ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ಶ್ರೀ ವಿಶ್ವ ಭಾರತಿ ವಿದ್ಯಾವರ್ಧಕ ಸಂಸ್ಥೆಯ ಶ್ರೀ ಎಸ್.ಕೆ. ಬೆಳ್ಳುಬ್ಬಿ ಪದವಿ ಪೂರ್ವ ಕಾಲೇಜು ಹಾಗೂ ಶ್ರೀ ಯಲ್ಲಮ್ಮ ದೇವಿ ಸಿಬಿಎಸ್ಇ ಶಾಲೆಯ ಸಹಯೋಗದಲ್ಲಿ ವಾರ್ಷಿಕ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು.
ಕ್ರೀಡಾಕೂಟದ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಜ್ಯೋತಿ ಬೆಳಗಿಸುವ ಮೂಲಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು.
ಕ್ರೀಡಾ ಧ್ವಜಾರೋಹಣವನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ ನೇರವೇರಿಸಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಮಾಜಿ ಸಚಿವರು, ಇಂದಿನ ಮಕ್ಕಳನ್ನು ದೈಹಿಕವಾಗಿ ಮತ್ತು ಬೌದ್ಧಿಕವಾಗಿ ಬೆಳೆಸುವಲ್ಲಿ ಪಾಲಕರ ಮತ್ತು ಶಾಲೆಗಳ ಪಾತ್ರ ಬಹಳ ದೊಡ್ಡದು ಏಕೆಂದರೆ ಉತ್ತಮ ರಾಷ್ಟ್ರಕಟ್ಟಲು ಉತ್ತಮ ಆರೋಗ್ಯವಂತ ಪ್ರಜೆಗಳು ಅಷ್ಟೇ ಮುಖ್ಯ ಎಂದು ಆರೋಗ್ಯದ ಗುಟ್ಟು ಕ್ರೀಡೆಯಲ್ಲಿ ಅಡಗಿದೆ ಆದ್ದರಿಂದ ಕ್ರೀಡೆಯಲ್ಲಿ ಎಲ್ಲಾ ಮಕ್ಕಳು ಭಾಗವಹಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಲಹೆ ನೀಡಿದರು.
ಸಾನಿಧ್ಯ ವಹಿಸಿದ ಶ್ರೀ ದಿಗಂಬರೇಶ್ವರ ಮಠದ ಶ್ರೀ ಕಲ್ಲಿನಾಥ ದೇವರು ಮಾತನಾಡಿ ಮಕ್ಕಳನ್ನು ಅಂಕಗಳಲ್ಲಿ ಅಳೆಯದೆ ಅವರು ಸಹಪಠ್ಯ ಚಟುವಟಿಕೆಗಳಾದ ಸಂಗೀತ,ಕಲೆ, ನೃತ್ಯ, ಕ್ರೀಡೆಯಲ್ಲಿ ಭಾಗವಹಿಸುವಂತೆ ಪಾಲಕರು ಗಮನಿಸಬೇಕು ಅಂದಾಗ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಶಶಿಧರ್ ದೇಸಾಯಿ, ಇಸ್ಮಾಯಿಲ್ ತಹಶೀಲ್ದಾರ. ಶಿಕ್ಷಕರಾದ ಎಸ ಎನ್ ಗಿಡ್ಡಪ್ಪಗೋಳ,ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ಶಿಕ್ಷಕಿಯರು,ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು.

