆ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ಪಾಲಕರೇ ಮನೆಯಲ್ಲಿ ನಿಮ್ಮ ವರ್ತನೆಯ ಕುರಿತು ಕಾಳಜಿ ವಹಿಸಿ. ನಿಮ್ಮ ಬೆನ್ನ ಹಿಂದೆಯೂ ನಿಮ್ಮನ್ನು ಪರೀಕ್ಷಾತ್ಮಕ ದೃಷ್ಟಿಯಿಂದ ನೋಡುವ ಪರೀಕ್ಷಿಸುವ ಕಣ್ಣುಗಳು ಸದಾ ಇರುತ್ತದೆ ಎಂಬುದರ ಕುರಿತು ನಿಮಗೆ ಖಂಡಿತವಾಗಿಯೂ ಭಯವಿರಲಿ.
ನಿಮ್ಮ ಮಕ್ಕಳು ಹೇಗಿರಬೇಕೆಂದು ನೀವು ಬಯಸುವಿರೋ ಹಾಗೆಯೇ ನಿಮ್ಮ ಮಕ್ಕಳ ಮುಂದೆ ಪಾಲಕರಾಗಿ ನೀವು ವರ್ತಿಸಿ. ಮಕ್ಕಳ ಮುಂದೆ ನಾಯಿ ಬೆಕ್ಕುಗಳಂತೆ ಕಚ್ಚಾಡುವ, ಜಗಳವಾಡುವ, ಕೆಟ್ಟ ಮಾತುಗಳನ್ನ ಆಡುವ, ದೈಹಿಕವಾಗಿ ಹಲ್ಲೆ ಮಾಡುವ ಪಾಲಕರೇ ನಿಮ್ಮ ಮಕ್ಕಳು ಮುಂದೆ ಖಂಡಿತವಾಗಿಯೂ ನಿಮ್ಮನ್ನು ಅನುಕರಿಸುತ್ತಾರೆ ಎಂಬ ಹೆದರಿಕೆ ನಿಮಗಿರಲಿ.

ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ಸೇವಿಸುವ ಆಹಾರ ಕೇವಲ ನಮ್ಮ ಸ್ವತ್ತಲ್ಲ ಇವುಗಳನ್ನು ಸರಿಯಾಗಿ ಬಳಕೆ ಮಾಡುವ ಕರ್ತವ್ಯ ಮತ್ತು ಜವಾಬ್ದಾರಿಗಳು ನಮ್ಮವು. ಒಂದು ಅಂದಾಜಿನ ಪ್ರಕಾರ ಪ್ರತಿದಿನ ಬೆಂಗಳೂರಿನಂತಹ ಮಹಾನಗರಗಳಲ್ಲಿ ಐದು ಟನ್ ಗಿಂತಲೂ ಹೆಚ್ಚಿನ ಆಹಾರ ಪೋಲಾಗಿ ಕಸದ ತೊಟ್ಟಿಯನ್ನು ಇಲ್ಲವೇ ಚರಂಡಿಯನ್ನು ಸೇರುತ್ತದೆ.
ಆಹಾರಕ್ಕೆ ನೀಡುವ ಹಣ ನಿಮ್ಮದಾದರೂ ಆಹಾರವಾಗಿ ಬಳಕೆಯಾಗುವ ಸಂಪನ್ಮೂಲ ನಮ್ಮ ನಾಡಿನದು. ಈ ಸಂಪನ್ಮೂಲಗಳನ್ನು ಬಳಸುವ ಮತ್ತು ಉಳಿಸುವ ಹಕ್ಕು ನಮ್ಮದೇ ಹೊರತು ಪೋಲು ಮಾಡುವುದಲ್ಲ ಎಂಬ ಅರಿವು ನಮ್ಮಲ್ಲಿ ಇರಬೇಕು.
ಮನೆಯಲ್ಲಿ ಅನವಶ್ಯಕವಾಗಿ ನೀರನ್ನು ಹರಿಬಿಟ್ಟು ಫೋಲು ಮಾಡಬಾರದು. ಅನವಶ್ಯಕವಾಗಿ ಲೈಟು ಮತ್ತು ಫ್ಯಾನುಗಳನ್ನು ಹಾಕುವುದರಲ್ಲಿ ಅರ್ಥವಿಲ್ಲ. ನಾವು ಸಂಪನ್ಮೂಲಗಳನ್ನು ಉತ್ಪಾದಿಸುವುದಿಲ್ಲ ಆದ್ದರಿಂದ ಅವುಗಳನ್ನು ಪೋಲು ಮಾಡುವ ಅಧಿಕಾರವೂ ನಮಗಿಲ್ಲ.
ಇನ್ನು ಮಕ್ಕಳನ್ನು ಹೊರಗೆ ಸುತ್ತಾಡಲು ಕರೆದೊಯ್ದಾಗ ಅವರಿಗೆ ಹಸಿವಾದಾಗ ತಿನ್ನಲು ಕೊಡುವ ಬಿಸ್ಕತ್ತಿನ ಪೊಟ್ಟಣವನ್ನಾಗಲಿ ಚಿಪ್ಸ್ ನ ಪ್ಯಾಕೆಟ ಇರಲಿ ಅದನ್ನು ಎಲ್ಲಿ ಬೇಕೆಂದರಲ್ಲಿ ಎಸೆಯದೆ ಕಸದ ಬುಟ್ಟಿಯಲ್ಲಿ ಹಾಕುವ ರೂಢಿ ಮಾಡಿಕೊಳ್ಳಲೇಬೇಕು. ಹಾಗೆ ಅವುಗಳನ್ನು ಎಸೆಯಲು ಯಾವುದೇ ಕಸದ ಬುಟ್ಟಿಗಳು ದೊರೆಯದೆ ಇದ್ದ ಪಕ್ಷದಲ್ಲಿ ತಮ್ಮ ಬ್ಯಾಗುಗಳಲ್ಲಿ ತೆಗೆದು ಇಟ್ಟುಕೊಂಡು ನಂತರ ಸೂಕ್ತವಾಗಿ ವಿಲೇವಾರಿ ಮಾಡಬೇಕು.
ಅವಿದ್ಯಾವಂತರನ್ನು ಬಿಡಿ ಸಾಕಷ್ಟು ಜನ ವಿದ್ಯಾವಂತ ಪಾಲಕರು ರಸ್ತೆ ನಿಯಮಗಳನ್ನು ಪಾಲಿಸುವುದಿಲ್ಲ, ಸಾಮಾಜಿಕ ನಿಯಮಗಳನ್ನು ಗಾಳಿಗೆ ತೂರಿ ನಡೆಯುತ್ತಾರೆ. ಮುಗಿದುಹೋಗುವ ಸಂಪನ್ಮೂಲಗಳನ್ನು ಬೇಕಾಬಿಟ್ಟಿಯಾಗಿ ಬಳಸುತ್ತಾರೆ.. ಇದು ನಮ್ಮ ಬೇಜಾವಾಬ್ದಾರಿತನವನ್ನು ನಿರ್ಲಕ್ಷವನ್ನು ತೋರುತ್ತದೆ. ನಮ್ಮ ಮುಂದಿನ ಪೀಳಿಗೆಗೆ ನಾವು ಏನನ್ನಾದರೂ ಬಿಟ್ಟು ಹೋಗಬೇಕು ಎನ್ನುವುದಾದರೆ ಅದು ನಿಯಮಗಳನ್ನು ಪಾಲಿಸುವ ಮೂಲಕ ನಮ್ಮ ಸಾಮಾಜಿಕ ಜವಾಬ್ದಾರಿಯ ಪರಿಪೂರ್ಣ ವ್ಯಕ್ತಿತ್ವವುಳ್ಳ ಪಾಲಕತ್ವವನ್ನು.
ಎಲ್ಲ ನಿಯಮಗಳು ಪಾಲಿಸಲು ಸಾಧ್ಯವಾಗಿರುವಂಥವು. ಯಾವೊಂದು ನಿಯಮವನ್ನು ನಾವು ಉಲ್ಲಂಘಿಸದೆ ವೈಯಕ್ತಿಕವಾಗಿ ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ನಾಗರಿಕ ಪ್ರಜ್ಞೆಯುಳ್ಳ ವ್ಯಕ್ತಿಗಳಾಗಿ ನಮ್ಮ ನಮ್ಮ ಜವಾಬ್ದಾರಿಗಳನ್ನು ಅರಿತು ಅವುಗಳನ್ನು ಪರಿಪಾಲಿಸುವ ಮೂಲಕ ನಮ್ಮ ಮಕ್ಕಳ ಗೌರವಕ್ಕೆ ಪಾತ್ರರಾಗಬೇಕು. ಮಕ್ಕಳಿಗೆ ಆದರ್ಶ ಮಾದರಿಯಾಗಬೇಕು.
ಮನೆಯಲ್ಲಿ ಪಾಲಕರು ಜೋರಾಗಿ ಕಿರುಚಾಡದೆ ಜಗಳವಾಡದೆ ಸಾಮರಸ್ಯರಿಂದ ಬದುಕನ್ನು ಸಾಗಿಸಬೇಕು. ಪಾಲಕರ ಜೋರು ಬಾಯಿ, ಒರಟು ಮಾತುಕತೆಗಳು ಮಕ್ಕಳ ಮನಸ್ಸಿನ ಮೇಲೆ ಅಗಾಧ ಪರಿಣಾಮವನ್ನು ಬೀರುತ್ತವೆ , ಪಾಲಕರ ನಡುವಿನ ಸಂಬಂಧದ ವಿಷಮತೆ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಮಕ್ಕಳು ಆರೋಗ್ಯಕರ ವಾತಾವರಣದಲ್ಲಿ ಬೆಳೆದಾಗ ಅವರಲ್ಲಿ ಒಳ್ಳೆಯ ಸ್ನೇಹ ಭಾವ,ತಾಳ್ಮೆ ಮತ್ತು ಶ್ರದ್ದೆಗಳು ಒಡ ಮೂಡುತ್ತವೆ.
ಆದ್ದರಿಂದ ಒಳ್ಳೆಯ ನಡವಳಿಕೆಯುಳ್ಳ ನಾಗರಿಕರನ್ನು ಈ ಸಮಾಜಕ್ಕೆ ಅರ್ಪಿಸುವ ನಿಟ್ಟಿನಲ್ಲಿ ನೀವು ಮೊದಲು ಬದಲಾಗಿ ನಿಮ್ಮ ಮಕ್ಕಳಿಗೆ ಮಾದರಿ ವ್ಯಕ್ತಿಗಳಾಗಿ.

