ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿ ಬಸವನ ಬಾಗೇವಾಡಿ ಮಂಡಲ ವತಿಯಿಂದ ಈರುಳ್ಳಿ, ಹತ್ತಿ ಮತ್ತು ಮೆಕ್ಕೆಜೋಳ ಬೆಳೆಗಳಿಗೆ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರ ಪ್ರಾರಂಭ ಮಾಡಲು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ಸರ್ಕಾರಕ್ಕೆ ತಹಶೀಲ್ದಾರ ಮುಖಾಂತರ ಮನವಿಯನ್ನು ಶುಕ್ರವಾರ ಸಲ್ಲಿಸಿದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿ ಬಸವನಬಾಗೇವಾಡಿ ಮಂಡಲದಿಂದ ಪಟ್ಟಣದ ದ್ಯಾವಮ್ಮದೇವಿ ದೇವಸ್ಥಾನದಿಂದ ತಹಶೀಲ್ದಾರ ಕಚೇರಿಯವರೆಗೆ ಪಾದಯಾತ್ರೆಯ ಮೂಲಕ ತೆರಳಿ ಮನವಿ ಸಲ್ಲಿಸಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡುತ್ತಾ ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ನದಾತರ ಹಿತವನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹರಿಹಾಯ್ದರು.
ರೈತರು ಶ್ರಮವಹಿಸಿ ಬೆಳೆದ ಬೆಳೆಗಳಿಗೆ ಬೆಲೆ ಸಿಗದೆ ಪರದಾಡುವಂತಾಗಿದೆ, ರೈತಾಪಿ ವರ್ಗದ ಅಳಲು ಆಲಿಸಬೇಕಾದ ಸರ್ಕಾರ ಕುಂಭಕರ್ಣ ನಿದ್ರೆಗೆ ಜಾರಿದೆ, ಮೆಕ್ಕೆಜೋಳ, ಹತ್ತಿ, ಈರುಳ್ಳಿ ಸಹಿತ ಇನ್ನಿತರ ಬೆಳೆಗಳನ್ನು ಬೆಳೆದಿರುವ ರೈತರಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದ ಕಾರಣ ರೈತರ ಸ್ಥಿತಿ ಹೇಳತೀರದಾಗಿದೆ ಕೂಡಲೆ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡು ಸೂಕ್ತ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಿ.ಎಂ. ಗಣಕುಮಾರ, ಚಿನ್ನಪ್ಪ ಗಿಡ್ಡಪ್ಪಗೋಳ, ಕಲ್ಲು ಸೊನ್ನದ, ಮಾಜಿ ಪಪಂ ಅಧ್ಯಕ್ಷ ವಿರುಪಾಕ್ಷಿ ಕೋಲಕಾರ, ಮಂಜುನಾಥ ತುಂಬರಮಟ್ಟಿ, ಅಖೀಲಗೌಡ ಪಾಟೀಲ, ಜಗದೀಶ್ ಸುನಗದ, ಪ್ರಶಾಂತ ಸಂಗಳದ, ಯಮನಪ್ಪ ಮಂಟೂರ, ಇಸ್ಮಾಯಿಲ್ ತಹಸಿಲ್ದಾರ್, ಅನಿಲ್ ಬಾಟಿ ಸೇರಿದಂತೆ ಇನ್ನಿತರರು ಇದ್ದರು.

